Thursday, November 1, 2012

ಮಧು




    




 



     ವಿಹಾರಕ್ಕೆ ಹೊರಟ

     ಒಂಟಿ ದುಂಬಿಯು

     ತಂಗಾಳಿನಮಲಿನಲ್ಲಿ

     ತೇಲುತ್ತಿರುವಾಗ,

     ಏಕಾಂತಕ್ಕೊಂದು

     ಸುಖಾಂತ ಬಯಸಿ

     ಕಾನನದ ಮಲ್ಲಿಗೆಯು

     ಸೌರಭವ ಸೂಸಿ

     ಮೌನದಿಂ ಕರೆದಿರಲು -

     ಮಲ್ಲಿಗೆಯ ಮೋಹಕ್ಕೆ 

     ಮರುಳಾದ ದುಂಬಿಯು

     ಸುಶ್ರಾವ್ಯ ಶ್ರುತಿಮೀಡಿ

     ಮಲ್ಲಿಗೆಯ ಮೈದಡವಿ

     ತುಟಿಗೆ ತುಟಿಯಿಟ್ಟು

     ಚುಂಬಕವ ಚುಂಬಿತಾ

     ಮಂಥನದಿಮ್ 

     ಹೊರಬಂದ

     ಮಾದಕ ರಸ !


                                   ಸ್ಪೂರ್ತಿ

                                   ಬಂಟಕಲ್ಲು.

 

 

Wednesday, October 24, 2012

ಮುಗ್ದ ನಗುವಿಗೊಂದು ಮುನ್ನುಡಿ




 
 
 
 
 
 
 
 
ಒಂದು ಮುನ್ನುಡಿ ಬರೆಯ ಹೊರಟೆನು
ಮುಗ್ದ ನಗುನಿನ ಕವನಕೆ,
ಪುಟ್ಟ ಬಾಲೆಯೋ ಪುಟ್ಟ ಬಾಲನೋ 
ಕೊಟ್ಟ ನಗುವಿನ ನೋಟಕೆ. 
 
ಕಣ್ಣ ಹೊಳಪಲಿ ಮೂಗು ಅರಳಿದೆ,
ಗಲ್ಲ ಕೊಂಚನೆ ಉಬ್ಬಿದೆ,
ತುಟಿಯ ನಗೆಯಲಿ ಹಲ್ಲು ಬೆಳಗಿದೆ,
ಕಿವಿಯು ಕೊಂಚನೆ ನಿಮಿರಿದೆ.
 
ಹಾಲು ಹಲ್ಲಿನ ಸಂದು ಗುಂದಲಿ
ಕೆಂಪು ನಾಲಿಗೆ ಇಣುಕಿದೆ,
ಕೆದರು ಕೂದಲು ಹಣೆಯ ಮೇಲಲಿ
ನಗೆಗೆ ಕಚಕುಳಿ ಇಟ್ಟಿದೆ.
 
ಚಿಗುರು ನಗುವಿನ ಮುದದ ನೋಟಕೆ
ಎನ್ನ ಹೃದಯವು ನಾಚಿದೆ,
ತುಟಿಯು ಬಯಸಿದೆ ಮುತ್ತ ಬಿತ್ತಲು
ತುಂಟ ಮಗುವಿನ ಗಲ್ಲಕೆ.
 
                              ಸ್ಪೂರ್ತಿ,
                              ಬಂಟಕಲ್ಲು.
 


                       

Tuesday, October 23, 2012

ಅಂತೆ ಕಂತೆಗಳ ಸಂತೆ.




ಈ, ಅಂತೆ ಕಂತೆಗಳ ಸಂತೆಯಲಿ,

ಭಾರೀ ಬೆಲೆ ಇದೆಯಂತೆ,

ಬೇಡಿಕೆಯೂ ಇದೆಯಂತೆ.

ಇಲ್ಲ ಸಲ್ಲದ, ಮಾತ ಮುತ್ತಿಗೆ,

ದಾರ ಪೋಣಿಸಿ ಹೆಣೆದ ಹಾರಕೆ,

ಕಟ್ಟು ಕತೆ ಪೊಟ್ಟು ಕತೆ,

ಗುಟ್ಟು ಕತೆ ಕರ್ತನಿಲ್ಲದ-

ಕಾದಂಬರಿಗೂ,

ಈ, ಅಂತೆ ಕಂತೆಗಳ ಸಂತೆಯಲಿ,

ಭಾರೀ ಗೌರವವೂ ಇದೆಯಂತೆ,

ಪ್ರಶಸ್ತಿಪುರಸ್ಕಾರವೂ,

ಪುಕ್ಕಟೆ ದೊರೆಯುವುದಂತೆ,

ಕತೆ ಕವನಗಳ ಕರ್ತೃ,

ಯಾರದರೆನಂತೆ,

ಕರ್ತೃವಿನ ಹೆಸರ ತೆಗೆದು,

ಅಲ್ಲಿ ಇಲ್ಲಿ ಅ ಆ ಇ ಈ,

ಸೇರಿಸಿದರೆ ಸಾಕು,

ಕೃತಿ ಚೌರ್ಯದಿಂದ ಮುಕ್ತಿ ಪಡೆದು,  

ಜಾಮೀನಿನಿಂದ ಜೈಲ ಹೊರಗಡೆ,

ಬಂದ ರಾಜಕೀಯ ಕೈದಿಗೆ,

ಸಿಗುವ ಎಲ್ಲಾ ರಾಜ ಮರ್ಯಾದೆಯ,

ಅನುಗ್ರಹದ ವ್ಯವಸ್ಥೆಯೂ,

ಇದೆಯಂತೆ,

ಈ, ಅಂತೆ ಕಂತೆಗಳ ಸಂತೆಯಲಿ..

                                                   ಸ್ಪೂರ್ತಿ
                                                   ಬಂಟಕಲ್ಲು

Thursday, October 18, 2012

ಕೃಷಿ - ಖುಷಿ.


                 ಕೃಷಿ - ಖುಷಿ.



              

              


               ಪಶ್ಚಿಮ ಘಟ್ಟದ ಬೆಟ್ಟದ ಬುಡದಲಿ

               ಮನೆಯನು ಮಾಡಿಹ ಓ ಗೆಳೆಯ,

               ಸುಂದರ ಹಸಿರಿನ ಒಸರಿನ ಮಣ್ಣಲಿ

               ಫಸಲನು ಬೆಳೆದಿಹ ನನ್ನ ಒಡೆಯ.


               ಗದ್ದೆಯ ಉತ್ತು ನೀ ಬೆಳೆದಿಹ ಭತ್ತದ

               ಪೈರಲಿ ತೆನೆಯದು ಮನ ಸೆಳೆವ,

               ಫಸಲಲಿ ಬರೆದಿದೆ ಹೊನ್ನಿನ ಕುಂಡಲಿ

               ಮಣ್ಣಿನ ಮಗನಿಗೆ ಭುವಿ ಹೃದಯ.

               ಬಸುರಿನ ಬಾಳೆಯ ಹಂದರದಡಿಯಲಿ

               ಬೆಳೆದಿಹೆ ಬದನೆ ಅಲಸಂದೆ,

               ಬೆಂಡೆ ತೊಂಡೆ ಕುಂಬಳ ಸೌತೆ,

               ಎಲ್ಲವ ಬೆಳೆದು ನೀ ಸುಖ ಕಂಡೆ.


               ತೆಂಕಣ ಬಿಸಿಲಿಗೆ ಬೆದರುವ ಕಂಗು

               ತೆಂಗಿನ ತೋಟದ ಮರೆಯಲಿ ಅಡಗಿ,

               ಮೆಣಸಿನ ಬಳ್ಳಿಗೆ ಮುತ್ತನು ಕೊಟ್ಟು

               ಒಡೆಯನ ಹೃದಯವ ಬೆಸೆಯುತಿವೆ.

 
               ಹಟ್ಟಿಯಲಿರುವ ಗಬ್ಬದ ಗೋವು

               ಮೆಲ್ಲುತಲಿಹುದು ಹಬ್ಬದ ಮೇವು,

               ಬದಿಯಲಿ ಬೆಳೆದಿಹ ಹುಲ್ಲಿನ ಚಾದರ

               ಕಂಡದು ಮರೆತಿದೆ ಪ್ರಸವದ ನೋವು.

 
                                                      ಸ್ಪೂರ್ತಿ,
                                                      ಬಂಟಕಲ್ಲು.

ಮುತ್ತಿಟ್ಟು ತಿಳಿಬೆಳಕು
ಅತ್ತಿತ್ತ ಹರಿಯುತ್ತ
ತೋರೈತೆ ತಳಕು

Saturday, October 6, 2012

ಏನು ಫಲ?


             ಏನು ಫಲ? 

   

               ಮುಸಲಧಾರೆಯು ಸುರಿದು,

               ನದಿಗಳು ತುಂಬಿ ತುಳುಕಿ,

               ಹರಿದರೇನು ಫಲ?

               ಸಾಗರದೊಡಲಲ್ಲದೆ,

               ತುಂಬುವುದೇ ಹೂಳು-

               ತುಂಬಿದ ಈ ಜಲಾಶಯ?



               ಬರಗಾಲ ಬಂದಾಗ,

               ನೀರಿಗಾಗಿ ಪರಸ್ಪರ,

               ಕಾದಾಡಿದರೇನು ಫಲ?

               ಇಬ್ಬರ ಜಗಳದೊಳು,

               ಸಮೂರನೇಯವನಿಗೆ,

               ಸಿಗದೇ ಫಲಾನು ಫಲ?


               ಅಕಾಲದಲಿ ಬಾನೊಳು,

               ಮೋಡ ಮುಸುಕಿ,

               ಮಳೆಯಾದರೇನು ಫಲ?

               ಸಕಾಲಿಕ ಬೆಳೆಗೆ,

               ಹಾನಿಯಾಗದೇ

               ಈ ಮರುಳು ಜಲ?



               ನಾಡು - ನುಡಿ

               ನೆಲ – ಜಲವ, ಹಾಡಿ,

               ಹೋಗಳಿದರೇನು ಫಲ?

               ಭ್ರಷ್ಟ ಮಾರ್ಗದಿ ಧಿಟ್ಟ,

               ಹೆಜ್ಜೆಯನ್ನಿಟ್ಟು, ವಂಚನೆಯನು,

               ಮಾಡಲಾರರೇ ಈ ಜನ?


                                                               ಸ್ಫೂರ್ತಿ,

                                                               ಬಂಟಕಲ್ಲು

Friday, September 28, 2012

ದಶಂಬರ ತಿಂಗಳ ಇತಿಹಾಸ.


 

ರೋಮನ್ ಕ್ಯಾಲೆಂಡರ್ ಬೆಳೆದು ಬಂದ ಪರಿ.


ಡಿಸೆಂಬರ್ ಹಿಂದೆ ಹತ್ತನೆಯ ತಿಂಗಳಾಗಿತ್ತು..!


1.      ಜನವರಿ: ಜನೂಸ್  ತಿಂಗಳು. ಜನೂಸ್  ಅಂದರೆ ರೋಮನ್ನರ ದ್ವಾರಗಳಿಗೆ ಸಂಬಂಧಿಸಿದ, ವಿರುದ್ದ ದಿಕ್ಕು ದಿಟ್ಟಿಸುವ ಎರಡು ಮುಖಗಳ ದೇವತೆ. ಆರಂಭದ ಮತ್ತು ಅಂತ್ಯದ ದೇವತೆಯೂ ಆಗಿದೆ.

2.     ಫೆಬ್ರವರಿ: ಫೆಬ್ರುವ ಅಂದರೆ ಪರಿಶುದ್ದತೆಯ ರೋಮನ್ ಹಬ್ಬ. ಹದಿನೈದರಂದು ಆಚರಣೆ.

3.     ಮಾರ್ಚ್: ಮಾರ್ಸ್ ಮಂತ್. ಮಾರ್ಸ್ ಅಂದರೆ ರೋಮನ್ನರ ಯುದ್ದ ದೇವತೆ.

4.    ಏಪ್ರಿಲ್ :ಅಪ್ರೋ ಅಂದರೆ ಗ್ರೀಕರ ಪ್ರೀತಿ ಮಂತ್ತು ಸಂದರ್ಯದ ದೇವಿ. ರೋಮನ್ ವಿನಸ್ ದೇವಿಯ ಜತೆ ಸಮೀಕರಣ.

5.     ಮೇ: ಮ್ರಿಯಾ ಅಂದರೆ ಅತೀ ಶ್ರೇಷ್ಟ. ಇಟಲಿಯನ್ನರ ವಸಂತ ದೇವತೆ. ಮೆಯೇಸ್ತ ರೋಮ್ಮನ್ನರ ಗೌರವ ದೇವತೆ ಕೂಡ.

6.    ಜೂನ್: ಜುನೋಸ್ ಮಂತ್. ಜುನೋಸ್ ಅಂದರೆ ರೋಮನ್ನರ ವಿವಾಹ ಮತ್ತು ಮಹಿಳಾ ರಕ್ಷಣೆಯ ದೇವಿ. ಗ್ರೀಕ್ ನ ಹೆರಾ ದೇವಿಯೊಂದಿಗೆ ಸಮೀಕರಣ.

·         ಜುಲೈ:  ಜೂಲಿಯಸ್ ಸಿಸರನು ರೋಮನ್ ಕ್ಯಾಲೆಂಡರನ್ನು ಪರಿಷ್ಕರಿಸಿದ. ಈ ತಿಂಗಳನ್ನು ತನ್ನದೇ ಹೆಸರಿಟ್ಟ. ಜೂಲಿಯಸ್ ಸಿಸರ್ ಮಂತ್. ಇದು ಮುಂದೆ ಜುಲೈ ಎಂದಾಯಿತು.

·         ಆಗಸ್ಟ್:ಅಗಸ್ಟಸ್ ಸಿಸರನು ಜೂಲಿಯಸ್ ಸೀಸರನ ಕ್ಯಾಲೆಂಡರನ್ನು ಪರಿಷ್ಕರಿಸಿದ. ಈ ತಿಂಗಳಿಗೆ ತನ್ನದೇ ಹೆಸರನ್ನು ಅಂಟಿಸಿದ.

7.     ಸೆಪ್ಟೆಂಬರ್: ಆಗಿನ ಕಾಲಕ್ಕೆ ಈ ಅವಧಿಗೆ ಸೆವೆಂತ್ ಮಂತ್. ಸೆಪ್ಟ ಅಂದರೆ ಏಳು.

8.     ಅಕ್ಟೋಬರ್: ಕಾಲಕ್ಕೆ ಅದು ಎಂಟನೇಯ ತಿಂಗಳಾಗಿತ್ತು. ಅಕ್ಟೋ ಅಂದರೆ ಲಾಟಿನ್ ಭಾಷೆಯಲ್ಲಿ ಎಂಟು ಎಂದರ್ಥ.

9.    ನವಂಬರ: ಲಾಟಿನ್ ಭಾಷೆಯಲ್ಲಿ ನವಂಬ್ರಿಸ್ ಅಂದರೆ ನೈಂತ್ ಮಂತ್ ಎಂದರ್ಥ. ಅಂದರೆ ಇದು ಒಂಬತ್ತನೆಯ ತಿಂಗಳು.

10.   ದಶಂಬರ: ಆಗಿನ ಕಾಲಕ್ಕೆ ಇದು ಹತ್ತನೆಯ ತಿಂಗಳು. ಲ್ಯಾಟಿನ್ ಭಾಷೆಯಲ್ಲಿ ಡಿಸೆಂ ಅಂದರೆ ಹತ್ತು. ಅದ್ದರಿಂದ ಇದು ಹತ್ತನೆಯ ತಿಂಗಳು..

ಹತ್ತನೆಯ ತಿಂಗಳನ್ನು ರೋಮನ್ ಭಾಷೆಯಲ್ಲಿ  X ಎಂದು ಬರೆಯಲಾಗುತ್ತದೆ. ಅದ್ದರಿಂದ ಹತ್ತನೆಯ ತಿಂಗಳಲ್ಲಿ ಬರುವ ಕ್ರಿಸ್ಮಸ್ ಹಬ್ಬವನ್ನು “ X-Mas ” ಎಂದು ಬರೆಯುವ ರೂಢಿ ಇದೆ. ( ಈಗ ಈರಿತಿ ಬರೆಯುದನ್ನು ಕೆಲವರು ಒಪ್ಪುದಿಲ್ಲ). ಹಾಗಾಗಿ ರೋಮನ್ ಕ್ಯಾಲೆಂಡರ್ ಆರಂಭದಲ್ಲಿ ಕೇವಲ ಹತ್ತೆ ತಿಂಗಳಿಂದ ಕೂಡಿತ್ತು ಎಂಬುದಕ್ಕೆ ಇದೇ ಸಾಕ್ಷಿ. ಹತ್ತನೆಯ ತಿಂಗಳಲ್ಲಿ ಬರುವ ಅಂದರೆ ಡಿಸೆಂಬರ 25 ರಂದು ಯೇಸು ಕ್ರಿಸ್ತರ ಜನ್ಮ ದಿನಾಂಕದ ಹಬ್ಬ ಕ್ರಿಸ್ಮಸ್ ಆಚರಣೆ.

ಆ ಕಾಲಕ್ಕೆ ಹಿಂದೂ ಪಂಚಾಗದಲ್ಲಿ ಈಗಿರುವಂತೆ ಎರಡು ಪಕ್ಷ ( ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ) ಸೇರಿ ಒಂದು ತಿಂಗಳು, ಹನ್ನೆರಡು ತಿಂಗಳು ( ಮೇಷಾದಿ ) ಸೇರಿ ಒಂದು ವರ್ಷದ ಗಣನೆ ಇತ್ತು. ತಿಂಗಳಿಗೋಮ್ಮೆ ಬರುವ  ಅಮಾವಾಸ್ಯೆ – ಹುಣ್ಣಿಮೆ ಗಳು ಪೂರ್ವ ನಿರ್ಧರಿತ ಲೆಕ್ಕಾಚಾರದಂತೆ ಸರಿಯಾಗಿ ಬರುತಿದ್ದವು. ಇದನ್ನರಿತ ರೋಮನ್ನರು ತಮ್ಮ ಕ್ಯಾಲೆಂಡರ್ ನಲ್ಲಿ ಜುಲೈ ಮತ್ತು ಅಗಸ್ಟ್ ( ಮೇಲೆ ತಿಳಿಸಿದಂತೆ) ಇನ್ನೆರಡು ತಿಂಗಳುಗಳನ್ನು ಸೇಸಿರಿ ಒಟ್ಟು ಹನ್ನೆರಡು ತಿಂಗಳ ಕ್ಯಾಲೆಂಡರ್ ಆಗಿ ಪರಿವರ್ತಿಸಿದ್ದು ಗೋಚರಕ್ಕೆ ಬರುತ್ತದೆ. ಈ ರೀತಿ ಪರಿವರ್ತನೆಗೊಂಡಾಗ  ಕ್ರಿಸ್ಮಸ್ ಹಬ್ಬ ಹನ್ನೆರಡನೆಯ ತಿಂಗಳಲ್ಲಿ ಗೋಚರಕ್ಕೆ ಬಂದರೂ, ಅದನ್ನು ಹತ್ತನೆಯ ತಿಂಗಳಲ್ಲಿಯೇ ನಿಲ್ಲಿಸುವುದಕ್ಕಾಗಿ, ಮಾರ್ಚ್ ತಿಂಗಳು ಮೊದಲ ತಿಂಗಳಾಗಿ ಗಣನೆಗೆ ತೆಗೆದುಕೊಂಡು, ಜನವರಿ ಆರಂಭಿಕ ಹಾಗೂ ಫೆಬ್ರವರಿ ಕೊನೇಯ ತಿಂಗಳಾಗಿ ಇರಿಸುವಂತೆ ಅಲಿಖಿತವಾಗಿ ಒಪ್ಪಿದ್ದು ಈಗ ಇಸಿಹಾಸ.
 
ಸ್ಫೂರ್ತಿ,
ಬಂಟಕಲ್ಲು.
29.09.2012
                                                                                                                     
                                                                                                                                                
                                                                                                               


 

ಉತ್ತರ ಕನ್ನಡ - ದಕ್ಷಿಣ ಕನ್ನಡ.


ನಾಡು-ನುಡಿ

          ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಹೆಸರು ಬದಲಾವಣೆಗೆ ಬುದ್ದಿ ಜೀವಿಗಳ ಒತ್ತಾಯ... ಸುದ್ದಿ.
ಕರ್ನಾಟಕವೂ ಒಂದೆ, ಕನ್ನಡವೂ ಒಂದೆ. ಆದರೆ ಗ್ರಾಮೀಣ ಕನ್ನಡದಲ್ಲಿ  ಹಲವು ಬಗೆ. ಪ್ರತಿಯೊಂದು ಜಿಲ್ಲೆಯ ಜನರ ಆಡು-ನುಡಿಯಲ್ಲಿ  ನಾಡು-ನುಡಿಯೋಟ್ಟಿಗೆ  ಸ್ಥಳೀಯ ಸಾಂಸ್ಕೃತಿಕ ಬಣ್ಣದ ಸೊಗಡು ಸೇರಿ ಭಾಷಾ ವೈವಿದ್ಯತೆ ಕಂಡು ಬರುತ್ತದೆ. ಅದೇ ರೀತಿ, ಕರಾವಳಿ ಕನ್ನಡದಲ್ಲಿ ಎರಡು ವಿಧ. ಒಂದು ದಕ್ಷಿಣ ಕನ್ನಡದ ಕನ್ನಡ ಇನ್ನೊಂದು ಉತ್ತರ ಕನ್ನಡದ ಕನ್ನಡ. ದಕ್ಷಿಣ ಕನ್ನಡದ ಜನ ಶುದ್ದ ಕನ್ನಡದ ಬಳಕೆ ಮತ್ತು ಉತ್ತರ ಕನ್ನಡದಲ್ಲಿ ಹಳೇಕನ್ನಡದ ಬಳಕೆ. ಇವೆರಡರ ಗುರುತಿಸುವಿಕೆಗಾಗಿಯೇ ಕರಾವಳಿ ಕರ್ನಾಟಕದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಎಂಬ ನಾಮ ಹುಟ್ಟಿದ್ದು. ಇದು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎಂಬುದಾಗಿ ಅಲ್ಲ. ಹಾಗಾಗಿ ನಾಮ ಬದಲಾವಣೆಯಿಂದ ಈ ಎರಡು ಕನ್ನಡಗಳ ಕೊಲೆ ಮಾಡಿದಂತಾಗುತ್ತದೆ. ಹಿಂದಿನ ಹೆಸರುಗನ್ನು ಬದಲಾಯಿಸುದಕ್ಕಿಂತ ಈ ಹೆಸರುಗಳು ಹುಟ್ಟಿ ಬಂದ ಬಗ್ಗೆ ಸಂಶೋಧನೆ ಮಾಡಿ ಅದನ್ನು ಮುಂದಿನ ಪೀಳಿಗೆಯ ಜನರಿಗೆ ತಿಳಿಯ ಹೇಳುವುದು ಬುದ್ದಿ ಜೀವಿಗಳು ಮಾಡಬೇಕಾದ ಮೊದಲ ಕರ್ತವ್ಯವಾಗಬೇಕೆ ಹೊರತು, ಹೆಸರನ್ನೇ ಬದಲಾಯಿಸಿ ಬಿಡುವುದರಿಂದ ನಮ್ಮ ನಾಡು-ನುಡಿ ಬೆಳೆದು ಬಂದ ಪರಿ ಮತ್ತು ಅಲ್ಲಿನ ಸಾಂಸ್ಕೃತಿಕ ಸೊಗಡು  ಮುಂದಿನ ಪೀಳಿಗೆಗೆ ತಿಳಿಯದೇ ಹೋಗುವಂತಾಗಬಹುದು. ಹಾಗಾಗಿ ಈಬಗ್ಗೆ ಇನ್ನೊಮ್ಮೆ ಬುದ್ದಿ ಜೀವಿಗಳು ಚಿಂತನೆ ಮಾಡುವ ಅಗತ್ಯತೆ ಕಂಡು ಬರುವುದಿಲ್ಲವೇ? ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಅಳಿಯದಿರಲಿ ಬದಲಾಗಿ ಬೆಳೆದು ಬಾಳಲಿ - ಶುಭವಾಗಲಿ.

                                                                                                                    ಸ್ಫೂರ್ತಿ
                                                                                                                    ಬಂಟಕಲ್ಲು,
                                                                                                                    28.09.2012