Thursday, July 10, 2014

ದೊಡ್ಡ ಪತ್ರೆ



ದೊಡ್ಡ ಪತ್ರೆ (ಸಂಬಾರ ಬಳ್ಳಿ )

ಸಂಬಾರ ಬಳ್ಳಿ ಒಂದು ಔಷಧಿ ಗುಣವುಳ್ಳ ಬಳ್ಳಿ. ಸಾಮಾನ್ಯವಾಗಿ ಮನೆ ಹಿತ್ತಲು, ಅಂಗಳ, ಅಥವ ಪೇಟೆಗಳಲ್ಲಿ ಕುಂಡದಲ್ಲಿಯೂ ಬೆಳೆಸಬಹುದು. ಆಯುರ್ವೇದದಲ್ಲಿ ಇದನ್ನು ದೊಡ್ಡ ಪತ್ರೆ ಅಂತಲೂ  ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಕುಬಾನ್ ಒರೆಗನೋ ಅಥವಾ ಪ್ಲೆಕ್ಟ್ರಂಥಸ್ ಅಂಬೋನಿಕಸ್ (Cuban oregano or Plectranthus Amboinicus) ಎಂದು ಕರೆಯುತ್ತಾರೆ.

ಶೀತ, ವಾತ, ಪಿತ್ತ, ಕಫಾ, ನೆಗಡಿ, ತಲೆ ಭಾರ ಇತ್ಯಾದಿಗಳ ನಿವಾರಣೆಗೆ ರಾಮಬಾಣ. ಬಹು ಉಪಯೋಗಿ ಈ ಬಳ್ಳಿಯ ಎಲೆಗಳಿಂದ ಹಲವಾರು ಖಾದ್ಯವನ್ನೂ ತಯಾರಿಸಬಹುದು.

ಶೀತ, ವಾತ, ಪಿತ್ತ, ಕಫಾ, ನೆಗಡಿ, ತಲೆ ಭಾರ ಆದಾಗ, ಒಂದು ಹಿಡಿ ಸಬಾರ ಬಳ್ಳಿ ಸೊಪ್ಪು ತಂದು, ಬಾಣಲೆಯಲ್ಲಿ ಮಂದ ಉರಿಯಲ್ಲಿ ಸ್ವಲ್ಪ ಬಾಡಿಸಿ, ಕೈ ಅಂಗುಲಗಳಿಂದ  ಚೆನ್ನಾಗಿ ರುಬ್ಬಿ ಅದರ ರಸ ಮಕ್ಕಳಿಂದ ಹಿಡಿದು ಮುದುಕರವರೆಗೆ ಸೇವಿಸುವಂತೆ ಮಾಡುವುದರಿಂದ ಎಲ್ಲವೂ ಉಪಶಮನಕ್ಕೆ ಬರುತ್ತದೆ.ಅದೇ ರಸ ಒಂದು ಚಮಚದಲ್ಲಿ ಹಾಕಿ ಹದಾ ಉಗುರು ಬಿಸಿ ಮಾಡಿ ಮಕ್ಕಳ ನೆತ್ತಿಗೆ ಹಾಕುವುದರಿಂದ ಶೀತ ಜ್ವರ ಕಡಿಮೆಯಾಗುತ್ತದೆ. ಮಳೆಗಾಲದಲ್ಲಂತೂ ಇದರ ಉಪಯೋಗ ಮಾಡಲೇ ಬೇಕು.

ನಾವು ಬೇಳೆ ಚಟ್ನಿ ಮಾಡುವಂತೆ ಸಂಬಾರಬಳ್ಳಿ ಎಲೆಗಳನ್ನು ಬಾಡಿಸಿ ಚಟ್ನಿ ಮಾಡಿದರೆ ಅದು ತುಂಬಾ ರುಚಿಯಾಗಿರುತ್ತದೆ. ಇದೇ ರೀತಿ ತಂಪು ಹುಳಿ ಮಾಡಿ ಊಟದಲ್ಲಿ ಸೇವಿಸಬಹುದು. ಕೇವಲ ಒಂದಷ್ಟು ಎಲೆ, ಒಂದು ಲಿಂಬೆ ರಸ, ಹಸಿ ಮೆಣಸು, ಶುಂಟಿ, ಬೆಳ್ಳುಳ್ಳಿ, ಇತ್ಯಾದಿ ಸೇರಿಸಿ ಚೆನ್ನಾಗಿ ರುಬ್ಬಿ ಚಟ್ನಿ ಮಾಡಿ ತಂಗಳಾನ್ನ (ಫ್ರಿಜ್) ಪೆಟ್ಟಿಗೆಯಲ್ಲಿಟ್ಟು ಊಟದ ಹೊತ್ತಿಗೆ ಚಟ್ನಿಯಂತೆಯೂ ಅಥವಾ ಒಂದು ಚಮಚ ಒಂದು ಲೋಟ ಮಜ್ಜಿಗೆಯಲ್ಲಿ ಬೆರೆಸಿದಾಗ ಧಿಡೀರ್ ತಂಪು ಹುಳಿ ತಯಾರಾಗುತ್ತೆ. ಊಟಕ್ಕೂ ತುಂಬಾ ರುಚಿ ಕೊಡುತ್ತೆ ಆರೋಗ್ಯವೂ ಚೆನ್ನಾಗಿರುತ್ತೆ.

ನಾವು ಗೆಣಸು, ಬದನೆ, ಬಾಳೆ ಕಾಯಿ ಪೋಡಿ (ಭಾಜಿಯಾ) ಮಾಡಿದ ಹಾಗೆ ಸಾಂಬಾರ ಬಳ್ಳಿ ಎಲೆ ಪೋಡಿ ಮಾಡಿದರೆ ತಿನ್ನಲು ತುಂಬಾ ರುಚಿಯಾಗಿರುತ್ತೆ. ಇದು ಜೀರ್ಣಕಾರಕವೂ ಹೌದು. ಊಟದ ಹೊತ್ತಿಗೂ ಪೋಡಿ ವ್ಯಂಜನವಾಗಿ ಬಳಸಬಹುದು. ದೊಡ್ಡ ಮಟ್ಟದಲ್ಲಿ ಬೆಳೆದು ಮದುವೆ, ಮುಂಜಿ ಇತ್ಯಾದಿಗಳ ಊಟದಲ್ಲಿಯೂ ಬಳಸಬಹುದು. ಎಣ್ಣೆಯಲ್ಲಿ ಕರಿದದ್ದರಿಂದ ಮಕ್ಕಳಿಗೂ ಇಷ್ಟವಾಗುತ್ತೆ. ನಾವು ಎಲ್ಲೇ ಇದ್ದರೂ ಒಂದು ಸಂಬಾರಬಳ್ಳಿ ಗಿಡ ನಮ್ಮ ಮನೆಯಲ್ಲಿ ಇರುವಂತೆ ನೋಡಿಕೊಂಡರೆ ಉತ್ತಮ. ನಾವು ದಿನಾ ಚಹ ಮಾಡುವಾಗ ಬೇಂದ ಚಹ ಹುಡಿ ಗಾಳಿಸಿ ಬಿಸಿ ಆರಿದಾಗ ಕುಂಡಕ್ಕೆ ಹಾಕಿದರೆ ಕುಂಡದಲ್ಲಿನ ಗಿಡ ಚೆನ್ನಾಗಿ ಬೆಳೆಯುತ್ತೆ ಅದಕ್ಕೆ ಯಾವುದೇ ಗೊಬ್ಬರದ ಅಗತ್ಯ ಬರುವುದಿಲ್ಲ. ಮಳೆಗಾಲದಲ್ಲಿ ಶೀತ ಜ್ವರ ಬಂದಾಗ ನಮ್ಮೂರ ಡಾಕ್ಟ್ರ ಮಕ್ಕಳಿಗೂ ಅವರಜ್ಜಿ ಕೊಡುತ್ತಿದ್ದುದು ಸಂಬಾರ ಬಳ್ಳಿಯ ಮದ್ದೇ! ಹಿತ್ತಳಗಿಡ ಮದ್ದಲ್ಲ ಅನ್ನುವ ಮಾತೊಂದಿದೆ ಆದರೆ ಸಾಯುವ ಹೊತ್ತಿಗೆ ಸಂಜೀವಿನಿ ಹುಡುಕುವುದಕ್ಕಿಂತ, ಸಾಯುವತನಕ ಆರೋಗ್ಯವಂತರಾಗಿರಲು ಈ ಹಿತ್ತಲ ಸಂಜೀವಿನಿಯನ್ನೇ ಉಪಯೋಗಿಸೋಣ.

ಶ್ರೀನಿವಾಸ್ ಪ್ರಭು
ಸ್ಪೂರ್ತಿ, ಬಂಟಕಲ್ಲು.



1 comment:

  1. ಹಳ್ಳಿಯ ಹಿನ್ನೆಲೆಯಿಂದ ಬಂದ ನನಗೂ ಇದರ ಮಹತ್ವ ಇಷ್ಟರ ಮಟ್ಟಿಗೆ ಅರಿವಿರಲಿಲ್ಲ.
    ತಮಗೆ ಅನಂತ ಧನ್ಯವಾದಗಳು.

    ReplyDelete