Wednesday, October 24, 2012

ಮುಗ್ದ ನಗುವಿಗೊಂದು ಮುನ್ನುಡಿ




 
 
 
 
 
 
 
 
ಒಂದು ಮುನ್ನುಡಿ ಬರೆಯ ಹೊರಟೆನು
ಮುಗ್ದ ನಗುನಿನ ಕವನಕೆ,
ಪುಟ್ಟ ಬಾಲೆಯೋ ಪುಟ್ಟ ಬಾಲನೋ 
ಕೊಟ್ಟ ನಗುವಿನ ನೋಟಕೆ. 
 
ಕಣ್ಣ ಹೊಳಪಲಿ ಮೂಗು ಅರಳಿದೆ,
ಗಲ್ಲ ಕೊಂಚನೆ ಉಬ್ಬಿದೆ,
ತುಟಿಯ ನಗೆಯಲಿ ಹಲ್ಲು ಬೆಳಗಿದೆ,
ಕಿವಿಯು ಕೊಂಚನೆ ನಿಮಿರಿದೆ.
 
ಹಾಲು ಹಲ್ಲಿನ ಸಂದು ಗುಂದಲಿ
ಕೆಂಪು ನಾಲಿಗೆ ಇಣುಕಿದೆ,
ಕೆದರು ಕೂದಲು ಹಣೆಯ ಮೇಲಲಿ
ನಗೆಗೆ ಕಚಕುಳಿ ಇಟ್ಟಿದೆ.
 
ಚಿಗುರು ನಗುವಿನ ಮುದದ ನೋಟಕೆ
ಎನ್ನ ಹೃದಯವು ನಾಚಿದೆ,
ತುಟಿಯು ಬಯಸಿದೆ ಮುತ್ತ ಬಿತ್ತಲು
ತುಂಟ ಮಗುವಿನ ಗಲ್ಲಕೆ.
 
                              ಸ್ಪೂರ್ತಿ,
                              ಬಂಟಕಲ್ಲು.
 


                       

Tuesday, October 23, 2012

ಅಂತೆ ಕಂತೆಗಳ ಸಂತೆ.




ಈ, ಅಂತೆ ಕಂತೆಗಳ ಸಂತೆಯಲಿ,

ಭಾರೀ ಬೆಲೆ ಇದೆಯಂತೆ,

ಬೇಡಿಕೆಯೂ ಇದೆಯಂತೆ.

ಇಲ್ಲ ಸಲ್ಲದ, ಮಾತ ಮುತ್ತಿಗೆ,

ದಾರ ಪೋಣಿಸಿ ಹೆಣೆದ ಹಾರಕೆ,

ಕಟ್ಟು ಕತೆ ಪೊಟ್ಟು ಕತೆ,

ಗುಟ್ಟು ಕತೆ ಕರ್ತನಿಲ್ಲದ-

ಕಾದಂಬರಿಗೂ,

ಈ, ಅಂತೆ ಕಂತೆಗಳ ಸಂತೆಯಲಿ,

ಭಾರೀ ಗೌರವವೂ ಇದೆಯಂತೆ,

ಪ್ರಶಸ್ತಿಪುರಸ್ಕಾರವೂ,

ಪುಕ್ಕಟೆ ದೊರೆಯುವುದಂತೆ,

ಕತೆ ಕವನಗಳ ಕರ್ತೃ,

ಯಾರದರೆನಂತೆ,

ಕರ್ತೃವಿನ ಹೆಸರ ತೆಗೆದು,

ಅಲ್ಲಿ ಇಲ್ಲಿ ಅ ಆ ಇ ಈ,

ಸೇರಿಸಿದರೆ ಸಾಕು,

ಕೃತಿ ಚೌರ್ಯದಿಂದ ಮುಕ್ತಿ ಪಡೆದು,  

ಜಾಮೀನಿನಿಂದ ಜೈಲ ಹೊರಗಡೆ,

ಬಂದ ರಾಜಕೀಯ ಕೈದಿಗೆ,

ಸಿಗುವ ಎಲ್ಲಾ ರಾಜ ಮರ್ಯಾದೆಯ,

ಅನುಗ್ರಹದ ವ್ಯವಸ್ಥೆಯೂ,

ಇದೆಯಂತೆ,

ಈ, ಅಂತೆ ಕಂತೆಗಳ ಸಂತೆಯಲಿ..

                                                   ಸ್ಪೂರ್ತಿ
                                                   ಬಂಟಕಲ್ಲು

Thursday, October 18, 2012

ಕೃಷಿ - ಖುಷಿ.


                 ಕೃಷಿ - ಖುಷಿ.



              

              


               ಪಶ್ಚಿಮ ಘಟ್ಟದ ಬೆಟ್ಟದ ಬುಡದಲಿ

               ಮನೆಯನು ಮಾಡಿಹ ಓ ಗೆಳೆಯ,

               ಸುಂದರ ಹಸಿರಿನ ಒಸರಿನ ಮಣ್ಣಲಿ

               ಫಸಲನು ಬೆಳೆದಿಹ ನನ್ನ ಒಡೆಯ.


               ಗದ್ದೆಯ ಉತ್ತು ನೀ ಬೆಳೆದಿಹ ಭತ್ತದ

               ಪೈರಲಿ ತೆನೆಯದು ಮನ ಸೆಳೆವ,

               ಫಸಲಲಿ ಬರೆದಿದೆ ಹೊನ್ನಿನ ಕುಂಡಲಿ

               ಮಣ್ಣಿನ ಮಗನಿಗೆ ಭುವಿ ಹೃದಯ.

               ಬಸುರಿನ ಬಾಳೆಯ ಹಂದರದಡಿಯಲಿ

               ಬೆಳೆದಿಹೆ ಬದನೆ ಅಲಸಂದೆ,

               ಬೆಂಡೆ ತೊಂಡೆ ಕುಂಬಳ ಸೌತೆ,

               ಎಲ್ಲವ ಬೆಳೆದು ನೀ ಸುಖ ಕಂಡೆ.


               ತೆಂಕಣ ಬಿಸಿಲಿಗೆ ಬೆದರುವ ಕಂಗು

               ತೆಂಗಿನ ತೋಟದ ಮರೆಯಲಿ ಅಡಗಿ,

               ಮೆಣಸಿನ ಬಳ್ಳಿಗೆ ಮುತ್ತನು ಕೊಟ್ಟು

               ಒಡೆಯನ ಹೃದಯವ ಬೆಸೆಯುತಿವೆ.

 
               ಹಟ್ಟಿಯಲಿರುವ ಗಬ್ಬದ ಗೋವು

               ಮೆಲ್ಲುತಲಿಹುದು ಹಬ್ಬದ ಮೇವು,

               ಬದಿಯಲಿ ಬೆಳೆದಿಹ ಹುಲ್ಲಿನ ಚಾದರ

               ಕಂಡದು ಮರೆತಿದೆ ಪ್ರಸವದ ನೋವು.

 
                                                      ಸ್ಪೂರ್ತಿ,
                                                      ಬಂಟಕಲ್ಲು.

ಮುತ್ತಿಟ್ಟು ತಿಳಿಬೆಳಕು
ಅತ್ತಿತ್ತ ಹರಿಯುತ್ತ
ತೋರೈತೆ ತಳಕು

Saturday, October 6, 2012

ಏನು ಫಲ?


             ಏನು ಫಲ? 

   

               ಮುಸಲಧಾರೆಯು ಸುರಿದು,

               ನದಿಗಳು ತುಂಬಿ ತುಳುಕಿ,

               ಹರಿದರೇನು ಫಲ?

               ಸಾಗರದೊಡಲಲ್ಲದೆ,

               ತುಂಬುವುದೇ ಹೂಳು-

               ತುಂಬಿದ ಈ ಜಲಾಶಯ?



               ಬರಗಾಲ ಬಂದಾಗ,

               ನೀರಿಗಾಗಿ ಪರಸ್ಪರ,

               ಕಾದಾಡಿದರೇನು ಫಲ?

               ಇಬ್ಬರ ಜಗಳದೊಳು,

               ಸಮೂರನೇಯವನಿಗೆ,

               ಸಿಗದೇ ಫಲಾನು ಫಲ?


               ಅಕಾಲದಲಿ ಬಾನೊಳು,

               ಮೋಡ ಮುಸುಕಿ,

               ಮಳೆಯಾದರೇನು ಫಲ?

               ಸಕಾಲಿಕ ಬೆಳೆಗೆ,

               ಹಾನಿಯಾಗದೇ

               ಈ ಮರುಳು ಜಲ?



               ನಾಡು - ನುಡಿ

               ನೆಲ – ಜಲವ, ಹಾಡಿ,

               ಹೋಗಳಿದರೇನು ಫಲ?

               ಭ್ರಷ್ಟ ಮಾರ್ಗದಿ ಧಿಟ್ಟ,

               ಹೆಜ್ಜೆಯನ್ನಿಟ್ಟು, ವಂಚನೆಯನು,

               ಮಾಡಲಾರರೇ ಈ ಜನ?


                                                               ಸ್ಫೂರ್ತಿ,

                                                               ಬಂಟಕಲ್ಲು