Saturday, August 24, 2019

ಕೆಚ್ಚೆದೆಯ ನಮ್ಮ ಕನ್ನಡತಿ




ಕೆಚ್ಚೆದೆಯ ನಮ್ಮ ಕನ್ನಡತಿ
ಕಷ್ಟ ಬಂದಾಗಲೆಲ್ಲಾ ಒಂದೇ ಗ್ರಹಚಾರ ಇಲ್ಲಾ ಹಣೆ ಬರಹ ಎಂದು ತಲೆ ಮೇಲೆ ಕೈ ಇಟ್ಟು ಕುಳಿತುಕೊಳ್ಳುವವರೇ ಜಾಸ್ತಿ. ಹೀಗೆ ಕುಳಿತುಕೊಳ್ಳುವವರು ತಮ್ಮ ಹಣೆಬರಹವನ್ನು ಯಾವತ್ತೂ ಬದಲಾಯಿಸಲಾರರು. ಬ್ರಹ್ಮನಿಂದಲೂ ಅದನ್ನು ತಿದ್ದಿ ಬರೆಯಲು ಸಾದ್ಯವಿಲ್ಲ ಎಂದು ತುತ್ತೂರಿ ಊದುವ ಜನ ಸಾಕಷ್ಟು ನಮ್ಮ ಸಮಾಜದಲ್ಲಿ ಇದ್ದಾರೆ. ಈ ಹಣೆಬರಹ ಎಂಬುದರ ನೆಟ್ ವರ್ಕ್ ಬಡವರಿಂದ ಹಿಡಿದು ಶ್ರೀಮಂತರವರೆಗೂ ಹಬ್ಬಿದೆ. ಇದರ ಕೇಂದ್ರ ಬಿಂದು ಬ್ರಹ್ಮ ಅಂತಾರೆ. ಎಲ್ಲರ ಹಣೆ ಬರಹದ ಪೇಟೆಂಟ್ ಅವನ ಕೈಯಲ್ಲಿದೆ. ಈ ಚತುರ್ಮುಖ ಬ್ರಹ್ಮ ಸೃಷ್ಟಿಕರ್ತೆ ಆದಿಶಕ್ತಿ ತಾನೇ? ಹಾಗಾದರೆ ಅವಳು ಬ್ರಹ್ಮನ ಅವ್ವ. ಈ ಅವ್ವನ ಒಂದಿಷ್ಟು ಭಕುತಿಮಾಡಿ ಒಲಿಸಿಕೊಂಡರೆ, ಈ ಪೇಟೆಂಟ್ ಆಶೀರ್ವಾದದ ರೂಪದಲ್ಲಿ ಕೊಂಚ ಲೀಕ್ ಆಗಿ ನಮ್ಮ ಹಣೆ ಬರಹವನ್ನು ನಮಗೆ ಬೇಕಾದಂತೆ ತಿದ್ದಿಕೊಳ್ಳುವಂತಾಗಬಹುದು. ಹಾಗೆ ಆಶೀರ್ವಾದ ಪಡೆದು ತನ್ನ ನಾಡಿನ ಹಣೆಬರಹವನ್ನು ಬದಲಾಯಿಸಿ, ಸೈ ಅನ್ನಿಸಿಕೊಂಡವಳು ನಮ್ಮ ಅಚ್ಚ ಕನ್ನಡತಿ ಒನಕೆ ಓಬವ್ವ. ಹೌದು,
ಚಿತ್ರದುರ್ಗದ ಏಳು ಸುತ್ತಿನ ಕಲ್ಲಿನ ಕೋಟೆ ಅಂದರೆ ಮೊದಲು ನೆನಪಾಗುವುದು ಒನಕೆ ಓಬವ್ವ. ಒನಕೆ ಓಬವ್ವಳ ಸಾಹಸಗಾಥೆ ತಿಳಿಯದಿದ್ದವರಾರು? ಕನ್ನಡ ನಾಡಿನ ನಾರೀ ಶಕ್ತಿಯ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿವ ಈ ಕತೆ, ಇಂದಿನ ಯುವ ಪೀಳಿಗೆಗೆ ಒಂದು ಮಾದರಿಯಾಗಿ ನಿಲ್ಲಬೇಕಿದೆ. 18 ನೇ ಶತಮಾನದ ಸುಮಾರಿಗೆ, ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಮದಕರಿ ನಾಯಕ ಆಳುತ್ತಿದ್ದ ಏಳು ಸುತ್ತಿನ ಕಲ್ಲಿನಕೋಟೆಯನ್ನು ಸುತ್ತುವರೆಯುತ್ತದೆ. ಆಗ ಒಬ್ಬ ಮಹಿಳೆ ಕೋಟೆಯ ಕಳ್ಳ ಕಿಂಡಿಯಿಂದ ಒಳ ಹೊಗುವುದನ್ನು ಹೈದರಾಲಿ ಗಮನಿಸುತ್ತಾನೆ. ಕೂಡಲೇ ಹೈದರಾಲಿಯು ತನ್ನ ಸೈನ್ಯವನ್ನು ಆ ಕಿಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಕಾವಲುಗಾರನ ಹೆಂಡತಿಯ ಹೆಸರೇ ಓಬವ್ವ. ಅವಳು ಗಂಡನನ್ನು ಊಟಕ್ಕೆ ಕೂರಿಸಿ, ಊಟ ಬಡಿಸಿ, ನೀರು ತರಲು ಹೋಗುತ್ತಾಳೆ. ಆ ಹೊತ್ತಿಗೆ ಅಲ್ಲಿ ಹೈದರ-ಅಲಿಯ ಸೈನಿಕರು ಗುಪ್ತ ಕಿಂಡಿಯ ಮೂಲಕ ಕೋಟೆಯ ಒಳ ನುಸುಳುವದನ್ನು ಕಾಣುತ್ತಾಳೆ. ಈಗ ಅವಳು ಓಬವ್ವಳಾಗಿರುವುದಿಲ್ಲ, ಎದೆಗುಂದದೆ ಸಾಕ್ಷಾತ್ ಆದಿಶಕ್ತಿ ರೂಪ ತಾಳಿ ಹತ್ತಿರದಲ್ಲಿದ್ದ  ಒನಕೆಯನ್ನು ಕೈಯಲ್ಲಿ ಹಿಡಿದು, ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಒನಕೆಯಿಂದ ತಲೆ ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ರಾಶಿ ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದು ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತಾನೆ. ಓಬವ್ವ ಸಾಮಾನ್ಯರಂತೆ ಹಣೆಬರಹ ಸರಿಯಿಲ್ಲ ಎಂದು ಸೈನಿಕರು ಒಳನುಸುಳುವುದ ನೋಡಿ, ಸುಮ್ಮನೆ ತಲೆಮೇಲೆ ಕೈಯಿಟ್ಟು ಕುಳಿತುಕೊಳ್ಳುತ್ತಿದ್ದಾರೆ ನಿಜವಾಗಿಯೂ ಮದಕರಿನಾಯಕನ ಕೋಟೆಯ ಹಣೆ ಬರಹ ಏನಾಗುತ್ತಿತ್ತೋ. ಆದರೆ ಓಬವ್ವ ಹಾಗೆ ಸುಮ್ಮನಿರಲಿಲ್ಲ. ನಿರ್ಣಾಯಕವಾಗಿ ಚಾಕಚಕ್ಯತೆಯಿಂದ ಸಮಯಪ್ರಜ್ಞ್ಜೆಯಿಂದ ಕೋಟೆಯ ಹಣೆಬರಹ ಬದಲಾಯಿಸಿ ಬಿಡುತ್ತಾಳೆ. ಇದು ಒಂದು ನಾಡಿನ ಕತೆಯಲ್ಲ. ನಮ್ಮ ದೇಶದ ಕತೆಯೂ ಅಷ್ಟೇ, ನಮ್ಮ ಸೈನಿಕರು ಕಾಲ ಕಾಲಕ್ಕೆ ಶತ್ರು ದೇಶಗಳಿಂದ ಎದುರಾಗಬಹುದಾದ ಆಪತ್ತನ್ನು ಎದುರಿಸಿ, ತಮ್ಮಲ್ಲಿರುವ ಸಮಯಪ್ರಜ್ಞೆಯಿಂದ ದೇಶಹಿತದ ಹಣೆಬರಹ ಬರೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅದೇ ರೀತಿ ಜನ ಸಾಮಾನ್ಯರಾದ ನಾವೂ ಕೂಡ  ಕಷ್ಟ / ವಿಪತ್ತು ಬಂದಾಗ ಸುಮ್ಮನೆ ಹಣೆಬರಹಕ್ಕೆ ಹಳಿಯದೆ, ತನ್ನ ದೈವದತ್ತ ಸೂಕ್ಷ್ಮ ಬುದ್ದಿ ಯಾ ಸಮಯಪ್ರಜ್ಞೆ ಬಳಸಿ ವಿಪತ್ತಿನಿಂದ ಪಾರಾಗಲು ಕಲಿಯಬೇಕು.
ಕಾಲ ಕಾಲಕ್ಕೆ ತಮ್ಮ, ಜಲ-ನೆಲದ ಉಳಿವಿಗಾಗಿ ಹೋರಾಟಗಳು, ಯುದ್ಧಗಳು, ದಂಗೆಗಳು ನಡೆದು ಸಾವಿರಾರು ಜನರ ಮಾರಣ ಹೋಮ ನಡೆದಿವೆ. ಇವೆಲ್ಲಾ ನಮ್ಮ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅವರು ಆ ಕಾಲದಲ್ಲಿ ತಮ್ಮ ಪ್ರಾಣ ತ್ಯಾಗಮಾಡಿ, ನಮ್ಮ ನೆಲ-ಜಲ ಉಳಿಸಿದ್ದುದರಿಂದ ನಾವು ಇವತ್ತು ಹಾಯಾಗಿರಲು ಸಾಧ್ಯವಾಗಿದೆ. ಇತಿಹಾಸ ಎಂದರೆ ಇತಿಹಾಸ. ಅವುಗಳನ್ನು ಓದಿ ಅವುಗಳಲ್ಲಿ ಬರುವ ಪಾತ್ರಗಳ ಪುರರ್ವ್ಯಾಖ್ಯಾನ ಮಾಡುವುದು ಸರಿಯಲ್ಲ. ಇತ್ತಿಚೆಗೆ ರಾಜಕೀಯ ಲಾಭಕ್ಕಾಗಿ ಇಂತಾಹ ಕೆಲವು ಘಟನೆಗಳ ಇತಿಹಾಸ ಪುಟ ಬಿಡಿಸಿ, ಅಲ್ಲಿನ ಕೆಲವು ಮುಖ್ಯ ಪಾತ್ರಗಳಲ್ಲಿ ಬರುವ ವ್ಯಕ್ತಿಗಳ ಮರು ವ್ಯಾಖ್ಯಾನ ಮಾಡಿ, ಸಮಾಜದೊಳಗೆ ಹುಳಿ ಹಿಂಡುವ ಕೆಲಸ ಮಾಡುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ. ಆರೀತಿ ರಾಜಕೀಯ ವ್ಯಾಖ್ಯಾನ ಮಾಡುತ್ತಾ ಹೋದರೆ ನಾಳೆ ಓಬವ್ವಳ ಹೆಸರಿನ ಮುಂದೆಯೂ ಭಯೋದ್ಪಾದಕಿ ಎಂಬ ಹಣೆಪಟ್ಟಿ ಯಾರಾದರೂ ತೊಡಿಸಬಹುದು. ಗತಾಕಾಲದ ಚರಿತ್ರೆಯನ್ನು ಚರಿತ್ರೆಯಾಗಿಯೇ ನೋಡೋಣ. ಅದಕ್ಕೆ ಜಾತಿ, ಧರ್ಮ, ಮತ, ಪಂಥಗಳ ಹೆಸರುಗಳನ್ನು ಬೆಸೆದು, ಸ್ವಸ್ತ ಸಮಾಜಕ್ಕೆ ಹುಳಿಹಿಂಡಿ, ಸಮಾಜದಲ್ಲಿ ಅಶಾಂತಿ, ದ್ವೇಷ, ಅಸೂಯೆಯ ಬೀಜ ಬಿತ್ತಿ ಸಮಾಜ ಒಡೆಯುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದನ್ನ ನಿಲ್ಲಿಸಿ, ಸಮಾಜದಲ್ಲಿನ ಅಶಾಂತಿ, ದ್ವೇಷ, ಅಸೂಯೆ ದೂರ ಮಾಡಿ ಸಹೋದರತೆ, ಸಹಬಾಳ್ವೆಯ ಜೀವನದ ಮೂಲಕ ಆದರ್ಶ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗೋಣ. ಇದೇ ಭಾರತವನ್ನ ಮುಂದೊಂದು ದಿನ ವಿಶ್ವಗುರು ಪಟ್ಟಕ್ಕೆ ಏರಿಸುತ್ತದೆ. ದೇಶ ಕಟ್ಟುದಕ್ಕಾಗಿ ನಮ್ದೂ ಒಂದಿಷ್ಟು ಸಮಯಪ್ರಜ್ಞೆ ಉಪಯೋಗಿಸಿ, ಸದೃಢ, ಸರ್ವಶಕ್ತ ಭಾರತವನ್ನು ಕಟ್ಟುದಕ್ಕಾಗಿ ಕಂಕಣಬದ್ದರಾಗೋಣ.
ಶ್ರೀನಿವಾಸ್ ಪ್ರಭು.
(ಸ್ಪೂರ್ತಿ ಬಂಟಕಲ್ಲು,  ಉಡುಪಿ.)