Thursday, July 31, 2014

ತುಳುನಾಡಿನ ಕೊಂಕಣ ತೀರದ ನಾಗಾರಾಧನೆ




ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ಹಾಗೂ ಕೊಂಕಣ ತೀರದಲ್ಲಿ ನಾಗನಿಗೆ ವಿಶಿಷ್ಟ ಸ್ಥಾನ ಹಾಗೂ ವಿಶೇಷ ಮಹತ್ವ ಇದೆ. ಇಲ್ಲಿ ನಾಗನನ್ನು ಕೊಲ್ಲುವುದು ಪಾಪ ಎಂಬ ನಂಬಿಕೆ ಇದೆ.

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳ ಹೆಸರು ಕೇಳಿ ಬರುತ್ತದೆ. ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು ಯಾ ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ತುಳು ನಾಡಿನಲ್ಲಿ ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ, ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತುಳುನಾಡ ಜನ ನಂಬುವ ಅಂಶವಾಗಿದೆ.

ಒಂದು ಕಾಲದಲ್ಲಿ ತುಳುನಾಡು ಕೂಡು ಕುಟುಂಬಕ್ಕೆ ಹೆಸರುವಾಸಿಯಾಯಿತ್ತು. ಈ ಕೂಡು ಕುಟುಂಬ ಅನಾದಿಕಾಲದಿಂದ ಆರಾದಿಸಿ ಬಂದಿರುವ ನಾಗನನ್ನು ಮೂಲ ನಾಗ ಅಂತಲೂ, ಆ ಸ್ಥನವನ್ನು ಸದರೀ ಕುಟುಂಬದ ಮೂಲಸ್ಥಾನ ಅಂತಲೂ ಕರೆಯಲಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಎಲ್ಲೇ ವಾಸಿಸಿದ್ದರೂ ನಾಗರ ಪಂಚಮಿಯ ದಿನ ಮೂಲಸ್ಥಾನಕ್ಕೆ ಬಂದು, ನಾಗನಿಗೆ ತಾಂಬೂಲ ಸೇವೆ, ತನು ಎರೆಯುವಿಕೆಗಳನ್ನು ನೆರವೇರಿಸುವ ವಾಡಿಕೆ ಇಂದು ಕೂಡ ಕಾಣಬಹುದು. ಇತರ ದಿನಗಳಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ, ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಭ್ರಹ್ಮ ಮಂಡಲ ಕೂಡ ಆಗಾಗ ಅಲ್ಲಿ ಇಲ್ಲಿ ನಡೆಯುವುದು ನೋಡ ಸಿಗುತ್ತದೆ.

ಪರಶುರಾಮ ಸೃಷ್ಟಿಯಲಿ ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ಒಂದುವೇಳೆ ಸತ್ತ ನಾಗರ ಹಾವು ನೋಡಿ ನೋಡದಂತೆ ಬಿಟ್ಟು ಹೋದರೆ ಆ ಪಾಪ ತಲೆ ತಲೆಮಾರಿನವರೆಗೂ ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆ ತುಳು ಹಾಗೂ ಕೊಂಕಣಿಗರದು. ದ್ರಾವೀಢರಿಂದ ನಾಗಾರಾಧನೆ ಸಾವಿರಾರು ವರ್ಷಗಳ ಹಿಂದೆ ಆರಂಭವಾತ್ತು ಅನ್ನುವ ಮಾಹಿತಿ ಇದ್ದರೂ, ತುಳುನಾಡು ಹಾಗೂ ಕೊಂಕಣ ಪ್ರದೇಶದಲ್ಲಿ ಇದು ವಿಭಿನ್ನತೆಯಿಂದ ಕೂಡಿದೆ.

ಸಮುದ್ರ ರಾಜನ ಕೈವಶವಿದ್ದ ಪಶ್ಚಿಮ ಕರಾವಳಿಯನ್ನು ಪರಶುರಾಮನು ತನ್ನ ಕೊಡಲಿಯನ್ನು ಬೀಸಿ ಎಸೆದಾಗ, ಕೊಡಲಿ ಬಿದ್ದಷ್ಟು ದೂರದ ಜಾಗವನ್ನು ಸಮುದ್ರರಾಜ ಪರಶುರಾಮನಿಗೆ ಬಿಟ್ಟುಕೊಡುತ್ತಾನೆ. ಉಪ್ಪಾಗಿದ್ದ ಈ ಪ್ರದೇಶವನ್ನು ತನ್ನೊಟ್ಟಿಗೆ ಬಂದಿದ್ದ ತನ್ನ ಹಿಂಬಾಲಕರಾದ  ಸಾರಸ್ವತರಿಗೆ ಕೃಷಿ ಕಾರ್ಯಮಾಡಿ ನೆಲೆ ನಿಲ್ಲಲು, ನಾಗ ದೇವರನ್ನು ಪ್ರಾರ್ಥಿಸಿ, ನಾಗಗಳನ್ನು ಇಲ್ಲಿಗೆ ತರಿಸಿ, ರಾಮೇಶ್ವರದಿಂದ ಅಂಕೋಲದವರೆಗೆ, ಅಲ್ಲಲ್ಲಿ ಹುತ್ತಗಳನ್ನು ನಿರ್ಮಿಸಿ, ಗೆದ್ದಲು ಹುಳುವಿನ ಸೃಷ್ಟಿಮಾಡಿ, ನಾಗಗಳ ನೆಲೆನಿಲ್ಲಿಸಿ, ವರುಣನನ್ನು ಅಕಾಲದಲ್ಲಿ ಸುರಿಸಿ, ಉಪ್ಪಾಗಿದ್ದ ಭೂಮಿಯನ್ನು ಸಿಹಿಯಾಗಿ ಪರಿವರ್ತಿಸಿ, ಕೃಷಿ ಕಾರ್ಯಕ್ಕೆ ಹಸನಾದ ಭೂಮಿಯಾಗುವಂತೆ ಮಾಡಿ, ತನ್ನೊಡನೆ ಬಂದ ಸಾರಸ್ವತರನ್ನು ನೆಲೆ ನಿಲ್ಲಿಸಿ, ಮುಂದೆ ಈ ಭಾಗವನ್ನು ಪರಶುರಾಮ ಸೃಷ್ಟಿ  ಎಂದೂ, ಕರಾವಳಿಯನ್ನು ತನ್ನ ತಾಯಿಯ ನೆನಪಿಗಾಗಿ ಕೊಂಕಣ ತೀರವೆಂಬ ( ತಾಯಿ ರೇಣುಕಾ ದೇವಿ, ಕೊಂಕಣಿ ದೇವಿ) ಹೆಸರು ರೂಢಿಗೆ ಬಂದಿದೆ ಎಂಬುದಾಗಿ ತಿಳಿಯಲಾಗುತ್ತದೆ.

ನಾಗಾರಧನೆಯಲ್ಲಿ ವೈದಿಕ ಇತ್ತೆ? ಬೇಕೇ? ಬೇಡವೇ? ಎಂಬ ಚರ್ಚೆ ನಮ್ಮ ತುಳುನಾಡಿನಲ್ಲಿ ನಡೆಯುತ್ತಲೇ ಇದೆ. ನಾಗಾರಾಧನೆಯು ಕುಟುಂಬದ ಹಿನ್ನೆಲೆಯಿಂದ ಮುಂದುವರೆಸಿಕೊಂಡು ಬಂದುದರಿಂದ ನಮ್ಮ ಮೂಲ ನಾಗ ಎಂಬ ಹೆಸರು ಚಾಲ್ತಿಯಲ್ಲಿದೆ. ಹಾಗಾಗಿ ಆಯಾ ಕುಟುಂಬದ ಯಜಮಾನನೆ ಕುಟುಂಬದ ಪರವಾಗಿ ಆರಾದಿಸುತ್ತಾನೆ. ಅದೇ ರೀತಿ ಸಾರಸ್ವತರು ವೈದಿಕರಾದುದರಿಂದ, ಅವರು ನಂಬಿಕೊಂಡು ಬಂದ ನಾಗಬನದಲ್ಲಿ ವೈದಿಕ ರೀತಿಯಲ್ಲಿಯೇ ಪೂಜೆ, ಪುರಸ್ಕಾರ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯವಾದರೂ ಇತ್ತಿಚೆಗೆ ಎಲ್ಲಾ ಮೂಲದ ನಾಗಬನದಲ್ಲಿ ವೈದಿಕ ತುಂಬಿಕೊಂಡದ್ದು ನೋಡಿದರೆ ಇದು ನಮ್ಮ ತುಳುನಾಡಿನ ಇತಿಹಾಸಕ್ಕೆ ದಕ್ಕೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ನೆಲ-ಜಲ ಉಳಿಸಿದ್ದು, ಭಯ-ಭಕುತಿ ಬೆಳೆಸಿದ್ದು, ಕುಟುಂಬ ಎಂಬ ಮನೆತನದ ಹುಟ್ಟು ಎಲ್ಲವೂ ಈ ನಾಗನಿಂದ ಎಂಬುದು ಖಂಡಿತಾ ಸತ್ಯ. ಅಂತಹ ನಾಗಾರಾಧನೆ ನಮ್ಮ ಕೊಂಕಣ ತೀರ ಹಾಗೂ ತುಳುನಾಡಿನ ಕೂಡು ಕುಟುಂಬ ಒಟ್ಟು ಮಾಡುವ ಒಂದು ಅಪೂರ್ವ ದಿನವೂ ಹೌದು.

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ಶ್ರಾವಣ ಶುಕ್ಲ ಪಂಚಮಿಯಂದು ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಶುಭವಾಗಲಿ :

ಶ್ರೀನಿವಾಸ್ ಪ್ರಭು
(ಸ್ಪೂರ್ತಿ, ಬಂಟಕಲ್ಲು)
ಶಾರ್ಜಾ, ಯು.ಎ.ಇ.
00971 567767435

Monday, July 28, 2014

ನಾನೋ ಕತೆ.


ನಾನೋ ಕತೆ 



ಐದು ದಿನದ ಈದ್ ರಜೆ ಇದೆ. ಈ ರಜೆಯಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಸಸಲ್ ಪೋಲಿಪ್ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಮಿತ್ರರಾರಿಗೂ ಗೊತ್ತಾಗಬಾರದು. ಗೊತ್ತಾದರೆ ಅವರ ರಜಾ ಮಜಾ ಹಾಳಾಗುತ್ತದೆ ಎಂದು ನಿರ್ಧರಿಸಿ, ಅಜಮಾನ್ ನಲ್ಲಿರುವ ನಮ್ಮ ಊರಿನ ತುಂಬೆ ಮೊಯಿದ್ದೀನ್ ರವರ ಜಿ.ಯಂ.ಸಿ. ಆಸ್ಪತ್ರೆಗೆ ಹೋಗಿದ್ದೆ. ಪೂರ್ವ ನಿರ್ಧಾರ ಹಾಗೂ ನಿಗದಿಯಾದಂತೆ ಬೆಳಿಗ್ಗೆ ಹತ್ತು ಘಂಟೆಗೆ ಸರ್ಜರಿ ಮುಗಿದು ವಾರ್ಡಿಗೆ ಹಾಕಿದ್ದರು. ಮೂಗಿನಿಂದ ಇನ್ನೂ ರಕ್ತ ಸೋರುತ್ತಿದೆ, ತಲೆ ಎತ್ತಲು ಆಗುವುದಿಲ್ಲ, ನನ್ನವರಾರಾದರೂ ಸಹಾಯಕ್ಕೆ ಇರುತ್ತಿದ್ದರೆ ಒಳ್ಳೆಯದಿತ್ತು ಎಂಬ ಭಾವನೆ ಬರುತ್ತಿತ್ತು. ಕ್ಷಣ ಮಾತ್ರದಲ್ಲಿ, ಛೆ ನನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ರಜೆ ಹಾಳುಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಏಳುತ್ತಿತ್ತು.

ಎಲ್ಲಾ ಪೇಶಂಟ್ ಗಳ ಹತ್ತಿರ ಜನವೋ ಜನ. ನನ್ನ ಹತ್ತಿರ ಒಂದು ನೋಣವೂ ಇರಲಿಲ್ಲ. ಏನು ನಿಮ್ಮವರಾರೂ ಇಲ್ಲಿ ಇಲ್ಲವಾ? ಅಂತ ದಾದಿ ಕೇಳಿದಾಗ ನನ್ನ ಫೋನ್ ರಿಂಗಣಿಸಿತು. ನನಗೆ ಸದ್ಯ ಮಾತನಾಡಲು ಆಗದೇ ಇದ್ದುದರಿಂದ ದಾದಿ ಫೋನ್ ಎತ್ತಿ, ಅವರಿಗೆ ಸರ್ಜರಿ ಆಗಿದೆ, ಜಿ.ಯಂ.ಸಿ. ಆಸ್ಪತ್ರೆಯಲ್ಲಿ ಬೆಡ್ ರೆಸ್ಟ್ನಲ್ಲಿದ್ದಾರೆ ಎಂದು ಹೇಳಿ ಫೋನ್ ಸ್ವಿಚ್ ಹಾಫ್ ಮಾಡಿ ಇಟ್ಟರು.

ಒಂದು ಮಂಪರು ನಿದ್ದೆ. ಕಣ್ಣು ಬಿಟ್ಟಾಗ ಬೆಡ್ಡಿನ ಸುತ್ತ ಜನ. ಕನಸು ಇರಬಹುದೆಂದುಕೊಂಡು ಮತ್ತೆ ಕಣ್ಣು ಮುಚ್ಚಿ ಮಂಪರಿಗೆ ಜಾರಿದೆ. ಡಾಕ್ಟ್ರು ನಿದ್ದೆಯ ಮಾತ್ರೆ ಕೊಟ್ಟಿರಬೇಕು. ಕಣ್ಣು ತೆರೆಯಲು ಆಗುತ್ತಿಲ್ಲ. ಆದರೂ ಗುಸು ಗುಸು ಮಾತು ಕಿವಿಗೆ ಕೇಳುತ್ತಿದೆ. ‘’ಒಂದು ಮಾತು ನಮ್ಮಲ್ಲಿ ಹೇಳಬಾರದಿತ್ತಾ?’’ ನಾವು ಯಾರಾದರೂ ಇಲ್ಲಿ ಇರುತ್ತಿದ್ದೆವಲ್ಲ. ಅದಕ್ಕೆ ಕೋರಸ್ ಬೇರೆ ಕೇಳಿದಂತಾಗುತ್ತಿತ್ತು.

ಸುಮಾರು ಸಮಯದ ನಂತರ ಸರಿಯಾಗಿ ನಿದ್ದೆ ಬಿಟ್ಟು ನೋಡುತ್ತೇನೆ, ಮಿತ್ರರ ದಂಡು ಇನ್ನೇನು ನನ್ನಲ್ಲಿ ಯುದ್ದ ಹೂಡಲು ಅಧಿಕೃತವಾಗಿ ನನ್ನೆದುರು ನಿಂತಂತಿದೆ. ಆದರೆ ಇವರ ಕೈಯಲ್ಲಿದ್ದ ಅಸ್ತ್ರಗಳೇ ಬೇರೆ. ಕೆಲವರ ಕೈಯಲ್ಲಿ ಹಾಲು, ಇನ್ನು ಕೆಲವರ ಕೈಯಲ್ಲಿ ಹಣ್ಣು! ಕೆಲವರು ಸುದ್ದಿ ಕೇಳಿ ಬಂದವರು, ಇನ್ನು ಕೆಲವರು ಸುದ್ಧಿ ಹರಡಿಸಿ ಬಂದವರು, ಮತ್ತೆ ಕೆಲವರು ಸುದ್ದಿ ತಿಳಿದು ಹೋಗದೇ ಇದ್ದರೆ ಯಾರಾದರೂ ಏನಂದಾರು? ಅಂತ ಬಂದವರು. ಇವರನ್ನೆಲ್ಲಾ ನೋಡಿ ನನ್ನ ಕಣ್ಣು ಮಂಜಾಯಿತು, ಹೇಳದೆ ಕೇಳದೆ ನನಗರಿವಿಲ್ಲದಂತೆ ಸಂತೋಷದ ಕಣ್ಣಿರಿನ ಹನಿಗಳು ಹರಿಯತೊಡಗಿದವು. ಹೃದಯ ಹಗುರವಾಯಿತು ನನಗೂ ಕೇಳುವವರು ಇದ್ದಾರೆ ಎಂಬ ಅರಿವಿನ ಹಣತೆಯ ದೀಪ ನನ್ನ ಸ್ಮೃತಿಪಟಲದಲಿ ಬೆಳಗಿತು. ಇದೇ ಅಲ್ಲವೇ ಮಾನವೀಯತೆ ಮತ್ತು ಧರ್ಮದ ವ್ಯಾಖ್ಯೆ.

ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು.

Saturday, July 26, 2014

ಶ್ರಾವಣ




ಶ್ರಾವಣ ಮಾಸ.

ಮಾಸ ಅಂದರೆ ತಿಂಗಳು ಎಂದರ್ಥ. ಮುಖ್ಯವಾಗಿ ನಮ್ಮ ದೇಶದಲ್ಲಿ ಎರಡು ರೀತಿಯ ತಿಂಗಳುಗಳನ್ನು ಲೆಕ್ಕ ಹಾಕುತ್ತಾರೆ. ಚಂದ್ರಮಾನ ಹಾಗೂ ಸೌರಮಾನ. ಈ ಎರಡು ರೀತಿಯ ತಿಂಗಳುಗಳು ಕ್ರಮವಾಗಿ;

ಚಂದ್ರಮಾನ - ಸೌರಮಾನ 
  • ಚೈತ್ರ - ಮೇಷ 
  • ವೈಶಾಖ - ವೃಷಭ 
  • ಜೇಷ್ಠ - ಮಿಥುನ 
  • ಆಷಾಢ - ಕರ್ಕಾಟಕ 
  • ಶ್ರಾವಣ - ಸಿಂಹ 
  • ಬಾದ್ರಪದ - ಕನ್ಯಾ 
  • ಅಶ್ವಯುಜ - ತುಲಾ 
  • ಕಾರ್ತೀಕ - ವೃಶ್ಚಿಕ 
  • ಮಾರ್ಗಶಿರ - ಧನು 
  • ಪೌಷ - ಮಕರ 
  • ಮಾಘ - ಕುಂಭ 
  • ಪಾಲ್ಗುನ - ಮಿನ 
ಹೀಗೆ ಯುಗಾದಿಯಿಂದ ಮುಂದೆ ಬರುವ ಐದನೇ ತಿಂಗಳೇ ಶ್ರಾವಣ ಮಾಸ. ಚಂದ್ರಮಾನದಲ್ಲಿ ಮತ್ತೆ ಎರಡು ವಿಭಾಗಗಳಾಗಿವೆ. ಮೊದಲನೆಯದು ಹುಣ್ಣಿಮೆಯಿಂದ ಹುಣ್ಣಿಮೆಯವರೆಗೆ ಹಾಗೂ ಅಮಾವಾಸ್ಯೆಯಿಂದ ಅಮಾವಾಸ್ಯೆಯವರೆಗೆ. ಉತ್ತರ ಭಾರದದಲ್ಲಿ ಕೆಲವರು ಹುಣ್ಣಿಮೆಯಿಂದ ಲೆಕ್ಕಾಚಾರ ಮಾಡುವುದರಿಂದ ದಕ್ಷಿಣ ಭಾರತಕಿಂತ ಹದಿನೈದು ದಿನ ಮೊದಲೇ ಅವರ ಶ್ರಾವಣ ಮಾಸ ಆರಂಭವಾಗುತ್ತದೆ. ಅವರು ಶ್ರಾವಣ ಸೋಮವಾರ ವೃತ ಆಚರಣೆ ಮಾಡಿದರೆ ನಾವು ಶ್ರಾವಣ ಶನಿವಾರ ಆಚರಿಸುತ್ತೇವೆ. ಇನ್ನು ದಕ್ಷಿಣದ ಸೌರ ಪದ್ದತಿಯ ಪ್ರಕಾರ ಸಿಂಹ ಸಕ್ರಮಣದಿಂದ ಸೋಣ ತಿಂಗಳು ಆಚರಿಸುವ ಪದ್ಧತಿ ಇದೆ. ಹೀಗೆ ಉತ್ತರದ ಚಂದ್ರಮಾನದವರಿಗಿಂತ ದಕ್ಷಿಣದ ಚಂದ್ರಮಾನದವರಿಗೆ ಹದಿನೈದು ದಿನ ತಡವಾಗಿ ಶ್ರಾವಣ ತಿಂಗಳು ಬಂದರೆ, ಸೌರಮಾನದವರಿಗೆ ಮತ್ತೆ ಕೆಲವು ದಿನ ಅಂದರೆ ಸಕ್ರಮಣ ಬರುವವರೆಗೆ ಕಾಯಬೇಕು. ಆಂದ್ರ, ಗೋವ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕದ ಕೆಲವು ಭಾಗ ಹಾಗೂ ತಮಿಳುನಾಡುಗಳಲ್ಲಿ ಹೆಚ್ಚಾಗಿ ಅಮಾವಾಸ್ಯೆಯಿಂದ ಅಮಾವಾಸ್ಯೆಯವರೆಗೆ ಚಂದ್ರಮಾನ ತಿಂಗಳುಗಳ ಲೆಕ್ಕಾಚಾರ ಇದ್ದರೆ, ರಾಜಸ್ಥಾನ, ಉತ್ತರ ಪ್ರದೇಶ, ಮದ್ಯಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಬಿಹಾರಗಳಲ್ಲಿ ಚಾಂದ್ರಮಾನದ ಹುಣ್ಣಿಮೆಯಿಂದ ಹುಣ್ಣಿಮೆಯವರೆಗೆ ಲೆಕ್ಕಾಚಾರವಿದೆ. ಕರ್ನಾಟಕದಲ್ಲಿ ಹೆಚ್ಚಾಗಿ ಕರಾವಳಿ ಭಾಗದ ತುಳುವರು ಮತ್ತು ಕೆರಳದ ಕೆಲವು ಪ್ರದೇಶದಲ್ಲಿ ಸೌರಮಾನ ಆಚರಣೆಯಲ್ಲಿ ಇರುವುದರಿಂದ ಇಲ್ಲಿ ಸಂಕ್ರಮಣಕ್ಕೆ ಹೆಚ್ಚಿನ ಮಹತ್ವ ಇದೆ.

.

ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು

Thursday, July 17, 2014

ರಕ್ತ ಶುದ್ಧಿಗೊಂದು ಹಿತ್ತಲ ಸಂಜೀವಿನಿ



ದಾಸವಾಳ

ಮಾನವನ ರಕ್ತ ತ್ವರಿತಗತಿಯಲ್ಲಿ ಶುದ್ಧ ಮಾಡುವ ಏಕೈಕ ಸಸ್ಯ ಸಂಜೀವಿನಿ ಅದು ನಮ್ಮ ನಿಮ್ಮ ಮನೆ ಹಿತ್ತಲಲ್ಲಿ ಖರ್ಚಿಲ್ಲದೆ ಬೆಳೆಸಿ ಬಳಸಬಹುದಾದ ದಾಸವಾಳ.ದಾಸವಾಳದಲ್ಲಿ ಹಲವು ಬಣ್ಣಗಳಿವೆ.ಅದರಲ್ಲಿ ಬಿಳಿ ದಾಸವಾಳ ಎಲ್ಲಾ ರೋಗಕ್ಕೂ ಕಾರಣವಾದ ರಕ್ತ ಮಲಿನತೆ ನಿವಾರಿಸುವ ಗುಣ ಹೊಂದಿದೆ.ದಾಸವಾಳದ  ಎಲೆ ಮತ್ತು ಹೂವಿನಲ್ಲಿ ನೂರಾರು  ಬಗೆಯ ಆರೋಗ್ಯಕರ ಗುಣವಿದೆ. ದಾಸವಾಳದ ಹೂವಿನಲ್ಲಿ anti oxidants ಗುಣ ಅಧಿಕವಿದ್ದು ಈ ಹೂವನ್ನು ಇದರ ಎಲೆಗಳನ್ನು ಬಳಸಿ ಆರೋಗ್ಯ ವೃದ್ಧಿಸಬಹುದು.

ದಾಸವಾಳದ ನಿರಂತರ ಸೇವನೆಯಿಂದ, ಹಾಗೂ ಬಳಕೆಯಿಂದ ದೇಹದ ರಕ್ತ ಶುದ್ಧಿ, ಹೊಟ್ಟು ನಿವಾರಣೆ, ಕಾನ್ಸೆರ್ ತಡೆಗಟ್ಟುವಿಕೆ, ಹೆಂಗಸರ ಮುಟ್ಟಿನ ಸಮಸ್ಯೆ ನಿವಾರಣೆ, ಶೀತ, ಕೆಮ್ಮು, ತಲೆನೋವುಗಳ ಉಪಶಮನ, ಶುಕ್ರವುದ್ದಿ, ಹೃದಯ ಸಂಬಂಧಿ ತೊದರೆ ನಿವಾರಣೆ, ಬೊಜ್ಜು ಕರಗುವಿಕೆ ಮುಂತಾದ  ಪ್ರಯೋಜನ ಪಡೆಯಬಹುದು.

ಬಳಸುವ ಸರಳ ವಿಧಾನ:

ನಾವು ನಿತ್ಯ ಮಾಡುವ ಇಡ್ಲಿ, ದೋಸೆ, ಕಡುಬು ಇತ್ಯಾದಿ ಖಾದ್ಯಕ್ಕೆ ಅಕ್ಕಿ ರುಬ್ಬುವಾಗ ಅದರಲ್ಲಿ ದಾಸವಾಳದ ಸೊಪ್ಪು, ಇದ್ದರೆ ಹೂವು ಕೂಡ ಚೆನ್ನಾಗಿ ತೊಳೆದು ಹಾಕಿ ರುಬ್ಬಿ ಇಡ್ಲಿ, ದೋಸೆ, ಕಡುಬು ಮಾಡಿ ಸೇವಿಸುವುದು ಸುಲಭ ಹಾಗೂ ಸರಳ ವಿಧಾನ.
ಎಲೆ, ಹೊವು ಯಾ ಬೇರಿನ  ಕಷಾಯ ಮಾಡಿ ಕುಡಿಯುವುದು.
ಸೊಪ್ಪು ಮತ್ತೆ ಹೂವು ಅರೆದು ತಲೆಗೆ ಹಾಕಿ ಎರಡು ಮೂರು ತಾಸು ಬಿಟ್ಟು ಮಿಯುವುದು.

ಇಂತಹ ಗಿಡ ಮೂಲಿಕೆಗಳನ್ನು ನಿರಂತರ ಬಳಸಿದರೆ ವೈದ್ಯರಿಗೆ ಚೆಲ್ಲುವ ಸಾವಿರಾರು ರೂಪಾಯಿ ಉಳಿಸಬಹುದು. ಜಮೀನಿಲ್ಲದವರಿಗೆ ಬೆಳೆಸಿ ಒದಗಿಸಲು ರೈತರಿಗೆ ಪ್ರೋತ್ಸಾಹಿಸಿ, ಆಸ್ಪತ್ರೆಗೆ ಚೆಲ್ಲುವ ಹಣದ ಒಂದಿಷ್ಟು ಪಾಲು ರೈತರಿಗೆ ಚೆಲ್ಲಿ ಅವರಿಂದ ಬೆಳೆಸಿ, ಖರೀದಿಸಿ, ಬಳಸಿ  ಆರೋಗ್ಯವಂತರಾಗಿ ಬದುಕ ಕಟ್ಟಿ ಬದುಕೋಣ.

ಶ್ರೀನಿವಾಸ್ ಪ್ರಭು
ಸ್ಪೂರ್ತಿ, ಬಂಟಕಲ್ಲು


Thursday, July 10, 2014

ದೊಡ್ಡ ಪತ್ರೆ



ದೊಡ್ಡ ಪತ್ರೆ (ಸಂಬಾರ ಬಳ್ಳಿ )

ಸಂಬಾರ ಬಳ್ಳಿ ಒಂದು ಔಷಧಿ ಗುಣವುಳ್ಳ ಬಳ್ಳಿ. ಸಾಮಾನ್ಯವಾಗಿ ಮನೆ ಹಿತ್ತಲು, ಅಂಗಳ, ಅಥವ ಪೇಟೆಗಳಲ್ಲಿ ಕುಂಡದಲ್ಲಿಯೂ ಬೆಳೆಸಬಹುದು. ಆಯುರ್ವೇದದಲ್ಲಿ ಇದನ್ನು ದೊಡ್ಡ ಪತ್ರೆ ಅಂತಲೂ  ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಕುಬಾನ್ ಒರೆಗನೋ ಅಥವಾ ಪ್ಲೆಕ್ಟ್ರಂಥಸ್ ಅಂಬೋನಿಕಸ್ (Cuban oregano or Plectranthus Amboinicus) ಎಂದು ಕರೆಯುತ್ತಾರೆ.

ಶೀತ, ವಾತ, ಪಿತ್ತ, ಕಫಾ, ನೆಗಡಿ, ತಲೆ ಭಾರ ಇತ್ಯಾದಿಗಳ ನಿವಾರಣೆಗೆ ರಾಮಬಾಣ. ಬಹು ಉಪಯೋಗಿ ಈ ಬಳ್ಳಿಯ ಎಲೆಗಳಿಂದ ಹಲವಾರು ಖಾದ್ಯವನ್ನೂ ತಯಾರಿಸಬಹುದು.

ಶೀತ, ವಾತ, ಪಿತ್ತ, ಕಫಾ, ನೆಗಡಿ, ತಲೆ ಭಾರ ಆದಾಗ, ಒಂದು ಹಿಡಿ ಸಬಾರ ಬಳ್ಳಿ ಸೊಪ್ಪು ತಂದು, ಬಾಣಲೆಯಲ್ಲಿ ಮಂದ ಉರಿಯಲ್ಲಿ ಸ್ವಲ್ಪ ಬಾಡಿಸಿ, ಕೈ ಅಂಗುಲಗಳಿಂದ  ಚೆನ್ನಾಗಿ ರುಬ್ಬಿ ಅದರ ರಸ ಮಕ್ಕಳಿಂದ ಹಿಡಿದು ಮುದುಕರವರೆಗೆ ಸೇವಿಸುವಂತೆ ಮಾಡುವುದರಿಂದ ಎಲ್ಲವೂ ಉಪಶಮನಕ್ಕೆ ಬರುತ್ತದೆ.ಅದೇ ರಸ ಒಂದು ಚಮಚದಲ್ಲಿ ಹಾಕಿ ಹದಾ ಉಗುರು ಬಿಸಿ ಮಾಡಿ ಮಕ್ಕಳ ನೆತ್ತಿಗೆ ಹಾಕುವುದರಿಂದ ಶೀತ ಜ್ವರ ಕಡಿಮೆಯಾಗುತ್ತದೆ. ಮಳೆಗಾಲದಲ್ಲಂತೂ ಇದರ ಉಪಯೋಗ ಮಾಡಲೇ ಬೇಕು.

ನಾವು ಬೇಳೆ ಚಟ್ನಿ ಮಾಡುವಂತೆ ಸಂಬಾರಬಳ್ಳಿ ಎಲೆಗಳನ್ನು ಬಾಡಿಸಿ ಚಟ್ನಿ ಮಾಡಿದರೆ ಅದು ತುಂಬಾ ರುಚಿಯಾಗಿರುತ್ತದೆ. ಇದೇ ರೀತಿ ತಂಪು ಹುಳಿ ಮಾಡಿ ಊಟದಲ್ಲಿ ಸೇವಿಸಬಹುದು. ಕೇವಲ ಒಂದಷ್ಟು ಎಲೆ, ಒಂದು ಲಿಂಬೆ ರಸ, ಹಸಿ ಮೆಣಸು, ಶುಂಟಿ, ಬೆಳ್ಳುಳ್ಳಿ, ಇತ್ಯಾದಿ ಸೇರಿಸಿ ಚೆನ್ನಾಗಿ ರುಬ್ಬಿ ಚಟ್ನಿ ಮಾಡಿ ತಂಗಳಾನ್ನ (ಫ್ರಿಜ್) ಪೆಟ್ಟಿಗೆಯಲ್ಲಿಟ್ಟು ಊಟದ ಹೊತ್ತಿಗೆ ಚಟ್ನಿಯಂತೆಯೂ ಅಥವಾ ಒಂದು ಚಮಚ ಒಂದು ಲೋಟ ಮಜ್ಜಿಗೆಯಲ್ಲಿ ಬೆರೆಸಿದಾಗ ಧಿಡೀರ್ ತಂಪು ಹುಳಿ ತಯಾರಾಗುತ್ತೆ. ಊಟಕ್ಕೂ ತುಂಬಾ ರುಚಿ ಕೊಡುತ್ತೆ ಆರೋಗ್ಯವೂ ಚೆನ್ನಾಗಿರುತ್ತೆ.

ನಾವು ಗೆಣಸು, ಬದನೆ, ಬಾಳೆ ಕಾಯಿ ಪೋಡಿ (ಭಾಜಿಯಾ) ಮಾಡಿದ ಹಾಗೆ ಸಾಂಬಾರ ಬಳ್ಳಿ ಎಲೆ ಪೋಡಿ ಮಾಡಿದರೆ ತಿನ್ನಲು ತುಂಬಾ ರುಚಿಯಾಗಿರುತ್ತೆ. ಇದು ಜೀರ್ಣಕಾರಕವೂ ಹೌದು. ಊಟದ ಹೊತ್ತಿಗೂ ಪೋಡಿ ವ್ಯಂಜನವಾಗಿ ಬಳಸಬಹುದು. ದೊಡ್ಡ ಮಟ್ಟದಲ್ಲಿ ಬೆಳೆದು ಮದುವೆ, ಮುಂಜಿ ಇತ್ಯಾದಿಗಳ ಊಟದಲ್ಲಿಯೂ ಬಳಸಬಹುದು. ಎಣ್ಣೆಯಲ್ಲಿ ಕರಿದದ್ದರಿಂದ ಮಕ್ಕಳಿಗೂ ಇಷ್ಟವಾಗುತ್ತೆ. ನಾವು ಎಲ್ಲೇ ಇದ್ದರೂ ಒಂದು ಸಂಬಾರಬಳ್ಳಿ ಗಿಡ ನಮ್ಮ ಮನೆಯಲ್ಲಿ ಇರುವಂತೆ ನೋಡಿಕೊಂಡರೆ ಉತ್ತಮ. ನಾವು ದಿನಾ ಚಹ ಮಾಡುವಾಗ ಬೇಂದ ಚಹ ಹುಡಿ ಗಾಳಿಸಿ ಬಿಸಿ ಆರಿದಾಗ ಕುಂಡಕ್ಕೆ ಹಾಕಿದರೆ ಕುಂಡದಲ್ಲಿನ ಗಿಡ ಚೆನ್ನಾಗಿ ಬೆಳೆಯುತ್ತೆ ಅದಕ್ಕೆ ಯಾವುದೇ ಗೊಬ್ಬರದ ಅಗತ್ಯ ಬರುವುದಿಲ್ಲ. ಮಳೆಗಾಲದಲ್ಲಿ ಶೀತ ಜ್ವರ ಬಂದಾಗ ನಮ್ಮೂರ ಡಾಕ್ಟ್ರ ಮಕ್ಕಳಿಗೂ ಅವರಜ್ಜಿ ಕೊಡುತ್ತಿದ್ದುದು ಸಂಬಾರ ಬಳ್ಳಿಯ ಮದ್ದೇ! ಹಿತ್ತಳಗಿಡ ಮದ್ದಲ್ಲ ಅನ್ನುವ ಮಾತೊಂದಿದೆ ಆದರೆ ಸಾಯುವ ಹೊತ್ತಿಗೆ ಸಂಜೀವಿನಿ ಹುಡುಕುವುದಕ್ಕಿಂತ, ಸಾಯುವತನಕ ಆರೋಗ್ಯವಂತರಾಗಿರಲು ಈ ಹಿತ್ತಲ ಸಂಜೀವಿನಿಯನ್ನೇ ಉಪಯೋಗಿಸೋಣ.

ಶ್ರೀನಿವಾಸ್ ಪ್ರಭು
ಸ್ಪೂರ್ತಿ, ಬಂಟಕಲ್ಲು.



Tuesday, July 1, 2014

ನೀರ ಹನಿ

ಮಳೆಗಾಲ ಬಂದಿದೆ. ಹಿಂದೆಯೂ ಬಂದಿತ್ತು ಮುಂದೆಯೂ ಬರುತ್ತದೆ. ಆದರೆ ಕತೆ ಮಳೆಯದ್ದಲ್ಲ. ಬೇಸಿಗೆಯಲ್ಲಿ ಕೊಡ ಹಿಡಿದು ಸರಕಾರದ ಮುಂದೆ ಧರಣಿಗೆ ಕುಳಿತುಕೊಳ್ಳುವ ಆದುನಿಕ ಮಾನವನ ಮೂಢತೆಯ ಮೂರ್ಖತೆ. ನಮ್ಮಲ್ಲಿ ನೂರೈವತ್ತು ಕೋಟಿ ಜನರಿದ್ದಾರೆ. ಈ ನೂರೈವತ್ತು ಕೋಟಿ ಜನರಲ್ಲಿ ಸುಮಾರು ಅರ್ಧದಷ್ಟು ಜನರು ವರುಣನು ಪುಕ್ಕಟೆಯಾಗಿ ಸುರಿದ ಮಳೆಯಿಂದ ಹಿಡಿದು ಒಂದೊಂದು ಕೊಡಪಾನ ನೀರನ್ನು ಭೂಮಿಯ ಒಳಗೆ ಸುರಿದು ಬಿಟ್ಟರೆ......, ಪ್ರತೀ ಶಾಲೆಯ ಮಕ್ಕಳು ಪ್ರತೀ ದಿನ ಮಳೆಗಾಲದಲ್ಲಿ ಒಂದೊಂದು ಕೊಡಪಾನ ನೀರನ್ನು ಭೂ ಒಡಲಿಗೆ ಸೇರಿಸುವ ಪುಣ್ಯದ ಪಾಠ ಕಲಿತು ಬಿಟ್ಟರೆ...., ಪ್ರತೀ ಪಟ್ಟಣ, ಹಳ್ಳಿಗಳಲ್ಲಿ ಹರಿದು ಹೋಗುವ ಮಳೆನೀರು ಇಳೆಗೆ ಸೇರಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡರೆ... ಖಂಡಿತಾ ಕೊಡ ಹಿಡಿದು ಸರಕಾರಿ ಬಾಗಿಲ ಮುಂದೆ ನಿಲ್ಲುವ ಪ್ರಮೇಯವೇ ಇರಲಿಕ್ಕಿಲ್ಲ. ಬದಲಾಗಿ ಇಡೀ ಪ್ರಪಂಚವೇ ನಮ್ಮತ್ತ ಕಣ್ಣು ಮಿಟಿಕಿಸಿ ನೋಡುವಂತಾಗಬಹುದು. ಕೋಟಿ ಕೋಟಿ ಹಣ ಸುರಿದು ಖಜಾನೆ ಬರಿದು ಮಾಡುವ ಬದಲು ಕೇವಲ ಶಾಲಾ ಮಕ್ಕಳಿಂದ ಹಾಗೂ ರೈತರಿಂದ ಸಹಾಯ ಧನ ಒದಗಿಸಿ ಈ ಕೈಂಕರ್ಯ ಮಾಡಿಸಬಹುದು. ರೈಲು ತಡೆ, ರಸ್ತೆ ತಡೆ, ಆ ತಡೆ, ಈ ತಡೆ  ಮಾಡುವ ಬದಲು ಹರಿಯುವ ನೀರಿನ ತಡೆ ಮಾಡಿದರೆ ಏಷ್ಟೋ ಜನರ ಗಂಟಲು ಪಸೆಯಾಗಬಹುದಲ್ಲವೇ? ನಾವು ಭಾರತೀಯರು. ಮರೆತ ಸಂಸ್ಕಾರ ಮತ್ತೊಮ್ಮೆ ಕಲಿತು ಕಲಿಸಿ ಮುಂದುವರಿಸುವ ಅಗತ್ಯತೆ ಇದೆ ಎಂದು ಭಾವಿಸುತ್ತಿಲ್ಲವೇ?