Thursday, July 31, 2014

ತುಳುನಾಡಿನ ಕೊಂಕಣ ತೀರದ ನಾಗಾರಾಧನೆ




ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ಹಾಗೂ ಕೊಂಕಣ ತೀರದಲ್ಲಿ ನಾಗನಿಗೆ ವಿಶಿಷ್ಟ ಸ್ಥಾನ ಹಾಗೂ ವಿಶೇಷ ಮಹತ್ವ ಇದೆ. ಇಲ್ಲಿ ನಾಗನನ್ನು ಕೊಲ್ಲುವುದು ಪಾಪ ಎಂಬ ನಂಬಿಕೆ ಇದೆ.

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳ ಹೆಸರು ಕೇಳಿ ಬರುತ್ತದೆ. ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು ಯಾ ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ತುಳು ನಾಡಿನಲ್ಲಿ ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ, ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತುಳುನಾಡ ಜನ ನಂಬುವ ಅಂಶವಾಗಿದೆ.

ಒಂದು ಕಾಲದಲ್ಲಿ ತುಳುನಾಡು ಕೂಡು ಕುಟುಂಬಕ್ಕೆ ಹೆಸರುವಾಸಿಯಾಯಿತ್ತು. ಈ ಕೂಡು ಕುಟುಂಬ ಅನಾದಿಕಾಲದಿಂದ ಆರಾದಿಸಿ ಬಂದಿರುವ ನಾಗನನ್ನು ಮೂಲ ನಾಗ ಅಂತಲೂ, ಆ ಸ್ಥನವನ್ನು ಸದರೀ ಕುಟುಂಬದ ಮೂಲಸ್ಥಾನ ಅಂತಲೂ ಕರೆಯಲಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಎಲ್ಲೇ ವಾಸಿಸಿದ್ದರೂ ನಾಗರ ಪಂಚಮಿಯ ದಿನ ಮೂಲಸ್ಥಾನಕ್ಕೆ ಬಂದು, ನಾಗನಿಗೆ ತಾಂಬೂಲ ಸೇವೆ, ತನು ಎರೆಯುವಿಕೆಗಳನ್ನು ನೆರವೇರಿಸುವ ವಾಡಿಕೆ ಇಂದು ಕೂಡ ಕಾಣಬಹುದು. ಇತರ ದಿನಗಳಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ, ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಭ್ರಹ್ಮ ಮಂಡಲ ಕೂಡ ಆಗಾಗ ಅಲ್ಲಿ ಇಲ್ಲಿ ನಡೆಯುವುದು ನೋಡ ಸಿಗುತ್ತದೆ.

ಪರಶುರಾಮ ಸೃಷ್ಟಿಯಲಿ ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ಒಂದುವೇಳೆ ಸತ್ತ ನಾಗರ ಹಾವು ನೋಡಿ ನೋಡದಂತೆ ಬಿಟ್ಟು ಹೋದರೆ ಆ ಪಾಪ ತಲೆ ತಲೆಮಾರಿನವರೆಗೂ ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆ ತುಳು ಹಾಗೂ ಕೊಂಕಣಿಗರದು. ದ್ರಾವೀಢರಿಂದ ನಾಗಾರಾಧನೆ ಸಾವಿರಾರು ವರ್ಷಗಳ ಹಿಂದೆ ಆರಂಭವಾತ್ತು ಅನ್ನುವ ಮಾಹಿತಿ ಇದ್ದರೂ, ತುಳುನಾಡು ಹಾಗೂ ಕೊಂಕಣ ಪ್ರದೇಶದಲ್ಲಿ ಇದು ವಿಭಿನ್ನತೆಯಿಂದ ಕೂಡಿದೆ.

ಸಮುದ್ರ ರಾಜನ ಕೈವಶವಿದ್ದ ಪಶ್ಚಿಮ ಕರಾವಳಿಯನ್ನು ಪರಶುರಾಮನು ತನ್ನ ಕೊಡಲಿಯನ್ನು ಬೀಸಿ ಎಸೆದಾಗ, ಕೊಡಲಿ ಬಿದ್ದಷ್ಟು ದೂರದ ಜಾಗವನ್ನು ಸಮುದ್ರರಾಜ ಪರಶುರಾಮನಿಗೆ ಬಿಟ್ಟುಕೊಡುತ್ತಾನೆ. ಉಪ್ಪಾಗಿದ್ದ ಈ ಪ್ರದೇಶವನ್ನು ತನ್ನೊಟ್ಟಿಗೆ ಬಂದಿದ್ದ ತನ್ನ ಹಿಂಬಾಲಕರಾದ  ಸಾರಸ್ವತರಿಗೆ ಕೃಷಿ ಕಾರ್ಯಮಾಡಿ ನೆಲೆ ನಿಲ್ಲಲು, ನಾಗ ದೇವರನ್ನು ಪ್ರಾರ್ಥಿಸಿ, ನಾಗಗಳನ್ನು ಇಲ್ಲಿಗೆ ತರಿಸಿ, ರಾಮೇಶ್ವರದಿಂದ ಅಂಕೋಲದವರೆಗೆ, ಅಲ್ಲಲ್ಲಿ ಹುತ್ತಗಳನ್ನು ನಿರ್ಮಿಸಿ, ಗೆದ್ದಲು ಹುಳುವಿನ ಸೃಷ್ಟಿಮಾಡಿ, ನಾಗಗಳ ನೆಲೆನಿಲ್ಲಿಸಿ, ವರುಣನನ್ನು ಅಕಾಲದಲ್ಲಿ ಸುರಿಸಿ, ಉಪ್ಪಾಗಿದ್ದ ಭೂಮಿಯನ್ನು ಸಿಹಿಯಾಗಿ ಪರಿವರ್ತಿಸಿ, ಕೃಷಿ ಕಾರ್ಯಕ್ಕೆ ಹಸನಾದ ಭೂಮಿಯಾಗುವಂತೆ ಮಾಡಿ, ತನ್ನೊಡನೆ ಬಂದ ಸಾರಸ್ವತರನ್ನು ನೆಲೆ ನಿಲ್ಲಿಸಿ, ಮುಂದೆ ಈ ಭಾಗವನ್ನು ಪರಶುರಾಮ ಸೃಷ್ಟಿ  ಎಂದೂ, ಕರಾವಳಿಯನ್ನು ತನ್ನ ತಾಯಿಯ ನೆನಪಿಗಾಗಿ ಕೊಂಕಣ ತೀರವೆಂಬ ( ತಾಯಿ ರೇಣುಕಾ ದೇವಿ, ಕೊಂಕಣಿ ದೇವಿ) ಹೆಸರು ರೂಢಿಗೆ ಬಂದಿದೆ ಎಂಬುದಾಗಿ ತಿಳಿಯಲಾಗುತ್ತದೆ.

ನಾಗಾರಧನೆಯಲ್ಲಿ ವೈದಿಕ ಇತ್ತೆ? ಬೇಕೇ? ಬೇಡವೇ? ಎಂಬ ಚರ್ಚೆ ನಮ್ಮ ತುಳುನಾಡಿನಲ್ಲಿ ನಡೆಯುತ್ತಲೇ ಇದೆ. ನಾಗಾರಾಧನೆಯು ಕುಟುಂಬದ ಹಿನ್ನೆಲೆಯಿಂದ ಮುಂದುವರೆಸಿಕೊಂಡು ಬಂದುದರಿಂದ ನಮ್ಮ ಮೂಲ ನಾಗ ಎಂಬ ಹೆಸರು ಚಾಲ್ತಿಯಲ್ಲಿದೆ. ಹಾಗಾಗಿ ಆಯಾ ಕುಟುಂಬದ ಯಜಮಾನನೆ ಕುಟುಂಬದ ಪರವಾಗಿ ಆರಾದಿಸುತ್ತಾನೆ. ಅದೇ ರೀತಿ ಸಾರಸ್ವತರು ವೈದಿಕರಾದುದರಿಂದ, ಅವರು ನಂಬಿಕೊಂಡು ಬಂದ ನಾಗಬನದಲ್ಲಿ ವೈದಿಕ ರೀತಿಯಲ್ಲಿಯೇ ಪೂಜೆ, ಪುರಸ್ಕಾರ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯವಾದರೂ ಇತ್ತಿಚೆಗೆ ಎಲ್ಲಾ ಮೂಲದ ನಾಗಬನದಲ್ಲಿ ವೈದಿಕ ತುಂಬಿಕೊಂಡದ್ದು ನೋಡಿದರೆ ಇದು ನಮ್ಮ ತುಳುನಾಡಿನ ಇತಿಹಾಸಕ್ಕೆ ದಕ್ಕೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ನೆಲ-ಜಲ ಉಳಿಸಿದ್ದು, ಭಯ-ಭಕುತಿ ಬೆಳೆಸಿದ್ದು, ಕುಟುಂಬ ಎಂಬ ಮನೆತನದ ಹುಟ್ಟು ಎಲ್ಲವೂ ಈ ನಾಗನಿಂದ ಎಂಬುದು ಖಂಡಿತಾ ಸತ್ಯ. ಅಂತಹ ನಾಗಾರಾಧನೆ ನಮ್ಮ ಕೊಂಕಣ ತೀರ ಹಾಗೂ ತುಳುನಾಡಿನ ಕೂಡು ಕುಟುಂಬ ಒಟ್ಟು ಮಾಡುವ ಒಂದು ಅಪೂರ್ವ ದಿನವೂ ಹೌದು.

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ಶ್ರಾವಣ ಶುಕ್ಲ ಪಂಚಮಿಯಂದು ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಶುಭವಾಗಲಿ :

ಶ್ರೀನಿವಾಸ್ ಪ್ರಭು
(ಸ್ಪೂರ್ತಿ, ಬಂಟಕಲ್ಲು)
ಶಾರ್ಜಾ, ಯು.ಎ.ಇ.
00971 567767435

2 comments:

  1. ತುಳುನಾಡಿನ ನಾಗಾರಾಧನೆಯನ್ನು ಕಣ್ಣಿಗೆವಕಟ್ಟುವಂತೆ ವಿವರಿಸಿದ್ದೀರ.

    ReplyDelete
  2. ತುಳುನಾಡಿದ ಪರಂಪರೆ, ಇತಿಹಾಸದ ಬಗ್ಗೆ ಒಂದೊಂದು ಕಡೆ ಒಂದೊಂದು ರೀತಿಯ ಮಾಹಿತಿಗಳು ಇತಿಹಾಸಗಳು ಸಿಗುತ್ತದೆ..

    ಒಳ್ಳೆಯ ವಿಷಯ ಆಯ್ದುಕೊಂಡು
    ಜಗತ್ತಿಗೆ ತುಳುನಾಡ ಸಂಸ್ಕೃತಿಯ ಒಂದು ಭಾಗವನ್ನು ತಿಳಿಯಪಡಿಸಿದ್ದಿರಿ..

    ಅಭಿನಂದನೆಗಳು ಮತ್ತು ಧನ್ಯವಾದಗಳು

    ReplyDelete