Friday, March 1, 2013

ಕರ್ನಾಟಕದಲ್ಲಿ ಕನ್ನಡ ಬೆಳಗಬೇಕಾದರೆ....






ಕರ್ನಾಟಕದಲ್ಲಿ '' ಕನ್ನಡ ಮಾತೃ ಭಾಷಾ ದಿನ'' ವನ್ನು ವರ್ಷದ ಒಂದು ದಿನ ಆಚರಿಸುವುದು ಸೂಕ್ತವೋ ಅಲ್ಲವೋ ಎಂಬುದು ಕನ್ನಡಿಗರು ಯೋಚಿಸಬೇಕಾಗಿದೆ.  ಕನ್ನಡವನ್ನೇ ಮಾತೃ ಭಾಷೆಯನ್ನಾಗಿ ಆಡುವವರು ಆಚರಿಸಬಹುದು. ಆದರೆ ಇತರ ರಾಜ್ಯಗಳಂತೆ ಕರ್ನಾಟಕದಲ್ಲಿ ಕನ್ನಡ ಒಂದೇ ಮಾತೃಭಾಷೆಯಲ್ಲ! ಇಲ್ಲಿ ಕೊಂಕಣಿ, ತುಳು, ಆದಿವಾಸಿ, ಬ್ಯಾರಿ, ಉರ್ದು,.... ಹೀಗೆ ಜನರ ಮಾತೃ ಭಾಷೆಯ ಪಟ್ಟಿಯೇ ದೊಡ್ಡದಿದೆ!

ಕರ್ನಾಟಕದಲ್ಲಿ ಇರುವವರೆಲ್ಲ ಕನ್ನಡ ಮಾತೃ ಭಾಷೆಯವರಲ್ಲ ಆದರೆ ಎಲ್ಲರೂ ಕನ್ನಡಿಗರು ಖಂಡಿತ! ಇಲ್ಲಿ ಕನ್ನಡ ಮಾತೃ ಭಾಷೆಯವರೋಟ್ಟಿಗೆ ಇತರ ದ್ರಾವೀಡ ಹಾಗೂ ಸಾರಸ್ವತ ಭಾಷೆಯನ್ನೂ ಆಡುವವರು ಇದ್ದಾರೆ '' ಕನ್ನಡ ಮಾತೃ ಭಾಷಾ ದಿನ'' ಕೇವಲ ಅಕಾಡಮಿಯ ದುಡ್ಡನ್ನು ಬಳಸಿ ವೇದಿಕೆಯಲ್ಲಿಯವರೆಗೆ ಮಾತ್ರ ಸೀಮಿತ ಗೊಳಿಸದೆ, ಕನ್ನಡದ ಸವಿಯನ್ನು ಇತರ ಮಾತೃ ಭಾಷೆಯವರೊಟ್ಟಿಗೆ ಹಂಚಿ ಸವಿಯುವ ಕಾರ್ಯಕ್ರಮಗಳು ನಡೆಯಬೇಕಾಗಿವೆ. ಪ್ರಸ್ತುತ ಕನ್ನಡ ಕೇವಲ ವೇದಿಕೆಗಳ ಮೇಲೆ ಆಚರಿಸಲ್ಪಡುತ್ತಿರುವ ಹಬ್ಬ ಯಾ ಕಾರ್ಯಕ್ರಮ ವಾಗುತ್ತಿರುವುದುವುದು ಒಂದು ರೀತಿಯ ವಿಪರ್ಯಾಸವೇ ಸರಿ.

ಕನ್ನಡವನ್ನು ಕರ್ನಾಟಕದ ಮನೆ-ಮನಗಳಲ್ಲಿ ಬಿತ್ತಿ ಬೆಳೆಸಬೇಕಾದರೆ ಕನ್ನಡದ ಹಿಂದೆ ಇರುವ ಬಣ್ಣದ ಧ್ವಜ ಯಾ ದೈವೀ ಕರಣದ ಪರದೆಯನ್ನು ಬದಿಗೆ ಸರಿಸಿ, ಭಾಷೆಗೊಂದು ಜಾತಿ, ಧರ್ಮ, ಪಂಥದ ವ್ಯಾಖ್ಯೆ ಕೊಡದೆ '' ಕನ್ನಡ, ಸರ್ವತ್ರ ಕನ್ನಡ, ಕರ್ನಾಟಕದ ಜನರ ಕನ್ನಡ'' ಎಂಬುದಾಗಿ ಸಾರ್ವತ್ರೀಕರಣ ಗೊಳಿಸುವ ಕಾರ್ಯವಾಗಬೇಕಾಗಿದೆ. ಇದಕ್ಕಾಗಿ ಕನ್ನಡ ಪರ ಸಂಘಟನೆಗಳು ಮತ್ತು ಅಕಾಡಮಿ ಸೇರಿ ಕನ್ನಡ ಯಾರಿಗೂ ಅಸ್ಪೃಶ ಭಾಷೆಯಾಗದಂತೆ ನೋಡಿ ಕೊಂಡು ಈಗ ಇರುವ ನ್ಯುನತೆಗಳನ್ನು ಸರಿಪಡಿಸಿ ಎಲ್ಲಾ ಧರ್ಮೀಯರನ್ನು ಆಕರ್ಷಿಸುವಂತೆ ಮಾಡುವ ಕಾರ್ಯವಾಗಬೇಕಾಗಿದೆ.

ಕನ್ನಡವೇ ರಾಮ,
ಕನ್ನಡವೇ ಜೀಸಸ್,
ಕನ್ನಡದಲಿ ಅಲ್ಲಾನ
ಕಾಣಿರೋ!
ಕನ್ನಡವ ಬಿತ್ತಿ
ದೇವಸ್ಥಾನದ,
ಕಲಶದೊಳು!
ಕನ್ನಡವ ಕೆತ್ತಿ
ಶಿಲುಬೆಯ,
ಶಿಖರದೊಳು!
ಕನ್ನಡವ ಕಾಣಿ
ಮಸೀದಿಯ,
ಗೊಮ್ಮಟದೊಳು.
ಕನ್ನಡದ ಪರಿಮಳ
ಪಸರಿಸಲಿ
ಜೈನ ಬಸದಿಯೋಳು!
ಕನ್ನಡಕಂಡರೆ
ಅರಳಲಿ ಕಣ್ಗಳು
ಕನ್ನಡ ಉಲಿಯಲಿ
ಮುದ್ದು ಕಂದಮ್ಮಗಳ
ತುಟಿಯಲಿ,
ತೊದಲು ನುಡಿಯಲಿ!


ಕನ್ನಡವನ್ನು ಯಾವುದೇ ಧಾರ್ಮಿಕ ಸಂಘಟನೆಗಳಾಳದೆ, ಕನ್ನಡ ನಮ್ಮ ನೆಲ - ಜಲದ ಭಾಷೆ, ಕನ್ನಡ ಕರ್ನಾಟಕದವರೆಲ್ಲರ ಆಸ್ತಿ ಎಂಬುದಾಗಿ ಕನ್ನಡವಾಸಿಗರ ಮನದಲ್ಲಿ ಹಾಗೂ ಎಲ್ಲಾ ಮಾತೃ ಭಾಷೆ ಆಡುವವರ ಮನದಲ್ಲಿ ಮೂಡಿಸುವ ಕಾರ್ಯ ಎಲ್ಲಾ ಧರ್ಮದವರು ಕೂಡಿ ಮಾಡಬೇಕಾಗಿದೆ. ಹೀಗೆ ಮಾಡುವುದರಿಂದ ಕನ್ನಡ ಖಂಡಿತ ಬೆಳೆಯುವುದರಲ್ಲಿ ಸಂದೇಹವಿಲ್ಲ.

ಸ್ಪೂರ್ತಿ,
ಬಂಟಕಲ್ಲು.
 

No comments:

Post a Comment