Thursday, December 11, 2014

ಸ್ವರ್ಗ


ಜ್ಯೋತಿಷ್ಯದ ದುರುಪಯೋಗ


http://www.panjumagazine.com/?p=9396

ಜ್ಯೋತಿಷ್ಯ ಎಂಬ ಪದ ಹುಟ್ಟಿದ್ದು ಸೂರ್ಯನನ್ನು ಕೇಂದ್ರೀಕರಿಸಿ. ಸೂರ್ಯನನ್ನು ಪ್ರಧಾನವಾಗಿರಿಸಿ ಇತರ ಗ್ರಹಗಳು ಸುತ್ತುವ ವಾಗ ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕಿನ ಛಾಯಾ ಬಿಂಬ ಆರೋಹ ಮತ್ತು ಅವರೋಹ ಪರಿಕ್ರಮದಲ್ಲಿ ಪುನರಾವರ್ತನೆ ಯಾಗುವ ದಿನದ ಗಣಿತ. ಮನುಕುಲ ಭೂಮಿಯ ಮೇಲೆ ಹುಟ್ಟಿದಂದಿನಿಂದ ಆಕಾಶಕಾಯದಲ್ಲಿ ಕಾಣುವ ಸೂರ್ಯ, ಚಂದ್ರ, ನಕ್ಷತ್ರ ಹಾಗೂ ಇತರ ಆಕಾಶ ಕಾಯಗಳ ಬಗ್ಗೆ ಕೂತೂಹಲಗೊಂಡು, ಕೆಲವು ಬುದ್ಧಿವಂತ ಸನ್ಯಾಸಿಗಳು ಸಂಶೋಧನೆ ಮಾಡುತ್ತಾ, ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವ ಪರಿಯನ್ನು ಲೆಕ್ಕ ಹಾಕತೊಡಗಿ ಸಂಪೂರ್ಣ ಚಂದ್ರನನ್ನು ಪೂರ್ಣಿಮೆ ಅಂತಲೂ, ನಂತರ ಕ್ಷೀಣಿಸಿ ಮರೆಯಾಗುವ ದಿನವನ್ನು ಅಮಾವಾಸ್ಯೆ ಅಂತ ನಿರ್ಣಯಿಸಿ ಈ ಎರಡು ಘಟನೆಗಳನ್ನು ಕೇಂದ್ರೀಕರಿಸಿ ಅಮಾವಾಸ್ಯೆಯಿಂದ ಹುಣ್ಣಿಮೆಗೆ ತಗಲುವ ದಿನಗಳನ್ನು ಮತ್ತೆ ಹುಣ್ಣಿಮೆಯಿಂದ ಅಮಾವಾಸ್ಯೆಗೆ ತಗಲುವ ದಿನಗಳನ್ನು ದಾಖಲಿಸುತ್ತಾ ನಮಗೆ ಇವತ್ತಿನ ದಿನ ಸೂಚಿ ಪಟ್ಟಿ (ಪಂಚಾಂಗ – ಕ್ಯಾಲೆಂಡರ್ ) ಕೊಡುವಲ್ಲಿ ಸಫಲರಾಗಿದ್ದರ ಹಿಂದೆ ಇದ್ದದ್ದು ಇದೇ ಜ್ಯೋತಿಷ್ಯ! ಇಂದಿಗೂ ಸರಿಯಾದ ಜ್ಯೋತಿಷಿ ಮಾತ್ರ ಪಂಚಾಗ ರಚಿಸಬಲ್ಲ. ಇವತ್ತಿನ ತಾರೀಕುಪಟ್ಟಿಯಲ್ಲಿ ಅಮಾವಾಸ್ಯೆ – ಹುಣ್ಣಿಮೆ, ನಕ್ಷತ್ರಗಳ ಇರುವಿಕೆ, ಭರಣಿ-ಕೃತಿಕ, ಏಕಾದಶಿ-ದ್ವಾದಶಿ, ಹಬ್ಬ-ಹರಿದಿನಗಳ ದಿನಗಳನ್ನು ಹಾಗೂ ಕರಾರುವಕ್ಕಾಗಿ ಮುಂದೆ ಬರುವ ಸೂರ್ಯಗ್ರಹಣ, ಚಂದ್ರಗ್ರಹಣಗಳ ಸೂಚ್ಯಾಂಕ ದಿನಗಳನ್ನು ಬರೆಯುವವರು ಕೂಡಾ ಈ ಜ್ಯೋತಿಷಿಗಳೆ! ಇದಕ್ಕಾಗಿಯೇ ಇವರು ವರ್ಷಾನುಗಟ್ಟಲೆ ಜಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುತ್ತಾರೆ. ಜ್ಯೋತಿಷ್ಯ ಅನ್ನುವಂತದ್ದು ಹಿಂದೆಯೂ ಸುಳ್ಳಾಗಿಲ್ಲ, ಇಂದೂ ಸುಳ್ಳಾಗುತ್ತಿಲ್ಲ, ಮುಂದೆಯೂ ಸುಳ್ಳಾಗುವುದಿಲ್ಲ. ಯಾಕೆಂದರೆ ಇದೊಂದು ಕರಾರುವಕ್ಕಾದ ಪೂರ್ಣ ಗಣಿತ.

ಇಂದು ಜ್ಯೋತಿಷ್ಯ ಎಂಬ ಪದದ ಅರ್ಥ ಸರಿಯಾಗಿ ಗೊತ್ತಿರದ ಕೆಲವು ಮೂಢರು ಟಿವಿ ವಾಹಿನಿಗಳಲ್ಲಿ ಫಲಜ್ಯೋತಿಷ್ಯ ಹೇಳುವ ಮೂಲಕ ಜನರನ್ನು ವಂಚಿಸುತ್ತಿದ್ದು, ಜ್ಯೋತಿಷ್ಯದ ಗಂಧ-ಗಾಳಿ ಗೊತ್ತಿರದೆಯೂ ಅಲ್ಪ ಕಾಲದಲ್ಲಿ ಜನ ಪ್ರಸಿದ್ಧಿ ಪಡೆದು ನಿಜ ಜ್ಯೋತಿಷಿಗಳ ಹಾಗೂ ನಿಜ ಜ್ಯೋತಿಷ್ಯದ ಕೊಲೆ ಮಾಡುತ್ತಿದ್ದಾರೆ. ಈ ಮೈಗಳ್ಳ ಢೋಂಗಿ ವಂಚಕ ಭಯೋತ್ಪಾದಕ ಕ್ರಿಮಿನಲ್ ಕ್ರಿಮಿ ಜ್ಯೋತಿಷಿಗಳಿಗೆ ಹಾಗೂ ಅವರ ವ್ಯಾಪಾರಕ್ಕೆ ಅಂಕುಶ ಹಾಕಲು ನಮ್ಮ ಸಮಾಜ ಕೈ ಜೋಡಿಸಿ, ಋಷಿ ಮುನಿಗಳಿಂದ ನಮಗೆ ಬಳುವಳಿಯಾಗಿ ಬಂದ ನಿಜ ಜ್ಯೋತಿಷ್ಯ ತನ್ನ ಮೂಲ ಪಾವಿತ್ರ್ಯ ಕಳೆದುಕೊಳ್ಳದಂತೆ ಹಾಗೂ ಅದನ್ನು ನಮ್ಮ ಮುಂದಿನ ಪೀಳಿಗೆಗೆ ನೈಜ್ಯ ಹಾಗೂ ಕರಾರುವಕ್ಕಾದ ಮೂಲ ಗಣಿತದ ಕಲಿಕೆಯೊಂದಿಗೆ ಉಳಿಸಿಕೊಳ್ಳಬೇಕಾಗಿದೆ.

ಇಲ್ಲಿ ಜ್ಯೋತಿಷ್ಯ ಹಾಗೂ ಫಲ ಜ್ಯೋತಿಷ್ಯ ಬೇರೆ ಬೇರೆ. ಜ್ಯೋತಿಷ್ಯ ಅಂದರೆ ಅದು ಭಾರತೀಯರ ಕ್ಯಾಲೆಂಡರ್ (ಪಂಚಾಗ) ಕರಾರುವಕ್ಕಾಗಿ ಗುಣಿಸಿ ತಯಾರಿಸುವ ವಿದ್ಯೆ. ಜ್ಯೋತಿಷಿ ಅಲ್ಲದವನಿಗೆ ಇದನ್ನು ತಯಾರಿಸಲು ಆಗುದಿಲ್ಲ. ಇದೇ ರೀತಿ ಜಾತಕ ಅನ್ನುವುದು ಹಿಂದೂಗಳ ಬರ್ತ್ ಸರ್ಟಿಫಿಕೇಟ್. ಇಂಗ್ಲಿಷ್ ಕ್ಯಾಲೆಂಡರ್ ಕಂಡು ಹಿಡಿಯುವ ಮೊದಲು ಮಗು ಹುಟ್ಟಿದ ದಿನಾಂಕ ಬರೆದಿಡುವ ಕ್ರಮವೇ ಜಾತಕ. ನಮ್ಮ ಕ್ಯಾಲೆಂಡರ್ ಜ್ಯೋತೀರ್ ಆಧಾರದಲ್ಲಿರುವುದರಿಂದ ಇಲ್ಲಿ ಮಾಸ, ಗ್ರಹ, ನಕ್ಷತ್ರ ಇತ್ಯಾದಿ ಸೂಚಿಸಲಾಗುತ್ತೆ. ಹನ್ನೆರಡು ಮಾಸಗಳ (ತಿಂಗಳು) ಚೌಕಟ್ಟು ರಚಿಸಿ, ಆಯಾ ತಿಂಗಳುಗಳಲ್ಲಿ ಯಾವ ಯಾವ ಗ್ರಹಗಳು ( ಏಳು ವಾರಗಳ ಹೆಸರು ಹಾಗೂ ರಾಹು ಕೇತು ಎರಡು ಕ್ಷುದ್ರ) ಯಾವ ಯಾವ ತಿಂಗಳಲ್ಲಿ ಇರುತ್ತವೆಯೋ ಆ ಚೌಕಟ್ಟಿನಲ್ಲಿ ನಮೂದಿಸಲಾಗುತ್ತೆ. ಅದೇ ರೀತಿ ಹುಟ್ಟಿದ ದಿನ ಯಾವ ಯಾವ ನಕ್ಷತ್ರ ಯಾವ ಯಾವ ರಾಶಿ (ತಿಂಗಳು)ಯಲ್ಲಿ ಗೋಚರದಲ್ಲಿ ಇರುತ್ತದೆಯೋ ಅಲ್ಲಿ ನಮೂದಿಸಲಾಗುತ್ತೆ. ಇದನ್ನು ಸರಿಯಾಗಿ ಜ್ಯೋತಿಷ್ಯ ಬಲ್ಲ ಜ್ಯೋತಿಷಿ ಮಾತ್ರ ಪಂಚಾಗ (ಕ್ಯಾಲೆಂಡರ್) ರಚಿಸಿದಂತೆ ರಚಿಸಬಲ್ಲ. ಇದರಿಂದ ಜಾತಕನು ಹುಟ್ಟುವಾಗ ಯಾವ ಯಾವ ರಾಶಿಯಲ್ಲಿ ಯಾವ ಯಾವ ಗ್ರಹ-ನಕ್ಷತ್ರಗಳು ಗೋಚರದಲ್ಲಿದ್ದವು ಎಂಬುದನ್ನು ತಿಳಿಯಬಹುದು. ಹಾಗಾಗಿ ಜಾತಕ ಹಿಂದೂಗಳ ಬರ್ತ ಸರ್ಟಿಫಿಕೇಟ್ ಹೊರತು ಸರಿಯಾದ ಭವಿಷ್ಯವಲ್ಲ.

ಜಾತಕ ಜ್ಯೋತೀರ್ ಆಧಾರದಲ್ಲಿ ಇರುವುದರಿಂದ ಸಾವಿರಾರು ವರ್ಷಗಳ ಹಿಂದೆ ಆಯಾ ರಾಶಿ, ಗ್ರಹ, ನಕ್ಷತ್ರಗಳಲ್ಲಿ ಹುಟ್ಟಿದವರು ಹೇಗೆ ಬಾಳಿದ್ದಾರೆ? ಯಾವ ಯಾವ ತೊಂದರೆಗೆ ಒಳಗಾಗಿದ್ದಾರೆ, ಘಟನೆಗಳು ನಡೆಯುವಾಗ ಯಾವ ಯಾವ ರಾಶಿಯಲ್ಲಿ ಯಾವ ಯಾವ ಗ್ರಹ-ನಕ್ಷತ್ರಗಳು ಗೋಚರದಲ್ಲಿದ್ದವು ಎಂಬ ಅಧ್ಯಯನ ನಡೆಸಿ, ಮುಂದೆ ಅದೇ ರಾಶಿಯಲ್ಲಿ ಆಯಾ ಗ್ರಹ – ನಕ್ಷತ್ರಗಳು ಬರುವಾಗ ಇವು ಪುನಾರಾವರ್ತನೆಗೊಂಡಿದೆಯೇ? ಹಾಗಾದರೆ ಅದರ ಪರಿಣಾಮ ಏನಾಗಿತ್ತು? ಎಂಬಿತ್ಯಾದಿಗಳ ಬಗ್ಗೆ ಋಷಿ ಮುನಿಗಳು ಬರೆದಿಟ್ಟ ಗ್ರಂಥ ಆದರಿಸಿ ಇಂದಿನ ಜ್ಯೋತಿಷಿಗಳು ಫಲ ಜ್ಯೋತಿಷ್ಯ ಹೇಳುವ ಕ್ರಮವಿದೆ. ಇದು ಕೇವಲ ಒಂದು ಸಂಭವನೀಯತೆ ಅಷ್ಟೆ. ಆದರೂ ಇದನ್ನು ಸಂಪೂರ್ಣ ಅಲ್ಲಗಳೆಯುವಂತಿಲ್ಲ. ಸರಿಯಾದ ವಿದ್ವತ್ತು ಇರುವ ಜ್ಯೋತಿಷಿಗಳು ಮಾತ್ರ ಜಾತಕ ನೋಡಿ, ಹಿಂದಿನವರು ಬರೆದಿಟ್ಟ ಫಲ ಜ್ಯೋತಿಷ್ಯ ಗ್ರಂಥಗಳ ಆಧಾರದ ಮೇಲೆ ಜಾತಕನಿಗೆ ಮುಂದೆ ಬರಬಹುದಾದ ಒಳಿತು ಕೆಡುಕುಗಳ ಮುನ್ಸೂಚನೆ ಕೊಡಬಹುದು(ವಿಜ್ಞಾನಿಗಳು ಮಳೆ ಸೂಚನೆ ಕೊಟ್ಟಂತೆ). ಇಲ್ಲಿ ಸಂಭಾವ್ಯತೆ ಇಲ್ಲಾ ಎಂದು ಸರಿ ಸುಮ್ಮನೆ ಇರುವಂತೆಯೂ ಇಲ್ಲ. ರಸ್ತೆಗಳ ತಿರುವುಗಳಲ್ಲಿ ಆಗಾಗ ಅಪಘಾತ ಸಂಭವಿಸುತ್ತಿದ್ದರೆ ಅಲ್ಲಿ ‘’ಮುಂದೆ ತಿರುವು ಇದೆ ನಿಧಾನವಾಗಿ ಚಲಿಸಿ’’ ಎಂಬ ಫಲಕ ಹಾಕಲಾಗುತ್ತೆ. ಇದು ಚಾಲಕನ ಜಾಗ್ರತೆಗಾಗಿ. ನಮ್ಮ ಬಾಳೂ ಇದಕ್ಕೆ ಹೊರತಾಗಿಲ್ಲ.

ಇವತ್ತು ಸರಿಯಾದ ವಿದ್ವತ್ತು ಇರುವ ಜ್ಯೋತಿಷಿಗಳು ಮನೆಯೊಳಗೆ ಇದ್ದರೆ ಕಪಟ ಜ್ಯೋತಿಷಿಗಳು ರಸ್ತೆಯಲ್ಲಿ, ದೊಡ್ಡ ದೊಡ್ಡ ಹೋಟೆಲುಗಳಲ್ಲಿ ರೂಂ ಮಾಡಿ, ಟಿವಿ, ದಿನ ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ಕೊಟ್ಟು, ತಮ್ಮಲ್ಲಿ ನಯಾ ಪೈಸೆಯ ವಿದ್ವತ್ತು ಇಲ್ಲದೆ ಜನರನ್ನು ಮೋಸ, ವಂಚನೆ ಮಾಡಿ ಇಲ್ಲ ಸಲ್ಲದ ಭಯ ಹುಟ್ಟಿಸುವ ಭವಿಷ್ಯ ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಜನರ ಕಷ್ಟ, ನೋವು, ಹಣಕಾಸು,ವಿದ್ಯೆ, ಉದ್ಯೋಗ, ದಾಂಪತ್ಯಕಲಹ, ಶತ್ರುಕಾಟ, ಪ್ರೀತಿ-ಪ್ರೇಮ, ವಶೀಕರಣವೇ ಮೊದಲಾದ ಬೇಕುಗಳನ್ನು ಮುಂದಿಟ್ಟುಕೊಂಡು ಅದಕ್ಕೆ ಜ್ಯೋತಿಷ್ಯದ ಮೂಲಕ ಕಾರಣ ತಿಳಿದು ಪರಿಹಾರ ಮಾಡಿಕೊಡುತ್ತೇವೆ ಎಂಬ ಆಶೆಯ ಬೀಜ ನೊಂದವರ ಮನಸ್ಸಿನಲ್ಲಿ ನೆಟ್ಟು ಅದನ್ನು ಹೆಮ್ಮರವಾಗಿ ಬೆಳಿಸಿ ಅದರ ಫಸಲನ್ನು ಕಿತ್ತು ತಿನ್ನುವ ಈ ಕಟುಕ ರಕ್ತ ಬೀಜಾಸುರರು ಬೇಕಾದಷ್ಟು ಇದ್ದಾರೆ. ಹದಿಹರೆಯದವರನ್ನು ಪ್ರೀತಿ ಪ್ರೇಮ, ವಶೀಕರಣ ಅಂತ ನಂಬಿಸಿ ಅವರಿಂದ ಸಾಕಷ್ಟು ದುಡ್ದು ಕೀಳಿ ಕೊನೆಗೊಮ್ಮೆ ಬೀದಿ ಭಿಕಾರಿ ಮಾಡಿ ವಂಚನೆಯ ಮಾರ್ಗದಿ ದುಡ್ದು ದೋಚುವ ಈ ಜ್ಯೋತಿಷಿಗಳ ಜಾಲದಲ್ಲಿ ಒಮ್ಮೆ ಸಿಕ್ಕಿ ಬಿದ್ದರೆ ಹೊರಬರುವುದು ಕಷ್ಟ. ಇಂದಿನ ಫೈವ್ ಸ್ಟಾರ್ ಜ್ಯೋತಿಷಿಗಳ ಹಿಂದೆ ಒಂದು ದೊಡ್ಡ ಹೈ ಫೈ ವಂಚನಾ ಜಾಲ ಕೆಲಸ ಮಾಡುತ್ತಿದೆ. ಈ ಜಾಲ ಜನರನ್ನು ಹೇಗೆ ನಂಬಿಸಬೇಕು ಎಂಬುದರ ಬಗ್ಗೆ ಸರಿಯಾದ ರೀತಿಯ ಮಾರ್ಕೆಟಿಂಗ್ ತಂತ್ರಜ್ಞಾನ ಹೊಂದಿದ್ದು, ಕ್ಷಣಮಾತ್ರದಲ್ಲಿ ಗಿರಾಕಿಗಳನ್ನು ನಂಬಿಸಿ ಜ್ಯೋತಿಷಿಗಳ ಬಳಿಗೆ ಸೆಳೆಯುವಂತೆ ಮಾಡುತ್ತಾರೆ. ಒಮ್ಮೆ ಈರೀತಿಯ ವಂಚನೆಯ ಜಾಲದಲ್ಲಿ ಸಿಲುಕಿದರೆ ಸಾಕು ಮತ್ತೆ ಹೊರಬರುವ ಮಾರ್ಗ ಆ ದೇವರಿಗೂ ಗೊತ್ತಾಗದು. ನಿಮ್ಮಲ್ಲಿ ದುಡ್ದು ಇಲ್ಲ ಅಂತ ಹಿಂದೆ ಸರಿಯಬೇಕಾಗಿಲ್ಲ ಬಡ್ಡಿಗೆ ದುಡ್ದು ಕೊಡುವವರೂ ಇದೆ ಜಾಲದ ಕೊಂಡಿಯಲ್ಲಿದ್ದಾರೆ. ನಿಮಗೆ ನಿಮ್ಮನ್ನು ಬರ್ಬಾತ್ ಮಾಡುವಷ್ಟು ಬಡ್ಡಿಗೆ ಹಣ ಕೊಟ್ಟು ಜ್ಯೋತಿಷಿಗಳಿಂದ ಕಾಪಾಡುತ್ತಾರೆ! ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರೂ ಇರಲೇ ಬೇಕಲ್ಲವೆ? ನಮ್ಮ ಭವಿಸ್ಯ ನಮ್ಮ ಕೈಯಲ್ಲಿದೆ. ಅದನ್ನು ಇನ್ನೊಬ್ಬರ ಕೈವಶ ಮಾಡದಿರುವುದೇ ಬುದ್ದಿವಂತರ ಲಕ್ಷಣ.


ಶ್ರೀನಿವಾಸ್ ಪ್ರಭು

(ಸ್ಪೂರ್ತಿ, ಬಂಟಕಲ್ಲು)

ತುಳುವರ ಬಿಸಲೆಯಲ್ಲಿ ಘಮಘಮಿಸುವ ಬಸಳೆ!



ತುಳುವರ ಬಿಸಲೆಯಲ್ಲಿ ಘಮಘಮಿಸುವ ಬಸಳೆ!









http://seeandsay.in/kannada/view.php?menu=113&id=85


ತುಳುನಾಡ ಮಣ್ಣಲ್ಲಿ ಹುಟ್ಟಿ ಪ್ರಪಂಚದ ಯಾವ ಮೂಲೆಯಲ್ಲಿ ನೆಲೆಸಿದರೂ ಬಿಸಲೆಯಲ್ಲಿ (ಮಣ್ಣಿನ ಪಾತ್ರೆಯಲ್ಲಿ) ಮಾಡಿದ ಬಸಳೆ ಪಲ್ಯದ ಆ ಸ್ವಾದ ಮರೆಯುವುದುಂಟೆ? ಹಸಿದ ಹೊಟ್ಟೆಗೆ ಬಿಸಿ ಕುಚುಲಕ್ಕಿ ಅನ್ನದ ಮೇಲೆ ಬಿಸಿ ಬಿಸಿ ಬಸಳೆ ಪಲ್ಯ ಹಾಕುವಾಗ ಮೂಗಿನ ಹೊಳ್ಳೆಗಳು ಬಿಡಿ ನಾಲಗೆಯಲ್ಲಿ ಚಿರ್ ಅಂತ ನೀರು ಚಿಮ್ಮಿ, ಜೀರ್ಣ ಕ್ರಿಯೆಗೆ ಬೇಕಾಗುವ ಎಲ್ಲಾ ರಸಗಳ ಗ್ರಂಥಿಗಳೊಟ್ಟಿಗೆ ನವರಸಗಳ ಗ್ರಂಥಿಗಳೂ ತೆರೆದು ಬಿಡುತ್ತವೆ. ಹಾಗಾಗಿಯೇ ಬಸಳೆ ಪಲ್ಯದೂಟ ಎಲ್ಲರಿಗೂ ರುಚಿಸುತ್ತದೆ.

ಬಸಳೆ ತುಳುನಾಡಿಗೆ ಬಂದದ್ದು ರಾಜಾಪುರ ಸಾರಸ್ವಾತರಿಂದ. ಪ್ರಪಂಚದಾದ್ಯಂತ ಬಸಳೆ ಜಾತಿಯ ಸೊಪ್ಪು ತರಕಾರಿ ಕಂಡು ಬಂದರೂ ಉದ್ದ ಬಳ್ಳಿ ಬಿಡುವ ಬಸಳೆ ಅದು ಕೇವಲ ಪರಶುರಾಮ ಸೃಷ್ಟಿಯ ಸಾರಸ್ವತರ ಸೊತ್ತು ಎಂಬುದನ್ನು ಪ್ರತೀ ರಾಜಾಪುರ ಸಾರಸ್ವತರ ಮನೆ ಹಿತ್ತಲಲಿ ಇರುವ ಬಸಳೆ ಚಪ್ಪರ (ದೊಂಪ) ದಿಂದ ಊಹಿಸಿಕೊಳ್ಳಬಹುದು. ಪರಶುರಾಮ ಕೊಂಕಣದ ಸೃಷ್ಟಿ ಮಾಡಿ ತನ್ನ ಅನುಯಾಯಿಗಳಿಗೆ, ಗಿಡ್ಡದಾಗಿ ಬೆಳೆಯುವ ಬಸಳೆಯನ್ನು ತನ್ನ ತಪೋ ಶಕ್ತಿಯಿಂದ ಉದ್ದ ಬಳ್ಳಿಯಾಗಿ ಹಬ್ಬುವ ಬಸಳೆಯನ್ನಾಗಿ ಪರಿವರ್ತಿಸಿಕೋಟ್ಟು, ತನ್ನ ಸೃಷ್ಟಿಯ ಜಮೀನಿನಲ್ಲಿ ಎಲ್ಲಿ ಬೇಕಾದರಲ್ಲಿ ಬೆಳೆಸಿ ಜೀವನ ನಿರ್ವಹಿಸಿ ಎಂಬುದಾಗಿ ವರ ಕೊಟ್ಟ ಎಂಬುದಾಗಿ ಸಾರಸ್ವತರ ಕೆಲವು ಹಿರಿಯರ ಅಂಬೋಣ. ಪೋರ್ಚುಗೀಸರ ಮತಾಂತರಕ್ಕೆ ಹೆದರಿ ಕೆಲವು ಸಾರಸ್ವತರು ಉಡುಪಿ, ಕಾರ್ಕಳ, ಮಂಗಳೂರು, ಸುಳ್ಯ, ಪುತ್ತೂರು ಕಡೆ ವಲಸೆ ಹೋಗುವಾಗ ತಮ್ಮೊಟ್ಟಿಗೆ ಈ ಬಸಳೆ ಬಳ್ಳಿಗಳನ್ನು ಒಯ್ದು ತಾವು ನೆಲೆ ನಿಂತಲ್ಲೆಲ್ಲಾ ಬಸಳೆ ನೆಟ್ಟು ಬೆಳೆಸಿ ಇಂದಿಗೂ ಉಳಿಸಿದ್ದು ನಮ್ಮೆಲ್ಲರಿಗೂ ತಿಳಿದ ವಿಷಯವೆ. ಬಸಳೆ ಬೆಳೆಸಿ ಅದನ್ನು ಮಾರಿ, ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಡಾಕ್ಟರ್, ನರ್ಸಿಂಗ್, ಇಂಜಿನೀಯರಿಂಗ್ ಕಲಿಸಿದ ಕೀರ್ತಿ ಕೆಲವು ಸಾರಸ್ವತರ ಹಿರಿಯಮ್ಮರುಗಳಿಗೆ ಸಲ್ಲುತ್ತದೆ. ಆತ್ರಾಡಿ, ಹಿರಿಯಡ್ಕ, ಪರ್ಕಳ, ಪಟ್ಲ ಹಾಗೂ ಇನ್ನೂ ಹಲವಾರು ಕಡೆಗಳಲ್ಲಿ ಬಸಳೆ ಬೆಳೆದೇ ಜನ ತಮ್ಮ ಕಾಲಮೇಲೆ ನಿಂತು ಇತರರಿಗೂ ಮಾದರಿಯಾಗಿದ್ದಾರೆ. ತಮ್ಮಲ್ಲಿರುವ ವಡವೆಗಳ ಹಿಂದೆಯೂ ಈ ಬಸಳೆಯ ಅನುಗ್ರಹವೇ ಕಾರಣ ಅಂತಾರೆ ಕೆಲವು ಅಜ್ಜಮ್ಮಗಳು!

ಬಸಳೆ ಒಂದು ಲಾಭದಾಯಕ ಹಾಗೂ ಆರೋಗ್ಯಕ್ಕೆ ಹಿತಕರವಾದ ಸೊಪ್ಪು ತರಕಾರಿ. ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿ ಸಿಕ್ಕರೂ ಪೇಟೆಗಳಲ್ಲಿ ವಿರಳ. ಹಾಗಾಗಿ ಪೇಟೆಗಳಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. ಬಸಳೆಯ ಸೇವನೆಯಿಂದ ನಮ್ಮ ದೇಹದ ಜೀರ್ಣ ಕ್ರಿಯೆ ಸುಗಮಗೊಂಡು ದೇಹವನ್ನೂ ಸದೃಡಗೊಳಿಸುತ್ತದೆ. ಬಸಳೆಯನ್ನು ಉಪ ಅಥವಾ ಮಿಶ್ರ ಬೆಳೆಯಾಗಿಯೂ ಮಾಡಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ನಾಲ್ಕು ಕುಡಿಗಳ ಬಸಳೆಯ ಕಟ್ಟೊಂದಕ್ಕೆ ಸುಮಾರು ಇಪ್ಪತ್ತು ರೂಪಾಯಿಗಳಿಂದ ಇಪ್ಪತ್ತೈದು ರೂಪಾಯಿ ಬೆಲೆ ಇರುತ್ತದೆ.

ಬಸಳೆ ಬಳ್ಳಿಯಂತೆ ಹಬ್ಬಿ ಬೆಳೆಯುವ ಸೊಪ್ಪು ತರಕಾರಿಯಾಗಿದ್ದು, ಇದರ ಎಲೆ, ಬಳ್ಳಿ ಎಲ್ಲವನ್ನು ಪದಾರ್ಥ ಮಾಡಲು ಬಳಸುತ್ತಾರೆ. ಬಸಳೆಯಲ್ಲಿ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದೆ. ಬಸಳೆಯಲ್ಲಿ ರೇಡಿಯೇಶನ್ ತಡೆಯುವ ಗುಣವಿದ್ದು ನ್ಯೂಕ್ಲಿಯರ್ ಪ್ಲಾಂಟ್ ಇರುವಲ್ಲಿ ಹೇರಳವಾಗಿ ಬಸಳೆ ಬೆಳೆದರೆ ರೇಡಿಯೇಶನ್ ನಿಂದ ಪಾರಾಗಬಹುದು ಎಂಬ ಸಲಹೆ ಕೂಡ ಹಿಂದೊಮ್ಮೆ ನಿಯತಕಾಲಿಕಗಳಲ್ಲಿ ಪ್ರಕತವಾಗಿದ್ದುದು ಇಲ್ಲಿ ಸ್ಮರಿಸಬಹುದು.

ಬಸಳೆಧಿಯಲ್ಲಿ ಹೇರಳವಾಗಿ ಔಷಧಿಧೀಯ ಗುಣವಿದೆ. ಬಸಳೆಯ ಸೇವನೆ ಯಿಂದ ರೋಗ ನಿರೋಧಕ ಗುಣ ವೃದ್ಧಿಸುತ್ತದೆ. ಇದರ ದಂಟನ್ನು ಜಗಿಯುವುದರಿಂದ ಬಾಯಿ ಹುಣ್ಣು, ಮಲಬದ್ಧತೆ ಕಡಿಮೆ ಯಾಗುವುದು. ಬಸಳೆಯ ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪತ್ರಹರಿತ್ತು ಅಂಶ ಲಭಿಸುವುದು. ಅಲ್ಸರ್ ನಂತಹ ಕರುಳು ವ್ಯಾಧಿ ಬಸಳೆ ಸೇವನೆ ದೂರ ಇಡುತ್ತದೆ.

ಬಸಳೆ ಬಳಸಿ ಬಹು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ. ಪಚ್ಚೆ ಹೆಸರು, ಹಲಸಿನ ಬೀಜ, ಹುರುಳಿ, ಅಲಸಂಡೆ ಕಾಳು, ತೊಗರಿ ಬೇಳೆ ಇತ್ಯಾದಿಗಳನ್ನು ಬಳಸಿ ಸಾಂಬಾರು ಹಾಗೂ ಬೇರೆ ಬೇರೆ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತದೆ. ಹಸಿ ಪಪ್ಪಾಯಿ, ಎಳೆ ಬಾಳೆ ದಿಂಡು ಹಾಕಿ ಗಸಿ ಮಾಡಿದರೆ ಅದರ ರುಚಿ ತಿಂದವರಿಗೆ ಗೊತ್ತು.

ಬಸಳೆ ಬೆಳೆ ಒಂದು ಲಾಭದಾಯಕ ಉಪ ಕೃಷಿ. ಇದನ್ನು ಬೆಳೆಯಲು ಎಕರೆ ಗಟ್ಟಲೆ ಜಾಗದ ಅವಶ್ಯವಿಲ್ಲ. ಮನೆ ಅಂಗಳ, ಗದ್ದೆ, ತೋಟ ಹಿತ್ತಿಲು ಹೀಗೆ ಎಲ್ಲಿ ಬೇಕಾದರಲ್ಲಿ ಬಸಳೆ ಬೆಳೆಯಬಹುದು. ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲಿನ ನೀರು ಹೋಗುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಬಿಸಿಲು ಬೀಳುವ ಜಾಗದ ಆಯ್ಕೆ ಮುಖ್ಯ. ನೆರಳಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುವುದಿಲ್ಲ. ಬಸಳೆ ಕೃಷಿ ಮನೆ ಮಂದಿಯೇ ತಮ್ಮ ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಕೃಷಿ.

ಹಿಂಗಾರು ಮಳೆ ಬಸಳೆ ನಾಟಿಗೆ ಸೂಕ್ತ ಸಮಯ. ಬಸಳೆಯನ್ನು ಬಳ್ಳಿ ನೆಡುವ ಮೂಲಕವೇ ಬೆಳೆಸಲಾಗುತ್ತದೆ ಆದ್ದರಿಂದ ನಾಟಿಗೆ ಒಳ್ಳಯ ಹಳೆಯ ಬಸಳೆ ಬಳ್ಳಿಗಳನ್ನು ಆಯ್ಕೆ ಮಾಡಬೇಕು. ಮರಳು ಮಿಶ್ರಿತ ಕೆಂಪು ಮಣ್ಣು, ಕಪ್ಪು ಅಥವ ಗೊಡ್ಡು ಮಣ್ಣಿನಲ್ಲಿ ಬಸಳೆ ಚೆನ್ನಾಗಿ ಬೆಳೆಯುತ್ತದೆ. ಬಸಳೆ ಕೃಷಿಗೆ ನೆಲವನ್ನು ಅಗೆದು ಉದ್ದನೆಯ ಗುಂಡಿಯನ್ನು ಮಾಡಿದರೆ ಉತ್ತಮ. ಯಾಕೆಂದರೆ ಅದರ ಬುಡದಲ್ಲಿ ನೀರು ನಿಂತು ಇಂಗುವುಂತಿರಬೇಕು. ಎರಡರಿಂದ ಮೂರು ಅಡಿ ಅಗಲ, ಒಂದರಿಂದ ಒಂದೂವರೆ ಅಡಿ ಆಳ ಹಾಗೂ ಐದು-ಆರು ಅಡಿ ಉದ್ದದ ಗುಂಡಿ ತಯಾರಿಸಿ, ಅದರಲ್ಲಿ ಸ್ವಲ್ಪಹುಡಿ ಗೊಬ್ಬರ, ಹಾಗೂ ಇದ್ದರೆ ಸುಡುಮಣ್ಣು ಹಾಕಿ ಸುಮಾರು ಒಂದುವರೆ ಅಡಿಯಿಂದ ಎರಡು ಅಡಿ ಅಂತರದಲ್ಲಿ ಗೂಟ ಹಾಕಿ ಬಳ್ಳಿಯನ್ನು ನಡಬೇಕು. ಒಂದೆರಡು ವಾರಗಳ ಅನಂತರ ನಾಲ್ಕರಿಂದ ಐದು ಅಡಿ ಎತ್ತರದ ಚಪ್ಪರ ನಿರ್ಮಿಸಿದರೆ ಬಳ್ಳಿ ಹಬ್ಬಲು ಸಹಕಾರಿಯಾಗುವುದು. ಚಪ್ಪರ ಹಾಕುವಾಗ ಎದುರುಗಡೆ ತಗ್ಗಾಗಿ ಹಿಂದುಗಡೆ ಎತ್ತರವಾಗಿದ್ದರೆ ಬಳ್ಳಿ ಮೇಲೇರಲು ಸಹಕಾರಿಯಾಗುತ್ತದೆ.

ಬಳ್ಳಿ ಚೆನ್ನಾಗಿ ಚಿಗುರಲಾರಂಭಿಸಿದಾಗ ಬೂದಿ, ಹಟ್ಟಿಗೊಬ್ಬರ, ಸುಡುಮಣ್ಣು ನೀಡಬೇಕು.ಸೆಗಣಿ ನೀರು ಇನ್ನೂ ಉತ್ತಮ. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನೀರು ಸುರಿಯಬೇಕು. ಮುಂಜಾನೆ ಗಿಡದ ಮೇಲೆ ನೀರು ಚಿಮುಕಿಸಿ ಇಬ್ಬನಿ ಬಿದ್ದಿರುವುದನ್ನು ತೆಗೆಯುವುದರಿಂದ ಬಸಳೆ ರೋಗ ಮುಕ್ತ, ಸ್ವತ್ಛವಾಗಿರುತ್ತವೆ ಹಾಗೂ ಲವಲವಿಕೆಯಿಂದ ಬೆಳೆಯುತ್ತದೆ.

ಬಸಳೆ ನಾಟಿ ಮಾಡಿ ಸುಮಾರು 5 ರಿಂದ 6 ವಾರಗಳಲ್ಲಿ ಕಟಾವಿಗೆ ಬರುತ್ತದೆ. ಚಪ್ಪರದ ಮೇಲೇರುವ ಎಳತಾಗಿರುವ ಬಳ್ಳಿ ನೋಡಿ ಒಂದು ಬಿಟ್ಟು ಒಂದು ಬಳ್ಳಿಯ ರೆಂಬೆ ಕಟಾವು ಮಾಡಿ ಬಿಟ್ಟ ಬಳ್ಳಿ ಮುಂದಿನ ಸಲ ಕಟಾವು ಮಾಡುವುದು ಪದ್ಧತಿ. ಬೆಳೆದ ಬಳ್ಳಿಗಳಿಗಿಂತ ಎಳೆ ಬಳ್ಳಿ ಪಲ್ಯಕ್ಕೆ ರುಚಿ. ಕಟಾವು ಪ್ರಾರಂಭವಾದ ಮೇಲೆ ನಿರಂತರ 10 ರಿಂದ 15 ದಿನಗಳಿಗೊಮ್ಮೆ ಮಾಡಬಹುದು. ಬಿಸಿಲಿನಲ್ಲಿ ಕಟಾವು ಮಾಡಬಾರದು.

ಬಸಳೆಯನ್ನು ನಾವು ನೆಟ್ಟು ಸಾಕಿದರೆ ಅದು ನಮ್ಮನ್ನು ಸಾಕುತ್ತದೆ. ಎಲ್ಲರ ಮನೆಯ ಹಿತ್ತಲಲೊಂದು ಬಸಳೆ ಚಪ್ಪರವಿರಲಿ. ಅದು ಪರಶುರಾಮ ಸೃಷ್ಟಿಯ ಬಳ್ಳಿ ತರಕಾರಿ ಎಂಬ ಹೆಗ್ಗಳಿಕೆ ಪಡೆದು ಇದು ನಮ್ಮದೇ ತರಕಾರಿ ಎಂಬ ಪೇಟೆಂಟ್ ಪಡೆಯಲಿ ಎಂಬ ಸಂದೇಶದೊಂದಿಗೆ.


ಶ್ರೀನಿವಾಸ್ ಪ್ರಭು

ಸ್ಪೂರ್ತಿ ಬಂಟಕಲ್