Tuesday, August 19, 2014

ಗೆಣಸು.


ಗೆಣಸು.



ಪ್ರಕಟಿತ ಲಿಂಕ್ http://seeandsay.in/kannada/view.php?menu=179&id=59

ಪರಶು ರಾಮ ಸೃಷ್ಟಿಯ, ಕೊಂಕಣ ತೀರದ ತುಳುನಾಡಿನ ಜನರು ಶಾಂತಿ ಪ್ರಿಯರು, ಸಂಸ್ಕಾರವಂತರು ದಷ್ಟ ಪುಷ್ಟರು, ಗರಡಿಗಳಲ್ಲಿ ಪಳಗಿದ ಬಂಡಿ ಭೀಮರು ಎಂಬ ಮಾತೊಂದಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಬಗ್ಗೆಡಿಕಲ್ಲಿನ ಬಗ್ಗ ಸಹೋದರರು, ಅಗೋಳಿ ಮಂಜಣ್ಣ, ಕೋಟಿ ಚೆನ್ನಯರಂತಹ ನಾಲ್ಕೆದೆಯ ವೀರರ ಜೀವನ ಚರಿತ್ರೆಯ ಬಗ್ಗೆ ನಮಗೆಲ್ಲಾ ಓದಿ ಕೇಳಿ ಗೊತ್ತು. ಇಷ್ಟೆಲ್ಲಾ ಗೊತ್ತಿದ್ದರೂ ಅಂದಿನ ಕಾಲದ ಜನರು ಬಡತನದಲ್ಲಿರಲ್ಲಿಲ್ಲವೇ? ಎಂಬ ಪ್ರಶ್ನೆ ನನ್ನನ್ನು ಕಾಡುತಲಿತ್ತು. ಅದಕ್ಕೆ ಉತ್ತರ ಹುಡುಕುತ್ತಾ ಕೆಲವು ಹಿರಿಯರಲ್ಲಿ ಅವರ ಅನುಭವ ಕೇಳುತ್ತಾ ಹೋದಾಗ, ನಾವು ಇವತ್ತು ಈ ಬಡತನ ಎಂದು ಏನನ್ನು ವೈಭವೀಕರಿಸಿ ವ್ಯಾಖ್ಯಾನಿಸುತ್ತೆವೋ ಅಂತಾಹ ಭಯಾನಕ ಬಡತನ ಅಂದಿರಲಿಲ್ಲ. ಕಾರಣ ಇಂದಿನ ಹಾಗೆ ಬೇಕುಗಳ ಪಟ್ಟಿ ತಯಾರಿಸಲು ಅವರಲ್ಲಿ ಪುರುಸೊತ್ತಿರಲಿಲ್ಲ! ದುಡಿಯುವಷ್ಟು ಹೊಲಗಳಿದ್ದವು, ಉಣ್ಣುವಷ್ಟು ಬೆಳೆಸುತ್ತಿದ್ದರು ಯಾ ಒಕ್ಕಲುತನದಿಂದ ಊಟದ ಪಡಿ ಸಂಪಾದಿಸುತ್ತಿದ್ದರು. ತಾವು ಬೆಳೆಸಿ ಗಳಿಸಿದ್ದೇ ನಾಲಿಗೆಗೆ ರುಚಿ ಕೊಡುತ್ತಿದ್ದವು, ಎರಡು ಹೊತ್ತಿನ ಊಟ, ಮಾನ ಮುಚ್ಚಲು ಒಂದಿಷ್ಟು ಬಟ್ಟೆ ಇದ್ದರೆ ಸಾಕು ಇದಕ್ಕಿಂತ ದೊಡ್ಡ ಶ್ರೀಮಂತಿಕೆ ಇನ್ಯಾಕೆ ಬೇಕು? ಇದ್ದಷ್ಟು ದಿನ ಆರೋಗ್ಯವಂತರಾಗಿ ಸುಖವಾಗಿದ್ದಾರೆ ಸಾಕು ಎಂಬುದೇ ಅವರ ಯೋಚನೆಯಾಗಿತ್ತು.

ಕೆಲವೊಮ್ಮೆ ಅತೀ ವೃಷ್ಟಿ ಅನಾವೃಷ್ಟಿಗಳಿಂದ ಬೆಳೆ ನಾಶವಾದಾಗ, ಆಹಾರದ ಕೊರತೆ ನೀಗಿಸಲು, ಆಹಾರ ಭದ್ರತೆಗೆ ಅವರು ಅವಲಂಬಿಸಿದ್ದು ‘’ಹಲಸು’’ ಹಾಗೂ ‘’ಗೆಣಸು’’ ಎಂಬ ಸತ್ಯದ ಅರಿವು ನಮಗ್ಯಾರಿಗಾದರೂ ಇದೆಯೇ? ಇಲ್ಲ! ಯಾಕೆಂದರೆ ನಮಗೆ ಅವೆರಡೂ ಇವತ್ತು ರುಚಿಸುವುದಿಲ್ಲ. ಹಾಗಾದರೆ ಬಡತನ ಎಂಬುದರ ಹಿಂದೆ ನಾಲಿಗೆಯ ಕುತಂತ್ರವೂ ಇದೆ ಎಂದಾಯಿತಲ್ಲವೇ?

ಇರಲಿ. ನಾನು ಈ ಲೇಖನ ಬರೆಯಲು ಹೊರಟಿದ್ದು ನಾನು ಚಿಕ್ಕಂದಿನಿಂದ ಅತೀ ಆಶೆಪಟ್ಟು ತಿನ್ನುತ್ತಿದ್ದ, ಪೋಷಕಾಂಶಗಳ ಖಜಾನೆ ಕಂದ ಮೂಲದ ‘’ಗೆಣಸಿನ’’ ಬಗ್ಗೆ. ದುಬೈ ಎಂಬ ಮಾಯಾನಗರಿಯಲ್ಲಿ ಕುಳಿತು ಗೆಣಸಿನ ಬಗ್ಗೆ ಬರೆಯುವುದು ಎಂದರೆ ಕೆಲವು ಶ್ರೀಮಂತ ಓದುಗರಿಗೆ ಅಸಹ್ಯವಾದೀತು. ಆದರೂ ತಮ್ಮಲ್ಲಿರುವ ಕೆಲವು ಗುಪ್ತ ರೋಗದ ನಿವಾರಣೆಗೆ ಗೆಣಸು ಸಹಾಯಕಾರಿ ಎಂಬ ಅಂಶ ನಮ್ಮ ಪೂರ್ವಜರಿಗೆ ಇದ್ದುದರಿಂದ ಹಾಗೂ ಕಡಿಮೆ ನೀರಿನಲ್ಲಿಯೂ ಗೆಣಸಿಬೆಳೆ ಚೆನ್ನಾಗಿ ಬೆಳೆಸಬಹುದು ಎಂದರಿತು ಗೆಣಸು ಬೆಳೆಸುತ್ತಿದ್ದರು ಎಂಬುದನ್ನು ನಾವೆಲ್ಲಾ ತಿಳಿಯಲೇ ಬೇಕು. ಗೆಣಸು ಬೇಯಿಸಿ ತಿನ್ನಲು ರುಚಿಕರ. ನನಾರಿತಿಯ ಪಲ್ಯದೊಟ್ಟಿಗೂ ತಿನ್ನಬಹುದು. ಉಳಿದುದನ್ನು ಹಪ್ಪಳ ಅಥವಾ ಬೇಯಿಸಿ ಹೊಳುಮಾಡಿ ಒಣಗಿಸಿ ಸಂಗ್ರಹಿಸಿ ಇಟ್ಟು ಮಳೆಗಾಲದಲ್ಲಿ ತಿನ್ನಲು ಏನೂ ಇಲ್ಲದಾಗ ಇದನ್ನು ಉಪಯೋಗಿಸಬಹುದು. ನಾಲಿಗೆ ರುಚಿಸದಿದ್ದವರಿಗೆ ಎಣ್ಣೆಯಲ್ಲಿ ಕರಿದ ‘’ಪೋಡಿ’’ಯಂತಹ ತಿಂಡಿ ತಯಾರಿಸಿ ತಿನ್ನಬಹುದು.

ಕರ್ನಾಟಕದಲ್ಲಿ ಕೆಲವು ಕಡೆ ಮಹಾಶಿವರಾತ್ರಿಯಂದು ಉಪವಾಸವಿರುವ ಬದಲು ಗೆಣಸಿನ ಹೋಳಿಗೆ ಅಡುಗೆ ಮಾಡಿ ಲಿಂಗ ಸ್ವರೂಪೀ ಉಮಾಶಂಕರನಿಗೆ ನೈವೇದ್ಯ ತೋರಿಸಿ ನಂತರ ಊಟ ಮಾಡುವ ಪದ್ಧತಿಯಿದೆ. ಉಪವಾಸ ವ್ರತ ಆಚರಿಸುವವರೂ ಫಲಾಹಾರವಾಗಿ ಗೆಣಸಿನ ಉಪ್ಪಿಟ್ಟು ಮಾಡಿ ಸೇವಿಸುವ ಪರಿಪಾಟ ಕೆಲವುಕಡೆ ಇದೆ. ಅಂದರೆ ಗೆಣಸು ದೇವರಿಗೂ ಪ್ರಿಯ ಎಂದಾಯಿತು!

ಐಪೋಮಿಯ ಬಟಾಟಾಸ್ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಗಡ್ಡೆಗೆ ಸ್ವೀಟ್ ಪೊಟೇಟೊ ಎಂಬ ಇಂಗ್ಲಿಷ್ ಹೆಸರಿದೆ. ಇದು ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ ಎಂಬ ಮಾಹಿತಿ ಇದೆ. ಸಿಹಿ ಗೆಣಸು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಆದ್ದರಿಂದ ಮಧುಮೇಹಿಗಳು ಕೂಡ ಮಿತಿಯಲ್ಲಿ ತಿನ್ನಬಹುದು. ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನ್ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಅಲ್ಲದೆ ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದ್ದು ಮೂಲವ್ಯಾದಿಗೆ ಒಳ್ಳೆಯದು ಎಂಬುದಾಗಿ ತಿಳಿಯಲಾಗಿದೆ. ಬೆಳೆವ ಮಕ್ಕಳಿಗೆ ಮತ್ತು ಯುವಕ ಯುವತಿಯರಿಗೆ ಗೆಣಸು ಒಳ್ಳೆಯ ಪೌಷ್ಟಿಕ ಆಹಾರ.ದೈಹಿಕ ವ್ಯಾಯಾಮದ ನಂತರ, ದೇಹದಲ್ಲಿ ಗ್ಲೈಕೋಜೆನ್ ಮಟ್ಟ ಕಡಿಮೆಯಾಗುವಾಗ ಗೆಣಸು ತಿನ್ನುವುದರಿಂದ ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ. ಗೆಣಸು ಧಾತು ಪುಷ್ಟಿಗೂ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ಇಂತಹ ಪೌಷ್ಟಿಕ, ಸತ್ವಯುತ ಖನಿಜ ಭಂಡಾರವಿರುವ ಗೆಣಸು ತಿನ್ನುತ್ತಿದ್ದುದರಿಂದ ನಮ್ಮ ಹಿರಿಯರು ತಮ್ಮ ಸ್ವಾಸ್ತ್ಯ ಕಾಪಾಡಿಕೊಂಡು ಬರಲು ಸಾಧ್ಯವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನಂತೆ ಆಗ ಗಲ್ಲಿಗೊಂದರಂತೆ ಆಸ್ಪತ್ರೆಗಳಿರಲಿಲ್ಲ ಎಂಬುದು ನಮಗೂ ಗೊತ್ತಿದ್ದ ವಿಷಯವೆ.

ಹೆಚ್ಚು ಪೌಷ್ಟಿಕಾಂಶ ಇರುವದರಿಂದ ದೇಶದ ಆಹಾರ ಸುರಕ್ಷತೆಗೆ, ಬಡತನ ರೇಖೆಗಿಂತ ಕೆಳಗಿರುವ ಜನಗಳ ಆಹಾರದ ಪೌಷ್ಟಿಕಾಂಶ ಹೆಚ್ಚಿಸಲು ಹಲಸು ಹಾಗೂ ಗೆಣಸು ಸಹಕಾರಿಯಾಗಬಲ್ಲದು. ದನಗಳಿಗೆ ಹಾರ್ಮೋನ್ ಮಿಶ್ರಿತ ಆಹಾರ ಕೊಟ್ಟು ತೆಗೆದ ಹಾಲು ಹಾಗೂ ಕೋಳಿ ಮೊಟ್ಟೆ ಶಾಲಾ ಮಕ್ಕಳಿಗೆ ಕೊಡುವುದಕ್ಕಿಂತ ಸಾವಯವ ಪದ್ದತಿಯಲ್ಲಿ ಬೆಳೆಸಿದ ಗೆಣಸು, ಬಾಳೆ ಹಣ್ಣು ಮುಂತಾದುವು ಏಷ್ಟೋ ಉತ್ತಮ ಆಹಾರ ಎಂಬುದು ನಮಗೆ ತಿಳಿದಿರಬೇಕು.

ನಿಯಮಿತವಾಗಿ ಗೆಣಸು ಉಪಯೋಗಿಸುತ್ತಿರುವ ನನಗೆ ಇತ್ತೇಚೆಗೆ ಒಂದು ಸೂಪರ್ ಮಾರ್ಕೆಟ್ನಲ್ಲಿ ಪಿಲಿಪೈನ್ಸ್ ಗೆಣಸು ಕಣ್ಣಿಗೆ ಕಂಡಿತು. ಅದು ನಮ್ಮಲ್ಲಿ ಸಿಗದೇ ಇರುವ ಒಂದು ಮಿಶ್ರ ತಳಿ. ಹೊರಗಿಂದ ನೋಡಲು ನಮ್ಮೂರಿನಲ್ಲಿ ಬೆಳೆಸುವ ಕೆಂಪು ಗೆಣಸಿನ ರೀತಿಯೇ ಇದ್ದರೂ ಅದನ್ನು ತುಂಡು ಮಾಡಿದಾಗ ಒಳಗೆ ಥೇಟ್ ‘ ಬೀಟ್ ರೂಟ್’ ಬಣ್ಣ ಕಂಡು ಬರುತ್ತದೆ (ಚಿತ್ರದಲ್ಲಿ ಇರುವಂತೆ). ಹಸಿ ಬಾಯಿಗೆ ಹಾಕಿ ಜಗಿದಾಗ ಬೀಟ್ ರೂಟ್ ತಿಂದ ಹಾಗೆ ಆಗುತ್ತದೆ. ಬೇಯಿಸಿದರೆ ಒಳ್ಳೆಯ ರುಚಿ ಇದೆ. ಇದೇ ನನಗೆ ಗೆಣಸಿನ ಬಗ್ಗೆ ಬರೆಯಲು ಪ್ರೇರೆಪಿಸಿದ್ದು!




ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು