Monday, July 28, 2014

ನಾನೋ ಕತೆ.


ನಾನೋ ಕತೆ 



ಐದು ದಿನದ ಈದ್ ರಜೆ ಇದೆ. ಈ ರಜೆಯಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಸಸಲ್ ಪೋಲಿಪ್ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಮಿತ್ರರಾರಿಗೂ ಗೊತ್ತಾಗಬಾರದು. ಗೊತ್ತಾದರೆ ಅವರ ರಜಾ ಮಜಾ ಹಾಳಾಗುತ್ತದೆ ಎಂದು ನಿರ್ಧರಿಸಿ, ಅಜಮಾನ್ ನಲ್ಲಿರುವ ನಮ್ಮ ಊರಿನ ತುಂಬೆ ಮೊಯಿದ್ದೀನ್ ರವರ ಜಿ.ಯಂ.ಸಿ. ಆಸ್ಪತ್ರೆಗೆ ಹೋಗಿದ್ದೆ. ಪೂರ್ವ ನಿರ್ಧಾರ ಹಾಗೂ ನಿಗದಿಯಾದಂತೆ ಬೆಳಿಗ್ಗೆ ಹತ್ತು ಘಂಟೆಗೆ ಸರ್ಜರಿ ಮುಗಿದು ವಾರ್ಡಿಗೆ ಹಾಕಿದ್ದರು. ಮೂಗಿನಿಂದ ಇನ್ನೂ ರಕ್ತ ಸೋರುತ್ತಿದೆ, ತಲೆ ಎತ್ತಲು ಆಗುವುದಿಲ್ಲ, ನನ್ನವರಾರಾದರೂ ಸಹಾಯಕ್ಕೆ ಇರುತ್ತಿದ್ದರೆ ಒಳ್ಳೆಯದಿತ್ತು ಎಂಬ ಭಾವನೆ ಬರುತ್ತಿತ್ತು. ಕ್ಷಣ ಮಾತ್ರದಲ್ಲಿ, ಛೆ ನನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ರಜೆ ಹಾಳುಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಏಳುತ್ತಿತ್ತು.

ಎಲ್ಲಾ ಪೇಶಂಟ್ ಗಳ ಹತ್ತಿರ ಜನವೋ ಜನ. ನನ್ನ ಹತ್ತಿರ ಒಂದು ನೋಣವೂ ಇರಲಿಲ್ಲ. ಏನು ನಿಮ್ಮವರಾರೂ ಇಲ್ಲಿ ಇಲ್ಲವಾ? ಅಂತ ದಾದಿ ಕೇಳಿದಾಗ ನನ್ನ ಫೋನ್ ರಿಂಗಣಿಸಿತು. ನನಗೆ ಸದ್ಯ ಮಾತನಾಡಲು ಆಗದೇ ಇದ್ದುದರಿಂದ ದಾದಿ ಫೋನ್ ಎತ್ತಿ, ಅವರಿಗೆ ಸರ್ಜರಿ ಆಗಿದೆ, ಜಿ.ಯಂ.ಸಿ. ಆಸ್ಪತ್ರೆಯಲ್ಲಿ ಬೆಡ್ ರೆಸ್ಟ್ನಲ್ಲಿದ್ದಾರೆ ಎಂದು ಹೇಳಿ ಫೋನ್ ಸ್ವಿಚ್ ಹಾಫ್ ಮಾಡಿ ಇಟ್ಟರು.

ಒಂದು ಮಂಪರು ನಿದ್ದೆ. ಕಣ್ಣು ಬಿಟ್ಟಾಗ ಬೆಡ್ಡಿನ ಸುತ್ತ ಜನ. ಕನಸು ಇರಬಹುದೆಂದುಕೊಂಡು ಮತ್ತೆ ಕಣ್ಣು ಮುಚ್ಚಿ ಮಂಪರಿಗೆ ಜಾರಿದೆ. ಡಾಕ್ಟ್ರು ನಿದ್ದೆಯ ಮಾತ್ರೆ ಕೊಟ್ಟಿರಬೇಕು. ಕಣ್ಣು ತೆರೆಯಲು ಆಗುತ್ತಿಲ್ಲ. ಆದರೂ ಗುಸು ಗುಸು ಮಾತು ಕಿವಿಗೆ ಕೇಳುತ್ತಿದೆ. ‘’ಒಂದು ಮಾತು ನಮ್ಮಲ್ಲಿ ಹೇಳಬಾರದಿತ್ತಾ?’’ ನಾವು ಯಾರಾದರೂ ಇಲ್ಲಿ ಇರುತ್ತಿದ್ದೆವಲ್ಲ. ಅದಕ್ಕೆ ಕೋರಸ್ ಬೇರೆ ಕೇಳಿದಂತಾಗುತ್ತಿತ್ತು.

ಸುಮಾರು ಸಮಯದ ನಂತರ ಸರಿಯಾಗಿ ನಿದ್ದೆ ಬಿಟ್ಟು ನೋಡುತ್ತೇನೆ, ಮಿತ್ರರ ದಂಡು ಇನ್ನೇನು ನನ್ನಲ್ಲಿ ಯುದ್ದ ಹೂಡಲು ಅಧಿಕೃತವಾಗಿ ನನ್ನೆದುರು ನಿಂತಂತಿದೆ. ಆದರೆ ಇವರ ಕೈಯಲ್ಲಿದ್ದ ಅಸ್ತ್ರಗಳೇ ಬೇರೆ. ಕೆಲವರ ಕೈಯಲ್ಲಿ ಹಾಲು, ಇನ್ನು ಕೆಲವರ ಕೈಯಲ್ಲಿ ಹಣ್ಣು! ಕೆಲವರು ಸುದ್ದಿ ಕೇಳಿ ಬಂದವರು, ಇನ್ನು ಕೆಲವರು ಸುದ್ಧಿ ಹರಡಿಸಿ ಬಂದವರು, ಮತ್ತೆ ಕೆಲವರು ಸುದ್ದಿ ತಿಳಿದು ಹೋಗದೇ ಇದ್ದರೆ ಯಾರಾದರೂ ಏನಂದಾರು? ಅಂತ ಬಂದವರು. ಇವರನ್ನೆಲ್ಲಾ ನೋಡಿ ನನ್ನ ಕಣ್ಣು ಮಂಜಾಯಿತು, ಹೇಳದೆ ಕೇಳದೆ ನನಗರಿವಿಲ್ಲದಂತೆ ಸಂತೋಷದ ಕಣ್ಣಿರಿನ ಹನಿಗಳು ಹರಿಯತೊಡಗಿದವು. ಹೃದಯ ಹಗುರವಾಯಿತು ನನಗೂ ಕೇಳುವವರು ಇದ್ದಾರೆ ಎಂಬ ಅರಿವಿನ ಹಣತೆಯ ದೀಪ ನನ್ನ ಸ್ಮೃತಿಪಟಲದಲಿ ಬೆಳಗಿತು. ಇದೇ ಅಲ್ಲವೇ ಮಾನವೀಯತೆ ಮತ್ತು ಧರ್ಮದ ವ್ಯಾಖ್ಯೆ.

ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು.

No comments:

Post a Comment