Friday, March 1, 2013

ನಾನೂ ಅಷ್ಟಮಂಗಲವೂ

 

ಅಷ್ಟಮಂಗಲ ಎಂದರೆ ಯಾರಿಗೊತ್ತಿಲ್ಲ? ಇವತ್ತು  ರಸ್ತೆಯ ಬದಿಯಲಲ್ಲಿ ಬೇಕಾದರೂ  ಅಷ್ಟಮಂಗಲ ಹಾಕುವ ಮತ್ತು ಅದಕ್ಕೆ ಅಣಿಮಾಡುವ ಜನರಿದ್ದಾರೆ. ಅಷ್ಟಮಂಗಲ ಎಂಬುದು ಈಗ ಫ್ಯಾಶನ್ ಆಗಿ ಬಿಟ್ಟಿದೆ. ಎಲ್ಲಾ ಕಡೆ ಎಲ್ಲದಕ್ಕೂ 'ಅಷ್ಟಮಂಗಲ'! ಇದಕ್ಕೆಂದೇ ಕೆಲವು ಏಜಂಟರು ಇದ್ದಾರೆ. ಕೆಲವರು ಶಾಸ್ತ್ರೀಯ ರೀತಿಯಲ್ಲಿ ಮಾಡಿದರೆ ಇನ್ನು ಕೆಲವರು ಕಂಪ್ಯೂಟರ್ ನೋಡಿ ಅಷ್ಟಮಂಗಲದ ಮೋಡಿ ಬಿಡಿಸುವವರಿದ್ದಾರೆ.
 
ಕಳೆದ ಸಲ ನಾನೊಂದು ಅಷ್ಟಮಂಗಲದಲ್ಲಿ ಭಾಗವಹಿಸಿದ್ದೆ. ಇದು ತೀರಾ ಮೋಡರ್ನ್ ಅಷ್ಟಮಂಗಲ! ಮನೆ ಮಂದಿಗೆಲ್ಲಾ ಕೂರಿಸಿ, ಎದುರಿನಲ್ಲಿ ದೀಪ ಹೊತ್ತಿಸಿ, ತದನಂತರ ಕಣ್ಣು ಕುಕ್ಕುವ ಬಣ್ಣದ ಹುಡಿಯಿಂದ ಮಂಡಲ ಬರೆದು, ಮಂಗಲ ದ್ರವ್ಯ, ಹೂ ಹಣ್ಣು, ಕಾಯಿ ಇತ್ಯಾದಿ ಇತ್ಯಾದಿಗಳಿಂದ ಶೃಂಗರಿಸಿಟ್ಟು, ಬದಿಯಲ್ಲಿ ಕಂಪ್ಯೂಟರ್ ತೆರೆದಿಟ್ಟು ಅಗರಬತ್ತಿಯ ಘಮ ಘಮ ಪರಿಮಳದೊಂದಿಗೆ ಸಾಗಿತ್ತು ತಯಾರಿ!
 
ಅಷ್ಟು ಹೊತ್ತಿಗೆ ನನ್ನ ಪ್ರವೇಶ... ಸುತ್ತಲೂ ನೋಡಿದೆ. ಎನೋ ಒಂದು ರೀತಿಯ ಉಲ್ಲಾಸ! ದೇವಸ್ಥಾನಕ್ಕೆ ಹೊಕ್ಕ ಅನುಭವ! ಅಧುನಿಕ ಶಾಸ್ತ್ರಿಗಳು ಹಾಗೂ ಮನೆ ಮಂದಿ ಸ್ವಾಗತಿಸಿ, ನಿಮ್ಮನ್ನೇ ಕಾಯುತ್ತಿದ್ದೆವು ಹೊತ್ತು ಮೀರುತ್ತಿದೆ ಮತ್ತೆ ಗುಳಿಕ ಕಾಲ ಆರಂಭವಾದರೆ ಅಶುಭ! ಎನ್ನುತ್ತಲೇ ಶಾಸ್ತ್ರಿಗಳು ಸಂಸಾರದವರಿಂದ ಸಂಕಲ್ಪ ಮಾಡಿಸಿ,  ಏಕ ಕಾಲದಲ್ಲಿ ಒಂದು ಕೈಯಿಂದ ಒಂದಷ್ಟು ಕವಡೆ ಎತ್ತಿ ಇನ್ನೊಂದು ಕೈಯಿಂದ ಕಂಪ್ಯೂಟರ್ ಗುಂಡಿ ಒತ್ತಿ ಲಗ್ನ ನಿರ್ಧರಿಸಿ ಬಿಟ್ಟಿದ್ದರು! ಅದು ಕುಂಭ ಲಗ್ನವಾಗಿತ್ತು.
 
ಕುಂಭ ಎಂದರೆ ಮತ್ತೆ ಹೇಳಬೇಕೆ? ವೈಶಾಖದಲ್ಲಿ ಮುನ್ಸಿಪಾಲಿಟಿ ನೀರಿನ ನಲ್ಲಿಯಿಂದ ಹರಿದು ಬರುವ ನೀರಿನಂತೆ ನನ್ನ ಗಿಂಬಳವಿಲ್ಲದ ಸಂಬಳ ಈ ಕುಂಭದಲ್ಲಿ ಜೀವನ ಪರ್ಯಂತ ತುಂಬಿದರೂ ಮುಂದಿನ ಜನುಮಕ್ಕೂಅದು ತುಂಬುತ್ತದೆ ಎಂಬ ಭರವಸೆವಿಲ್ಲದ ಬರೇ ನರ ಪ್ರಾಣಿ ನಾನು. ಕಾಪಾಡೆಯ ಭಗವಂತ ಎಂದು ಮನಸಿನಲ್ಲಿಯೇ ದೇವರಲ್ಲಿ ನನ್ನೊಡಲ ಅಳಲನ್ನು ನಿವೆದಿಸಿಕೊಂಡೆ.
 
ಅಷ್ಟರಲ್ಲಿ, ಧರಣಿ ಮಂಡಲ ಮಧ್ಯದೊಳಗಿರುವ ಅಷ್ಟಮಂಗಲದ  ಮಂಡಲದೊಳಗೆ ಕಂಪ್ಯೂಟರ್ ಕಮಂಡಲದಿಂದ ಹೊರಬಂದ ದ್ವಾದಶ ರಾಶಿಗಳು ಒಂದೊಂದು ಮನೆಯಲ್ಲಿ ಸಾಲಾಗಿ ಕುಳಿತು ಈ ಮನೆಗಳ ಹಕ್ಕು ಸ್ವಾಮ್ಯ ಯಾರ ಹಂಗೂ ಇಲ್ಲದೆ ಪಡೆದು ಕೊಂಡವು. ಆದರೆ ಸೌರಮಂಡಲ ಮಧ್ಯದೊಳಗಿನ ನವಗ್ರಹಗಳು ಬಿಡಬೇಕಲ್ಲ! ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಎಲ್ಲವೂ ಕಂಪ್ಯೂಟರ್ ನಿಂದ ದಂಡೆತ್ತಿ ಬಂದು ತಮಗೆ ಪ್ರಿಯವಾದ ಮನೆಗಳಲ್ಲಿ ಅಕ್ರಮವಾಗಿ ಕಂಪ್ಯೂಟರ್ ನಿಂದ ಹೊರಬಂದು ಕುಳಿತ ಮೇಷ, ವೃಷಭ,ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಮುಂಭ, ಮೀನ ಗಳೇ ಮೊದಲಾದ ದ್ವಾದಶ ರಾಶಿಗಳಮೇಲೆ ಜಗಳಕ್ಕೆ ನಿಂತವು!
 
ಇವುಗಳಲ್ಲಿ  ಸಾದು ಗ್ರಹಗಳು ಸುಮ್ಮನೆ ಜಾಗ ಸಿಕ್ಕಿದ್ದಲ್ಲಿ ಕುಂತರೆ.... ಕುತಂತ್ರಿಗಳು ಬಿಡಬೇಕಲ್ಲ..! ಅವು ಅಲ್ಲಿ ಜಾಗ ಸಿಕ್ಕಿಲ್ಲ ಎಂದು ನನಗೆ ನನ್ನ ಲಗ್ನದಲ್ಲಿ ಮಾವನಿಂದ ದೊರಕಿರುವ ಮನೆಗೆ ಮುತ್ತಿಗೆ ಹಾಕಲು ಆರಂಭಿಸಿದವು! ಈಗ ನನಗೆ ಜ್ಞಾನೋದಯವಾಯಿತು! ಮನೆ ಮುತ್ತಿದ ಗ್ರಹಗಳು ಮನೆಯೊಡತಿಯ ಮೈ ಮೇಲಿನ ಬೆಳ್ಳಿಯ ಸರಗಳನ್ನು ಬಿಟ್ಟು, ಉಳಿದ ಒಂದು ಗ್ರಾಂ ಚಿನ್ನ ಲೇಪನದ ದ ಸರವನ್ನೂ ಬಿಡದೆ ಹೊರಡಲಾರವು ಎಂದು!  ಅವುಗಳು ನನ್ನ ಚಿಕ್ಕ ಸಂಸಾರವನ್ನು ಕಬಳಿಸುವ ಮುನ್ನ ನಾನು ನನ್ನ ಚಿಕ್ಕ ಟಾಟಾ ನಾನೋದೊಂದಿಗೆ ಅಷ್ಟಮಂಗಲದ ಮನೆಯಿಂದ ಜಾಗ ಖಾಲಿ ಮಾಡಿದೆ!
 
ಇದಕ್ಕೆ ಏನಂತಾರೆ ನಮ್ಮ ಓದುಗರು

No comments:

Post a Comment