Thursday, October 27, 2016

ಬಾಲ್ಯದಲಿ ನಾನು ಕಂಡ ದೀಪಾವಳಿ

ಬಾಲ್ಯದಲಿ ನಾನು ಕಂಡ ದೀಪಾವಳಿ

ನರಕ  ಚತುರ್ದಶಿ ಮುಂಚಿನ ದಿನ, ತೊಂಡೆ ಚಪ್ಪರದಡಿ ಬಿಸಿ ನೀರು ಕಾಯಿಸುವ ಹಂಡೆ ತೊಳೆದು, ಶೇಡಿ ಮಣ್ಣಿನ ರಂಗೋಲಿ ಹಾಕಿ, ಮಾವಿನ ತಳಿರು, ಗೊಂಡೆ ಹೂವಿನ ಮಾಲೆ ಹಂಡೆಯ ಮಂಡೆಗೆ ಕಟ್ಟಿ. ಹಂಡೆ ತುಂಬಾ ನೀರು ತುಂಬಿ, ಎರಡು ಪಟಾಕಿ ಬಿಟ್ಟು, ಹಸಿವಿಲ್ಲದ ಹುಸಿ ಊಟ ಮಾಡಿ, ನಿದ್ರೆ ಬಾರದಿದ್ದರೂ ಮನೆಯವರ ಕಿರಿ ಕಿರಿಗೆ ಚಾದರ ಎಳೆದು ಮಲಗಿ, ಬೆಳಕು ಹರಿಯುವುದನೇ ಮನದಲಿ ಯೋಚಿಸುತ ನಿದ್ದೆಗೆ ಶರಣಾಗಿ ಬಿಟ್ಟರೆ ಎಲ್ಲೊ ಒಂದು ಪಟಾಕಿ ಒಡೆದ ಶಬ್ದ ಕೇಳಿ ಎಚ್ಚತ್ತು, ಮನೆಯವರಿಗೂ ಸರಿಯಾಗಿ ನಿದ್ದೆ ಮಾಡಲು ಬಿಡದೆ ಬೇಗ ಎದ್ದು, ಒಂದೆರಡು ಪಟಾಕಿ ಒಡೆದು ಸಂಭ್ರಮಿಸಿ, ಹಂಡೆಯಲಿ ತುಂಬಿಟ್ಟ ನೀರು ಕಾಯಿಸಿ, ಮೈ ತುಂಬಾ ತೆಂಗಿನ ಎಣ್ಣೆ , ಅರಸಿನ ಹಚ್ಚ್ಕೊಂಡು ಬ್ರಹ್ಮ ಮುಹೂರ್ತದಲಿ ಅಭ್ಯಂಜನ ಸ್ನಾನ ಮಾಡಿ ಅಮ್ಮ ಮಾಡಿದ ಇಡ್ಲಿ ಯಾ ಮೂಡೆ  ಸಿಹಿ ತೆಂಗಿನ ಹಾಲಿನೊಡನೆ ಒಂದಷ್ಟು ತಿಂದು, ಅದರ ಮ್ಯಾಲೆ ಖಾರ ಚಟ್ನಿ ಹಾಕೊಂಡು ಹೊಟ್ಟೆ ತುಂಬಾ ತಿಂದರೆ ಮುಗಿಯಿತು ನರಕ ಚತುರ್ದಶಿ! ಬಾಲ್ಯ ಕಳೆದ ನಂತರ ನೀರು ಮೀಯುವ ಹಬ್ಬ ಅಂದರೆ, ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಆವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ನಂದನು ಅಭ್ಯಂಗ ಸ್ನಾನ ಮಾಡಿಸುತ್ತಾನೆ. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸುತ್ತಾರೆ. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಹಾಗಾಗಿ ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡಿ ದೇವರ ಪೂಜೆ ನೆರವೇರಿಸಿ ಸಿಹಿ ಊಟ ಮಾಡುತ್ತಾರೆ. ಇದು ದೀಪಾವಳಿಯ ಮೊದಲ ದಿನ  ಎಂದು ಅರ್ಥವಾಯಿತು.

ಅಮಾವಾಸ್ಯೆ ದಿನ ಬೆಳಿಗ್ಗೆ ಬೇಗ ಎದ್ದು, ಇದ್ದ ಪಟಾಕಿ ಖಾಲಿಮಾಡಿ, ಇತರ ಮಕ್ಕಳ ಒಟ್ಟಿಗೆ, ಗುಡ್ಡ ಕಾಡಿಂದ ಜಮಗ ಸೊಪ್ಪು, ಕೇಪುಳ ಹೊವ ಹೆಕ್ಕಿ ಬುಟ್ಟಿ ತುಂಬಿಸಿ ಮನೆಗೆ ತಂದು ಜಗುಲಿಯ ಮೇಲೆ ಇಟ್ಟು,, ತೆಂಗಿನ ಸೋಗೆಯ ಒಣ ದಿಂಡು (ಕೊತ್ತಲಿಗೆ) ಸೀಳಿ, ಚಿಕ್ಕ ಚಿಕ ಬೆತ್ತದ ರೀಯಿಯಲ್ಲಿ ತುಂಡು ಮಾಡಿ, ಮಡಿವಾಳರು ಕೊಟ್ಟ ಮಡಿ ಬಟ್ಟೆಯನ್ನು ಸೀಳಿ,  ಕೊತ್ತಲಿಗೆಯ ತುಂಡಿಗೆ ಸುತ್ತಿ ಎಣ್ಣೆಯಲ್ಲಿ ಅದ್ದಿ ಒಂದು ಅಡಿಕೆ ಹಾಳೆಯಲ್ಲಿ ಇಟ್ಟು ಅದನ್ನು ಜಗುಲಿಯಲ್ಲಿ ಇಟ್ಟ ಜಮಗ ಸೊಪ್ಪಿನ ಬುಟ್ಟಿಯ ಬದಿಯಲ್ಲಿ ಇಟ್ಟು, ಅಲ್ಲಿಯೇ ಬಲೀಂದ್ರ ಪೂಜೆಗೆ ಬೇಕಾಗುವ ಇತರ ಸಾಹಿತ್ಯಗಳಾದ, ತುಂಡು ಮಾಡಿದ ಅಡಿಕೆ, ಅವಲಕ್ಕಿ, ತೆಂಗಿನ ತುಂಡುಗಳು, ಇತ್ಯಾದಿ ತಯಾರಿಸಿ ಇಟ್ಟು,  ಹೊಸ ಬಟ್ಟೆ ತೊಟ್ಟು ಪೇಟೆಗೆ ಹೋಗಿ ಅಲ್ಲಿ ಇಲ್ಲಿ ಡಬ್ಬಿಯಲ್ಲಿ ಮನೆಯವರಿಗೆ ಗೊತ್ತಾಗದ ರೀತಿಯಲ್ಲಿ ಜೋಪಾನವಾಗಿ ಇಟ್ಟಿದ್ದ ಚಿಲ್ಲರೆ ದುಡ್ಡಿಂದ ಚೊಕಾಸಿ ಮಾಡಿ ಒಂದಷ್ಟು ಪಟಾಕಿ ಖರೀದಿಸಿ. ಮನೆಗೆ ತಂದು ಅದರಲ್ಲಿ ಅರ್ಧ ಮನೆಯವರಿಗೆ ಗೊತ್ತಾಗದ ಹಾಗೆ ಅಡಗಿಸಿಟ್ಟು, ಉಳಿದದ್ದನ್ನು ಚಪ್ಪರದಲ್ಲಿ ಹರಡಿ ಲೆಕ್ಕ ಹಾಕಿ, ಮತ್ತೆ ತೆವದಿಂದ ರಕ್ಷಿಸಲು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಟ್ಟು, ಊಟ ಮಾಡಿ ಮತ್ತೆ ಮಕ್ಕಳ ಒಟ್ಟಿಗೆ ಹರಾಟೆ ಕೊಚ್ಚುತ್ತಾ, ಪಟಾಕಿ ಸಿಡಿಸುತ್ತಾ, ಸಾಯಂಕಾಲವಾಗಿ ಮನೆಯಿಂದ ಬುಲಾವ್ ಬಂದಾಗಲೇ ಎಚ್ಚರವಾಗುವುದು ಗದ್ದೆಗಳಿಗೆ ದೀಪ ಇಟ್ಟು ಬಲೀಂದ್ರನನ್ನು ಕರೆಯುವ ಹೊತ್ತಾಗಿದೆ ಎಂದು. ಹೌದು ಇದು ಬಲೀಂದ್ರ ಪೂಜೆಯ ಸಡಗರ.

ಒಬ್ಬೊಬ್ಬರ ಕೈಯಲ್ಲಿ ಕೋಲು ನೆನೆ, ಸೂಟೆ, ಜಮಗ ಸೊಪ್ಪಿನ ಬುಟ್ಟಿ, ಎತ್ತಿ ಗದ್ದೆಯ ಬಳಿ ಸಾಗಿ, ಒಂದು ಕೋಲುನೆನೆ ಹಚ್ಚಿ, ಗದ್ದೆಯ ಬದಿಯಲ್ಲಿ ಊರಿ, ಮೂರು ವೀಳ್ಯದೆಲೆ, ಮೂರು ತುಂಡು ಅಡಿಕೆ, ಮೂರು ತೆಂಗಿನ ತುಂಡು, ಸ್ವಲ್ಪ ಅವಲಕ್ಕಿ ಹಾಕಿ  ದೀಪದ ಬುಡದಲ್ಲಿ ಇಟ್ಟು ಅದರ ಮೇಲೆ ಸ್ವಲ್ಪ ಜಮಗ, ಕೇಪುಳ ಹೂ ಇತ್ಯಾದಿ ಹಾಕಿ, ಓ ಬಲೀಂದ್ರ .... ಓ ಬಲೀಂದ್ರ , ಬೊಂತೆಲ್ ಮೂಜಿ ದಿನತ್ತ ಬಲಿ ದೆತೊಂದ್ ಬಲ್ತ್ ರ್ಲ ... ಕೂ .... ಎಂದು ಜೋರಾಗಿ ಕೂಗುತ್ತಾ ಮುಂದಿನ ಗದ್ದೆಗೆ ಪ್ರಯಾಣ. ಹೀಗೆ ಎಲ್ಲಾ ಗದ್ದೆಗಳಿಗೆ ದೀಪ ಇಟ್ಟು, ಮನೆಗೆ ಬಂದು, ಒಂದು ಹರಿವಾಣದಲಿ ಅಕ್ಕಿ ಹರಡಿ, ಅದರ ಮೇಲೆ ಸುತ್ತ ಒಟ್ಟು ಐದು ಬಟ್ಲಡಿಕೆ ಇಟ್ಟು, ನಡುವೆ ದೀಪ ಹಚ್ಚಿ,  ಹಟ್ಟಿಯಲ್ಲಿ ದನ ಕರು, ಕೋಣಗಳ ಎದುರು ನೆವಾಳಿಸುತ್ತಾ ” ಕಾಡ ತಪ್ಪು ತಿನೊಂದ್ ಬಲ್ಲೆ, ತೊಡ ನೀರ್ ಪರೊಂದ್ ಬಲ್ಲೆ, ಕೊಂಬುಗ್ ಲಾಂಬ್ ಕೊಡ್ಯನಮುಟ್ಟ ಬಾಳೊಂದ್ ಬ ಬಲ್ಲೆ’’ ಎಂದು ಹಾಡುತ್ತಾ, ಗೋವುಗಳಿಗೆ ತಿನ್ನಲು ಹಸಿ ಹುಲ್ಲು ಹಾಕಿ ದೀಪವನ್ನು ಮನೆಗೆ ಒಂದು ಸುತ್ತು ತಂದು ಅಡುಗೆ ಮನೆಯಲ್ಲಿ ಇಟ್ಟು ಮನೆಯವರೆಲ್ಲರೂ ಅಡ್ಡ ಬಿದ್ದು ಪ್ರಾರ್ಥನೆ ಸಲ್ಲಿಸಿ, ಮನೆಯ ಮುಂದೆ ದೀಪಗಳ ಸಾಲು ಬೆಳಗಿಸಿ, ಎಲ್ಲರೂ ಕೂಡಿ ಪಟಾಕಿ, ನಕ್ಷತ್ರ ಕಡ್ಡಿ ಇತ್ಯಾದಿಗಳ ಸುಟ್ಟು,  ಮಜಾ ಮಾಡಿದ ಮೇಲೆ ರಾತ್ರಿ ಊಟ. ಇಲ್ಲಿಗೆ ಮುಗಿಯಿತು ದೀಪಾವಳಿಯ ಎರಡನೇ ದಿನ ಬಲೀಂದ್ರ ಪೂಜೆ.

ಮತ್ತೆ ಮಲಗಿ ಕಣ್ಣಮುಚ್ಚಿದ್ರೂ ಪಟಾಕಿನೆ ಕನಸಲ್ಲಿ! ಮರುದಿನ ಪಾಡ್ಯ. ಬೇಗ ಎದ್ದು ಸ್ನಾನ ಮಾಡಿ, ಗೊಂಡೆ ಹೂವ ಕೊಯ್ದು ಹಾರ ಮಾಡಿ, ದನಗಳಿಗೆಲ್ಲ ಮೈಯ್ಯಿ ತೊಳೆಸಿ, ಶೇಡಿ ಕಲಸಿ, ದನ ಕರುಗಳ ಮೈ ಮೇಲೆ ಚಿತ್ತಾರ ಬಿಡಿಸಿ, ಹಾರ ಹಾಕಿ, ಪೂಜೆ ಮಾಡಿ, ತಿನ್ನೋಕೆ ಕಡಬು, ಪಂಚಕಜ್ಜಾಯ ಇತ್ಯಾದಿ ಕೊಟ್ಟು, ಅಕ್ಕಚ್ಚು ಇಟ್ಟು, ಆಮೇಲೆ ಹಸಿರು ಹುಲ್ಲು ಹಾಕಿದ ಮೇಲೆ ನಮಗೆ ಕಾಪಿ ತಿಂಡಿ! ನಂತರ ಮಿತ್ರರೆಲ್ಲರ ಕೂಡಿ ಪೇಟೆಗೆ ಓಟ.

ಈ ದಿನ ಹೆಚ್ಚಾಗಿ ಪೇಟೆಯಲ್ಲಿ ಅಂಗಡಿ ಪೂಜೆ ನಡೆಯುವುದರಿಂದ ಅಂಗಡಿ ಅಂಗಡಿ ಸುತ್ತಿ, ಎಲ್ಲಿ ಎಷ್ಟು ಪಟಾಕಿ ಸಿಡಿಸುತ್ತಾರೆ, ಎಷ್ಟು ದುರ್ಸು ಬಿಡುತಾರೆ, ಯಾವ ನೆಲಗುಮ್ಮ ಸಿಡಿಸುತ್ತಾರೆ, ಆಟಂ ಬಾಂಬ್ ಶಬ್ದಕ್ಕೆ ಎರಡೂ ಕಿವಿಗಳಿಗೆ ಬೆರಳು ತುರುಕಿಸುತ್ತಾ, ಜಾಗಟೆ ಕೇಳಿದ ಅಂಗಡಿಯತ್ತ ಓಡುತ್ತಾ, ಪೂಜೆ ಮುಗಿದ ಮೇಲೆ ಪಂಚಕಜ್ಜಾಯ ಪಡೆದು ತೊಟ್ಟೆಯಲ್ಲಿ ಹಾಕುತ್ತಾ, ಮುಂದಿನ ಅಂಗಡಿಯತ್ತ ಓಟ. ಹೀಗೆ ಐದಾರು ಅಂಗಡಿ ಸುತ್ತಿದರೆ ಒಂದು ತೊಟ್ಟೆ ಪಂಚಕಜ್ಜಾಯ ಖಚಿತ.
ಪಂಚಕಜ್ಜಾಯದ ತೊಟ್ಟೆಯೊಟ್ಟಿಗೆ ಮನೆ ಸೇರಿದಾಗ ಮಧ್ಯಾಹ್ನದ ಊಟ ರೆಡಿ. ಆಮೇಲೆ  ಮಕ್ಕಳ ಗುಂಪು ಸೇರಿ, ಉಳಿದ ಪಟಾಕಿ ಹೊಡ್ದು ಖುಷಿ ಪಟ್ಟು, ರಾತ್ರಿ ದೈವ ದೇವರಿಗೆ ದೀಪಾವಳಿ ಪೂಜೆ ನೈವೇದ್ಯ ಮಾಡಿ, ಎಲ್ಲಾ ಸೇರಿ ಅಂಗಳದಲ್ಲಿ ನಿಂತು ಖಾಲಿ ಬಾಟಲಿ ಇಟ್ಟು ರಾಕೆಟ್ ಹಾರಿಸಿ, ನೆಲಚಕ್ರ ಬಿಟ್ಟು, ಮಾಲೆ ಪಟಾಕಿ ಸರಕ್ಕೆ ಬೆಂಕಿ ಕೊಟ್ಟು ಉಳಿದಿದ್ದ ನಕ್ಷತ್ರ ಕಡ್ಡಿ ಹೊತ್ತಿಸಿ ಖಾಲಿ ಆದ ಬೇಜಾರಲ್ಲಿ ಕೈ ತೊಳ್ಕೊಂಡು ಹಳದಿ ಎಲೆಯ ಸಿಹಿ ಕಡಬು ತಿಂದು ಮಲ್ಕೊಂಡ್ರೆ ಹಬ್ಬ ಮುಗೀತು! ದೀಪಾವಳಿ ಮುಗಿಯಿತು! ಮತ್ತೆ ಏನಿದ್ದರೂ ಸಿಡಿಯದೇ ಉಳಿದಿದ್ದ ಪಟಾಕಿ ಹೆಕ್ಕಿ, ಅದನ್ನು ಬಿಡಿಸಿ, ಅದರೊಳಗಿನ ಮದ್ದು ಒಂದು ಕಾಗದದಲ್ಲಿ ಹಾಕಿ, ಅದನ್ನು ಗೋಲಾಕಾರದಲ್ಲಿ ಕಟ್ಟಿ, ಒಂದು ತೂತು ತೆಗೆದು, ಬತ್ತಿ ತುರುಕಿಸಿ, ಬೆಂಕಿ ಕೊಟ್ಟು ದೂರ ಓಡಿ ಹಿಂದೆ ನೋಡುವಾಗ ಅದು ಟುಸ್ ಅಂತ  ಒಡೆದರೆ ಮುಗಿಯಿತು ದೀಪಾವಳಿಯ ಸಂತಸದ ಕ್ಷಣಗಳು. 

ಹೆಚ್ಚಿನ ಯುವ ಜನರು ಇಂದು ಆಧುನಿಕ ಸೌಲಭ್ಯಗಳ ದಾಸರಾಗಿ ನಮ್ಮ ಮೂಲ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಯುವ ಜನತೆ ತನ್ನ ಬಳಗ ಸಂಬಂಧಿಕರೊಂದಿಗೆ ಬೆರೆಯುವುದು ಕಡಿಮೆಯಾಗುತ್ತಿದೆ. ವರ್ಷ ಪೂರ್ತಿ ದುಡಿಯವ ತೋಳುಗಳು ಸಾಲು ಸಾಲಾಗಿ ಬರುವ ಹಬ್ಬಗಳಿಂದ ರಜೆಯ ಮೋಜನ್ನು ಮಾತ್ರ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಕೆಲವೆಡೆ ಮಾತ್ರ ಸ್ವಲ್ಪವಾದರೂ ದೀಪಾವಳಿ ಆಚರಣೆ ಜೀವಂತಿಕೆ ಉಳಿಸಿಕೊಂಡಿವೆ. ನಗರಗಳಲ್ಲಿ ಢಾಂಬಿಕತೆಯೇ ಹೆಚ್ಚು. ಹಬ್ಬಗಳೆಂದರೆ ಇಂದಿನ ಮಕ್ಕಳು ಪಟಾಕಿ ಸಿಡಿಸುವುದಕ್ಕೆ ಮಾತ್ರ ಸೀಮಿತ ಎಂದು ಅರ್ಥ ಮಾಡಿಕೊಂಡ ಹಾಗಿದೆ. ನಮ್ಮ ಸಂಸ್ಕೃತಿ ಉಳಿಯ ಬೇಕಾದರೆ ನಾವು ಇಂತಾಹ ಆಚರಣೆಗಳನ್ನು ಜೀವಂತವಾಗಿಡಬೇಕಿದೆ .


ಶ್ರೀನಿವಾಸ್ ಪ್ರಭು