Monday, December 19, 2016

ಬಾಲ್ಯದಲಿ ನಾನು ಕಂಡ, ತುಳುನಾಡಿನ ಕೊಂಕಣಿ ಕ್ರಿಶ್ಚಿಯನ್ ಕ್ರಿಸ್ಮಸ್ ಹಬ್ಬ.ಬಾಲ್ಯದಲಿ ನಾನು ಕಂಡ, ತುಳುನಾಡಿನ ಕೊಂಕಣಿ ಕ್ರಿಶ್ಚಿಯನ್  ಕ್ರಿಸ್ಮಸ್ ಹಬ್ಬ.

ದೀಪಾವಳಿ ಕಳೆದ ಮೇಲೆ ಬರುವ ದೊಡ್ಡ ಇನ್ನೊಂದು ಹಬ್ಬ ಅಂದರೆ ಅದು ದಶಂಬರ ಇಪ್ಪತ್ತೈದಕ್ಕೆ ಆಚರಿಸುವ ಕ್ರಿಸ್ಮಸ್ ಹಬ್ಬ. ಶಾಂತಿ, ಪ್ರೀತಿ, ಕರುಣೆ, ಸಮಾಧಾನ, ಏಕತೆ, ಸೌಹಾರ್ದತೆ, ಸಮಾನತೆಯ ಸಂದೇಶ ನೀಡುವ ಹಬ್ಬವನ್ನಾಗಿ ಯೇಸು ಕ್ರಿಸ್ತರ ಜನುಮ ದಿನವನ್ನು ಹಬ್ಬದ ರೂಪದಲ್ಲಿ ಆಚರಿಸಲಾಗುತ್ತದೆ. ನಮ್ಮ ಊರ ಸುತ್ತಮುತ್ತ ಕೊಂಕಣಿ ಕ್ರಿಶ್ಚಿಯನ್ ಕುಟುಂಬಗಳು ಜಾಸ್ತಿ ಇದ್ದು ಶಾಲಾ ಕಾಲೇಜುಗಳಲಿ ಇಸಾಯಿ ಮಿತ್ರರು ಜಾಸ್ತಿ, ಒಟ್ಟಿಗೆ ಶಾಲೆಗೆ ಹೋಗುವುದು, ಒಟ್ಟಿಗೆ ಆಡುವುದು, ಒಟ್ಟಿಗೆ ತಿರುಗಾಡಲು ಹೋಗುವುದು ಸಾಮಾನ್ಯ. ಆಗಿನ ಕಾಲದಲ್ಲಿ ಹಿಂದು-ಕ್ರಿಶ್ಚಿಯನ್ ಎಂಬ ಭೇದ ಬಾವ ಇರಲೇ ಇಲ್ಲ. ನಮ್ಮ ತುಳು ನಾಡಿನ ಕೊಂಕಣಿ ಕ್ರಿಶ್ಚಿಯನ್ ಸಮುದಾಯ ತುಳು ಮಣ್ಣಿಗೆ ಸರಿಯಾಗಿ ತಮ್ಮ ಆಚಾರ ವಿಚಾರವನ್ನು ಹೊಂದಾಣಿಕೆ ಮಾಡಿ ನಡೆಯುವ ಪ್ರವೃತ್ತಿಯವರಾದ್ದರಿಂದ, ಹಾಗೂ ಕೃಷಿ ಪ್ರಿಯರಾದುದರಿಂದ ಆವರು ಎಲ್ಲರಿಗೂ ಪ್ರಿಯರೆ. ಗುಡ್ಡದಲ್ಲಿ ‘’ಕುಮೆರಿ’’ ಪದ್ದತಿಯ ಕೃಷಿ ಆರಂಬಿಸಿ ಎಲ್ಲರ ಮನಸುಗೆದ್ದವರು ಈ ತುಳುನಾಡಿನ ಕೊಂಕಣಿ ಕ್ರಿಶ್ಚಿಯನ್ನರು.
ಕ್ರಿಸ್ಮಸ್ ಹಬ್ಬದ ಒಂದು ತಿಂಗಳ ಮೊದಲೇ ಹಬ್ಬದ ಸಡಗರ ಆರಂಭವಾಗುತ್ತದೆ. ನಾವು ನಮ್ಮ ಮಿತ್ರರ ಮನೆಯಲ್ಲಿಕ್ರಿಸ್ಮಸ್ ಹಬ್ಬಕ್ಕಾಗಿ ಅವರು ತಯಾರಿಸುವ ಪುಟ್ಟ ಕೊಟ್ಟಿಗೆ ತಯಾರಿಸಲು ಮರದ ಕಂಬ, ಸೀಮೆ ಕೋಲು, ಹುಲ್ಲು, ಇತ್ಯಾದಿಗಳನ್ನು ತಂದು ಕೊಡುತ್ತಿದ್ದೆವು. ದೀಪಾವಳಿಯ ಗೂಡುದೀಪ ಏರಿಸುವ ಕಂಬ ಅದು ಈ ಕೊಟ್ಟಿಗೆ ತಯಾರಿಯಲ್ಲಿ ವಿಲೀನವಾಗುತ್ತಿತು. ಹೀಗೆ ತಾಯಾರಿಸಿದ ಕೊಟ್ಟಿಗೆಯಲ್ಲಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು, ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು,  ತೋರಣ ಕಟ್ಟಿ ಅಲಂಕರಿಸಿ ಆನಂದ ಪಡುತ್ತಿದ್ದೆವು. ಅಲ್ಲದೆ ತಿಂಗಳು ಪೂರ್ತಿ ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ತಿಂದು ಕುಣಿದು ಕುಪ್ಪಳಿಸುತ್ತಿದ್ದೆವು.
ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. "ಸಾಂಟಾ ಕ್ಲಾಸ್" ಎಂಬುದು "ಸಂತ ನಿಕೋಲಾಸ್" ಎಂಬುದರ ಅಪಭ್ರಂಶ. ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.
ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ.

ಅಲಂಕಾರಗಳು
ಕ್ರಿಸ್ಮಸ್ ಬಂದರೆ ಸಾಕು, ಎಲ್ಲ ಮನೆಗಳಲ್ಲೂ ಒಂದು ನಕ್ಷತ್ರ, ದೀಪ ಮನೆಯ ಮುಂದೆ ತೂಗಿಡಲಾಗುತ್ತದೆ. ಮನೆಯ ಮುಂದೆ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸಿ,. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ.

ಧಾರ್ಮಿಕ ಆಚರಣೆಗಳು
ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಎಲ್ಲಾ ಚರ್ಚ್ ಸುಣ್ಣ ಬಣ್ಣಗಳಿಂದ ಹಾಗೂ ದೀಪಗಳಿಂದ ಅಲಂಕಾರಗೊಳ್ಳುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ಗಳಲ್ಲಿ ನಡೆಯುತ್ತವೆ. ಈ ಪೂಜೆಯಲ್ಲಿ ಎಲ್ಲಾ ಕ್ರಿಶ್ಚಿಯನ್ನರು  ಪಾಲ್ಗೊಳ್ಳುತ್ತಾರೆ. ಕ್ರಿಸ್ಮಸ್ ನಂತರ ಹನ್ನೆರಡನೆ ದಿನದಂದು "ಎಪಿಫನಿ" ಆಚರಣೆಗಳ ನಂತರ ಕ್ರಿಸ್ಮಸ್ ಕಾಲ ಮುಗಿಯುತ್ತದೆ.
ಹೆಚ್ಚಿನ ಯುವ ಜನರು ಇಂದು ಆಧುನಿಕ ಸೌಲಭ್ಯಗಳ ದಾಸರಾಗಿ ನಮ್ಮ ಮೂಲ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಯುವ ಜನತೆ ತನ್ನ ಬಳಗ ಸಂಬಂಧಿಕರೊಂದಿಗೆ ಬೆರೆಯುವುದು ಕಡಿಮೆಯಾಗುತ್ತಿದೆ. ವರ್ಷ ಪೂರ್ತಿ ದುಡಿಯವ ತೋಳುಗಳು ಸಾಲು ಸಾಲಾಗಿ ಬರುವ ಹಬ್ಬಗಳಿಂದ ರಜೆಯ ಮೋಜನ್ನು ಮಾತ್ರ ಪಡೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಕೆಲವೆಡೆ ಮಾತ್ರ ಸ್ವಲ್ಪವಾದರೂ ಕ್ರಿಸ್ಮಸ್ ಆಚರಣೆ ಜೀವಂತಿಕೆ ಉಳಿಸಿಕೊಂಡಿವೆ. ನಗರಗಳಲ್ಲಿ ಢಾಂಬಿಕತೆಯೇ ಹೆಚ್ಚು. ತುಳು ನಾಡಿನ ಮಣ್ಣಿನ ವಾಸನೆಗೆ ತಕ್ಕಂತೆ ಹಾಗೂ ತುಳು ಸಂಸ್ಕೃತಿಗೆ ತಕ್ಕಂತೆ ನಡೆಯುತ್ತಿದ್ದ ತುಳುನಾಡಿನ ಕೊಂಕಣಿ ಕ್ರಿಶ್ಚಿಯನ್ ಕ್ರಿಸ್ಮಸ್ ಹಬ್ಬ ತನ್ನ ಘನತೆಯನ್ನು ಜೀವಂತವಾಗಿ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ.


ಶ್ರೀನಿವಾಸ್ ಪ್ರಭು