Tuesday, August 19, 2014

ಗೆಣಸು.


ಗೆಣಸು.



ಪ್ರಕಟಿತ ಲಿಂಕ್ http://seeandsay.in/kannada/view.php?menu=179&id=59

ಪರಶು ರಾಮ ಸೃಷ್ಟಿಯ, ಕೊಂಕಣ ತೀರದ ತುಳುನಾಡಿನ ಜನರು ಶಾಂತಿ ಪ್ರಿಯರು, ಸಂಸ್ಕಾರವಂತರು ದಷ್ಟ ಪುಷ್ಟರು, ಗರಡಿಗಳಲ್ಲಿ ಪಳಗಿದ ಬಂಡಿ ಭೀಮರು ಎಂಬ ಮಾತೊಂದಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಬಗ್ಗೆಡಿಕಲ್ಲಿನ ಬಗ್ಗ ಸಹೋದರರು, ಅಗೋಳಿ ಮಂಜಣ್ಣ, ಕೋಟಿ ಚೆನ್ನಯರಂತಹ ನಾಲ್ಕೆದೆಯ ವೀರರ ಜೀವನ ಚರಿತ್ರೆಯ ಬಗ್ಗೆ ನಮಗೆಲ್ಲಾ ಓದಿ ಕೇಳಿ ಗೊತ್ತು. ಇಷ್ಟೆಲ್ಲಾ ಗೊತ್ತಿದ್ದರೂ ಅಂದಿನ ಕಾಲದ ಜನರು ಬಡತನದಲ್ಲಿರಲ್ಲಿಲ್ಲವೇ? ಎಂಬ ಪ್ರಶ್ನೆ ನನ್ನನ್ನು ಕಾಡುತಲಿತ್ತು. ಅದಕ್ಕೆ ಉತ್ತರ ಹುಡುಕುತ್ತಾ ಕೆಲವು ಹಿರಿಯರಲ್ಲಿ ಅವರ ಅನುಭವ ಕೇಳುತ್ತಾ ಹೋದಾಗ, ನಾವು ಇವತ್ತು ಈ ಬಡತನ ಎಂದು ಏನನ್ನು ವೈಭವೀಕರಿಸಿ ವ್ಯಾಖ್ಯಾನಿಸುತ್ತೆವೋ ಅಂತಾಹ ಭಯಾನಕ ಬಡತನ ಅಂದಿರಲಿಲ್ಲ. ಕಾರಣ ಇಂದಿನ ಹಾಗೆ ಬೇಕುಗಳ ಪಟ್ಟಿ ತಯಾರಿಸಲು ಅವರಲ್ಲಿ ಪುರುಸೊತ್ತಿರಲಿಲ್ಲ! ದುಡಿಯುವಷ್ಟು ಹೊಲಗಳಿದ್ದವು, ಉಣ್ಣುವಷ್ಟು ಬೆಳೆಸುತ್ತಿದ್ದರು ಯಾ ಒಕ್ಕಲುತನದಿಂದ ಊಟದ ಪಡಿ ಸಂಪಾದಿಸುತ್ತಿದ್ದರು. ತಾವು ಬೆಳೆಸಿ ಗಳಿಸಿದ್ದೇ ನಾಲಿಗೆಗೆ ರುಚಿ ಕೊಡುತ್ತಿದ್ದವು, ಎರಡು ಹೊತ್ತಿನ ಊಟ, ಮಾನ ಮುಚ್ಚಲು ಒಂದಿಷ್ಟು ಬಟ್ಟೆ ಇದ್ದರೆ ಸಾಕು ಇದಕ್ಕಿಂತ ದೊಡ್ಡ ಶ್ರೀಮಂತಿಕೆ ಇನ್ಯಾಕೆ ಬೇಕು? ಇದ್ದಷ್ಟು ದಿನ ಆರೋಗ್ಯವಂತರಾಗಿ ಸುಖವಾಗಿದ್ದಾರೆ ಸಾಕು ಎಂಬುದೇ ಅವರ ಯೋಚನೆಯಾಗಿತ್ತು.

ಕೆಲವೊಮ್ಮೆ ಅತೀ ವೃಷ್ಟಿ ಅನಾವೃಷ್ಟಿಗಳಿಂದ ಬೆಳೆ ನಾಶವಾದಾಗ, ಆಹಾರದ ಕೊರತೆ ನೀಗಿಸಲು, ಆಹಾರ ಭದ್ರತೆಗೆ ಅವರು ಅವಲಂಬಿಸಿದ್ದು ‘’ಹಲಸು’’ ಹಾಗೂ ‘’ಗೆಣಸು’’ ಎಂಬ ಸತ್ಯದ ಅರಿವು ನಮಗ್ಯಾರಿಗಾದರೂ ಇದೆಯೇ? ಇಲ್ಲ! ಯಾಕೆಂದರೆ ನಮಗೆ ಅವೆರಡೂ ಇವತ್ತು ರುಚಿಸುವುದಿಲ್ಲ. ಹಾಗಾದರೆ ಬಡತನ ಎಂಬುದರ ಹಿಂದೆ ನಾಲಿಗೆಯ ಕುತಂತ್ರವೂ ಇದೆ ಎಂದಾಯಿತಲ್ಲವೇ?

ಇರಲಿ. ನಾನು ಈ ಲೇಖನ ಬರೆಯಲು ಹೊರಟಿದ್ದು ನಾನು ಚಿಕ್ಕಂದಿನಿಂದ ಅತೀ ಆಶೆಪಟ್ಟು ತಿನ್ನುತ್ತಿದ್ದ, ಪೋಷಕಾಂಶಗಳ ಖಜಾನೆ ಕಂದ ಮೂಲದ ‘’ಗೆಣಸಿನ’’ ಬಗ್ಗೆ. ದುಬೈ ಎಂಬ ಮಾಯಾನಗರಿಯಲ್ಲಿ ಕುಳಿತು ಗೆಣಸಿನ ಬಗ್ಗೆ ಬರೆಯುವುದು ಎಂದರೆ ಕೆಲವು ಶ್ರೀಮಂತ ಓದುಗರಿಗೆ ಅಸಹ್ಯವಾದೀತು. ಆದರೂ ತಮ್ಮಲ್ಲಿರುವ ಕೆಲವು ಗುಪ್ತ ರೋಗದ ನಿವಾರಣೆಗೆ ಗೆಣಸು ಸಹಾಯಕಾರಿ ಎಂಬ ಅಂಶ ನಮ್ಮ ಪೂರ್ವಜರಿಗೆ ಇದ್ದುದರಿಂದ ಹಾಗೂ ಕಡಿಮೆ ನೀರಿನಲ್ಲಿಯೂ ಗೆಣಸಿಬೆಳೆ ಚೆನ್ನಾಗಿ ಬೆಳೆಸಬಹುದು ಎಂದರಿತು ಗೆಣಸು ಬೆಳೆಸುತ್ತಿದ್ದರು ಎಂಬುದನ್ನು ನಾವೆಲ್ಲಾ ತಿಳಿಯಲೇ ಬೇಕು. ಗೆಣಸು ಬೇಯಿಸಿ ತಿನ್ನಲು ರುಚಿಕರ. ನನಾರಿತಿಯ ಪಲ್ಯದೊಟ್ಟಿಗೂ ತಿನ್ನಬಹುದು. ಉಳಿದುದನ್ನು ಹಪ್ಪಳ ಅಥವಾ ಬೇಯಿಸಿ ಹೊಳುಮಾಡಿ ಒಣಗಿಸಿ ಸಂಗ್ರಹಿಸಿ ಇಟ್ಟು ಮಳೆಗಾಲದಲ್ಲಿ ತಿನ್ನಲು ಏನೂ ಇಲ್ಲದಾಗ ಇದನ್ನು ಉಪಯೋಗಿಸಬಹುದು. ನಾಲಿಗೆ ರುಚಿಸದಿದ್ದವರಿಗೆ ಎಣ್ಣೆಯಲ್ಲಿ ಕರಿದ ‘’ಪೋಡಿ’’ಯಂತಹ ತಿಂಡಿ ತಯಾರಿಸಿ ತಿನ್ನಬಹುದು.

ಕರ್ನಾಟಕದಲ್ಲಿ ಕೆಲವು ಕಡೆ ಮಹಾಶಿವರಾತ್ರಿಯಂದು ಉಪವಾಸವಿರುವ ಬದಲು ಗೆಣಸಿನ ಹೋಳಿಗೆ ಅಡುಗೆ ಮಾಡಿ ಲಿಂಗ ಸ್ವರೂಪೀ ಉಮಾಶಂಕರನಿಗೆ ನೈವೇದ್ಯ ತೋರಿಸಿ ನಂತರ ಊಟ ಮಾಡುವ ಪದ್ಧತಿಯಿದೆ. ಉಪವಾಸ ವ್ರತ ಆಚರಿಸುವವರೂ ಫಲಾಹಾರವಾಗಿ ಗೆಣಸಿನ ಉಪ್ಪಿಟ್ಟು ಮಾಡಿ ಸೇವಿಸುವ ಪರಿಪಾಟ ಕೆಲವುಕಡೆ ಇದೆ. ಅಂದರೆ ಗೆಣಸು ದೇವರಿಗೂ ಪ್ರಿಯ ಎಂದಾಯಿತು!

ಐಪೋಮಿಯ ಬಟಾಟಾಸ್ ಎಂಬ ಸಸ್ಯಶಾಸ್ತ್ರೀಯ ಹೆಸರಿನ ಗಡ್ಡೆಗೆ ಸ್ವೀಟ್ ಪೊಟೇಟೊ ಎಂಬ ಇಂಗ್ಲಿಷ್ ಹೆಸರಿದೆ. ಇದು ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ ಎಂಬ ಮಾಹಿತಿ ಇದೆ. ಸಿಹಿ ಗೆಣಸು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿಂದರೆ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ, ಆದ್ದರಿಂದ ಮಧುಮೇಹಿಗಳು ಕೂಡ ಮಿತಿಯಲ್ಲಿ ತಿನ್ನಬಹುದು. ಇದರಲ್ಲಿ ಅಧಿಕ ವಿಟಮಿನ್ ಎ, ಲೈಕೊಪೆನ್ ಇದ್ದು ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಅಲ್ಲದೆ ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದ್ದು ಮೂಲವ್ಯಾದಿಗೆ ಒಳ್ಳೆಯದು ಎಂಬುದಾಗಿ ತಿಳಿಯಲಾಗಿದೆ. ಬೆಳೆವ ಮಕ್ಕಳಿಗೆ ಮತ್ತು ಯುವಕ ಯುವತಿಯರಿಗೆ ಗೆಣಸು ಒಳ್ಳೆಯ ಪೌಷ್ಟಿಕ ಆಹಾರ.ದೈಹಿಕ ವ್ಯಾಯಾಮದ ನಂತರ, ದೇಹದಲ್ಲಿ ಗ್ಲೈಕೋಜೆನ್ ಮಟ್ಟ ಕಡಿಮೆಯಾಗುವಾಗ ಗೆಣಸು ತಿನ್ನುವುದರಿಂದ ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ. ಗೆಣಸು ಧಾತು ಪುಷ್ಟಿಗೂ ಒಳ್ಳೆಯದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ಇಂತಹ ಪೌಷ್ಟಿಕ, ಸತ್ವಯುತ ಖನಿಜ ಭಂಡಾರವಿರುವ ಗೆಣಸು ತಿನ್ನುತ್ತಿದ್ದುದರಿಂದ ನಮ್ಮ ಹಿರಿಯರು ತಮ್ಮ ಸ್ವಾಸ್ತ್ಯ ಕಾಪಾಡಿಕೊಂಡು ಬರಲು ಸಾಧ್ಯವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನಂತೆ ಆಗ ಗಲ್ಲಿಗೊಂದರಂತೆ ಆಸ್ಪತ್ರೆಗಳಿರಲಿಲ್ಲ ಎಂಬುದು ನಮಗೂ ಗೊತ್ತಿದ್ದ ವಿಷಯವೆ.

ಹೆಚ್ಚು ಪೌಷ್ಟಿಕಾಂಶ ಇರುವದರಿಂದ ದೇಶದ ಆಹಾರ ಸುರಕ್ಷತೆಗೆ, ಬಡತನ ರೇಖೆಗಿಂತ ಕೆಳಗಿರುವ ಜನಗಳ ಆಹಾರದ ಪೌಷ್ಟಿಕಾಂಶ ಹೆಚ್ಚಿಸಲು ಹಲಸು ಹಾಗೂ ಗೆಣಸು ಸಹಕಾರಿಯಾಗಬಲ್ಲದು. ದನಗಳಿಗೆ ಹಾರ್ಮೋನ್ ಮಿಶ್ರಿತ ಆಹಾರ ಕೊಟ್ಟು ತೆಗೆದ ಹಾಲು ಹಾಗೂ ಕೋಳಿ ಮೊಟ್ಟೆ ಶಾಲಾ ಮಕ್ಕಳಿಗೆ ಕೊಡುವುದಕ್ಕಿಂತ ಸಾವಯವ ಪದ್ದತಿಯಲ್ಲಿ ಬೆಳೆಸಿದ ಗೆಣಸು, ಬಾಳೆ ಹಣ್ಣು ಮುಂತಾದುವು ಏಷ್ಟೋ ಉತ್ತಮ ಆಹಾರ ಎಂಬುದು ನಮಗೆ ತಿಳಿದಿರಬೇಕು.

ನಿಯಮಿತವಾಗಿ ಗೆಣಸು ಉಪಯೋಗಿಸುತ್ತಿರುವ ನನಗೆ ಇತ್ತೇಚೆಗೆ ಒಂದು ಸೂಪರ್ ಮಾರ್ಕೆಟ್ನಲ್ಲಿ ಪಿಲಿಪೈನ್ಸ್ ಗೆಣಸು ಕಣ್ಣಿಗೆ ಕಂಡಿತು. ಅದು ನಮ್ಮಲ್ಲಿ ಸಿಗದೇ ಇರುವ ಒಂದು ಮಿಶ್ರ ತಳಿ. ಹೊರಗಿಂದ ನೋಡಲು ನಮ್ಮೂರಿನಲ್ಲಿ ಬೆಳೆಸುವ ಕೆಂಪು ಗೆಣಸಿನ ರೀತಿಯೇ ಇದ್ದರೂ ಅದನ್ನು ತುಂಡು ಮಾಡಿದಾಗ ಒಳಗೆ ಥೇಟ್ ‘ ಬೀಟ್ ರೂಟ್’ ಬಣ್ಣ ಕಂಡು ಬರುತ್ತದೆ (ಚಿತ್ರದಲ್ಲಿ ಇರುವಂತೆ). ಹಸಿ ಬಾಯಿಗೆ ಹಾಕಿ ಜಗಿದಾಗ ಬೀಟ್ ರೂಟ್ ತಿಂದ ಹಾಗೆ ಆಗುತ್ತದೆ. ಬೇಯಿಸಿದರೆ ಒಳ್ಳೆಯ ರುಚಿ ಇದೆ. ಇದೇ ನನಗೆ ಗೆಣಸಿನ ಬಗ್ಗೆ ಬರೆಯಲು ಪ್ರೇರೆಪಿಸಿದ್ದು!




ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು

Thursday, July 31, 2014

ತುಳುನಾಡಿನ ಕೊಂಕಣ ತೀರದ ನಾಗಾರಾಧನೆ




ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ಹಾಗೂ ಕೊಂಕಣ ತೀರದಲ್ಲಿ ನಾಗನಿಗೆ ವಿಶಿಷ್ಟ ಸ್ಥಾನ ಹಾಗೂ ವಿಶೇಷ ಮಹತ್ವ ಇದೆ. ಇಲ್ಲಿ ನಾಗನನ್ನು ಕೊಲ್ಲುವುದು ಪಾಪ ಎಂಬ ನಂಬಿಕೆ ಇದೆ.

ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧಾರ್ತರಾಷ್ಟ್ರ, ತಕ್ಷಕ ಮತ್ತು ಕಾಲಿಯ ಹೀಗೇ ಒಂಬತ್ತು ಪ್ರಮುಖ ನಾಗಗಳ ಹೆಸರು ಕೇಳಿ ಬರುತ್ತದೆ. ನಾಗ ಸಮೃದ್ಧಿಯ ಸಂಕೇತ. ನಾಗನನ್ನು ತೊರೆದರೆ, ಮರೆತರೆ, ಹೊಡೆದು ಯಾ ಘಾಸಿಗೊಳಿಸಿ ಅನಾಚಾರ ಮಾಡಿದರೆ, ಹುತ್ತಮೊದಲಾದುವನ್ನು ಕೆಡವಿ ಅಪಚಾರವೆಸಗಿದರೆ ಎದುರಿಗೆ ಕಾಣದೇ ಇದ್ದರೂ ಪರೋಕ್ಷವಾಗಿ ನಾಗದೋಷ ಪ್ರಾಪ್ತವಾಗುತ್ತದೆ ಎಂಬುದು ತುಳು ನಾಡಿನಲ್ಲಿ ಜನಜನಿತ ವಿಷಯ. ಸಂತತಿ ಮತ್ತು ಸೌಭಾಗ್ಯ, ಪ್ರಗತಿ, ಅಭಿವೃದ್ಧಿ ಇವನ್ನೆಲ್ಲಾ ಪಡೆಯಲು ನಾಗನ ಕೃಪೆ ಬೇಕೆಂಬುದೂ ಕೂಡ ತುಳುನಾಡ ಜನ ನಂಬುವ ಅಂಶವಾಗಿದೆ.

ಒಂದು ಕಾಲದಲ್ಲಿ ತುಳುನಾಡು ಕೂಡು ಕುಟುಂಬಕ್ಕೆ ಹೆಸರುವಾಸಿಯಾಯಿತ್ತು. ಈ ಕೂಡು ಕುಟುಂಬ ಅನಾದಿಕಾಲದಿಂದ ಆರಾದಿಸಿ ಬಂದಿರುವ ನಾಗನನ್ನು ಮೂಲ ನಾಗ ಅಂತಲೂ, ಆ ಸ್ಥನವನ್ನು ಸದರೀ ಕುಟುಂಬದ ಮೂಲಸ್ಥಾನ ಅಂತಲೂ ಕರೆಯಲಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಎಲ್ಲೇ ವಾಸಿಸಿದ್ದರೂ ನಾಗರ ಪಂಚಮಿಯ ದಿನ ಮೂಲಸ್ಥಾನಕ್ಕೆ ಬಂದು, ನಾಗನಿಗೆ ತಾಂಬೂಲ ಸೇವೆ, ತನು ಎರೆಯುವಿಕೆಗಳನ್ನು ನೆರವೇರಿಸುವ ವಾಡಿಕೆ ಇಂದು ಕೂಡ ಕಾಣಬಹುದು. ಇತರ ದಿನಗಳಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ, ಆಶ್ಲೇಷಾ ಬಲಿ, ನಾಗಮಂಡಲ, ನಾಗಪ್ರತಿಷ್ಠೆ ಮೊದಲಾದ ಪೂಜಾವಿಧಿಗಳನ್ನು ನಡೆಸುತ್ತಾರೆ. ಭ್ರಹ್ಮ ಮಂಡಲ ಕೂಡ ಆಗಾಗ ಅಲ್ಲಿ ಇಲ್ಲಿ ನಡೆಯುವುದು ನೋಡ ಸಿಗುತ್ತದೆ.

ಪರಶುರಾಮ ಸೃಷ್ಟಿಯಲಿ ಸತ್ತ ನಾಗರಹಾವು ಕಂಡರೆ ಅಥವಾ ಎಲ್ಲಿಂದಲೋ ಬಂದ ನಾಗರಹಾವು ಕಾಣುವ ಜಾಗದಲ್ಲೆಲ್ಲೋ ಮರಣಿಸಿದರೆ ಆಗ ಒಬ್ಬ ಕರ್ಮಠ ಬ್ರಾಹ್ಮಣನ ಅಂತ್ಯೇಷ್ಠಿಗಳನ್ನು ನೆರವೇರಿಸಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಅದರ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ಒಂದುವೇಳೆ ಸತ್ತ ನಾಗರ ಹಾವು ನೋಡಿ ನೋಡದಂತೆ ಬಿಟ್ಟು ಹೋದರೆ ಆ ಪಾಪ ತಲೆ ತಲೆಮಾರಿನವರೆಗೂ ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆ ತುಳು ಹಾಗೂ ಕೊಂಕಣಿಗರದು. ದ್ರಾವೀಢರಿಂದ ನಾಗಾರಾಧನೆ ಸಾವಿರಾರು ವರ್ಷಗಳ ಹಿಂದೆ ಆರಂಭವಾತ್ತು ಅನ್ನುವ ಮಾಹಿತಿ ಇದ್ದರೂ, ತುಳುನಾಡು ಹಾಗೂ ಕೊಂಕಣ ಪ್ರದೇಶದಲ್ಲಿ ಇದು ವಿಭಿನ್ನತೆಯಿಂದ ಕೂಡಿದೆ.

ಸಮುದ್ರ ರಾಜನ ಕೈವಶವಿದ್ದ ಪಶ್ಚಿಮ ಕರಾವಳಿಯನ್ನು ಪರಶುರಾಮನು ತನ್ನ ಕೊಡಲಿಯನ್ನು ಬೀಸಿ ಎಸೆದಾಗ, ಕೊಡಲಿ ಬಿದ್ದಷ್ಟು ದೂರದ ಜಾಗವನ್ನು ಸಮುದ್ರರಾಜ ಪರಶುರಾಮನಿಗೆ ಬಿಟ್ಟುಕೊಡುತ್ತಾನೆ. ಉಪ್ಪಾಗಿದ್ದ ಈ ಪ್ರದೇಶವನ್ನು ತನ್ನೊಟ್ಟಿಗೆ ಬಂದಿದ್ದ ತನ್ನ ಹಿಂಬಾಲಕರಾದ  ಸಾರಸ್ವತರಿಗೆ ಕೃಷಿ ಕಾರ್ಯಮಾಡಿ ನೆಲೆ ನಿಲ್ಲಲು, ನಾಗ ದೇವರನ್ನು ಪ್ರಾರ್ಥಿಸಿ, ನಾಗಗಳನ್ನು ಇಲ್ಲಿಗೆ ತರಿಸಿ, ರಾಮೇಶ್ವರದಿಂದ ಅಂಕೋಲದವರೆಗೆ, ಅಲ್ಲಲ್ಲಿ ಹುತ್ತಗಳನ್ನು ನಿರ್ಮಿಸಿ, ಗೆದ್ದಲು ಹುಳುವಿನ ಸೃಷ್ಟಿಮಾಡಿ, ನಾಗಗಳ ನೆಲೆನಿಲ್ಲಿಸಿ, ವರುಣನನ್ನು ಅಕಾಲದಲ್ಲಿ ಸುರಿಸಿ, ಉಪ್ಪಾಗಿದ್ದ ಭೂಮಿಯನ್ನು ಸಿಹಿಯಾಗಿ ಪರಿವರ್ತಿಸಿ, ಕೃಷಿ ಕಾರ್ಯಕ್ಕೆ ಹಸನಾದ ಭೂಮಿಯಾಗುವಂತೆ ಮಾಡಿ, ತನ್ನೊಡನೆ ಬಂದ ಸಾರಸ್ವತರನ್ನು ನೆಲೆ ನಿಲ್ಲಿಸಿ, ಮುಂದೆ ಈ ಭಾಗವನ್ನು ಪರಶುರಾಮ ಸೃಷ್ಟಿ  ಎಂದೂ, ಕರಾವಳಿಯನ್ನು ತನ್ನ ತಾಯಿಯ ನೆನಪಿಗಾಗಿ ಕೊಂಕಣ ತೀರವೆಂಬ ( ತಾಯಿ ರೇಣುಕಾ ದೇವಿ, ಕೊಂಕಣಿ ದೇವಿ) ಹೆಸರು ರೂಢಿಗೆ ಬಂದಿದೆ ಎಂಬುದಾಗಿ ತಿಳಿಯಲಾಗುತ್ತದೆ.

ನಾಗಾರಧನೆಯಲ್ಲಿ ವೈದಿಕ ಇತ್ತೆ? ಬೇಕೇ? ಬೇಡವೇ? ಎಂಬ ಚರ್ಚೆ ನಮ್ಮ ತುಳುನಾಡಿನಲ್ಲಿ ನಡೆಯುತ್ತಲೇ ಇದೆ. ನಾಗಾರಾಧನೆಯು ಕುಟುಂಬದ ಹಿನ್ನೆಲೆಯಿಂದ ಮುಂದುವರೆಸಿಕೊಂಡು ಬಂದುದರಿಂದ ನಮ್ಮ ಮೂಲ ನಾಗ ಎಂಬ ಹೆಸರು ಚಾಲ್ತಿಯಲ್ಲಿದೆ. ಹಾಗಾಗಿ ಆಯಾ ಕುಟುಂಬದ ಯಜಮಾನನೆ ಕುಟುಂಬದ ಪರವಾಗಿ ಆರಾದಿಸುತ್ತಾನೆ. ಅದೇ ರೀತಿ ಸಾರಸ್ವತರು ವೈದಿಕರಾದುದರಿಂದ, ಅವರು ನಂಬಿಕೊಂಡು ಬಂದ ನಾಗಬನದಲ್ಲಿ ವೈದಿಕ ರೀತಿಯಲ್ಲಿಯೇ ಪೂಜೆ, ಪುರಸ್ಕಾರ ನಡೆಸಿಕೊಂಡು ಬರುತ್ತಿರುವುದು ಸಾಮಾನ್ಯವಾದರೂ ಇತ್ತಿಚೆಗೆ ಎಲ್ಲಾ ಮೂಲದ ನಾಗಬನದಲ್ಲಿ ವೈದಿಕ ತುಂಬಿಕೊಂಡದ್ದು ನೋಡಿದರೆ ಇದು ನಮ್ಮ ತುಳುನಾಡಿನ ಇತಿಹಾಸಕ್ಕೆ ದಕ್ಕೆಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ನೆಲ-ಜಲ ಉಳಿಸಿದ್ದು, ಭಯ-ಭಕುತಿ ಬೆಳೆಸಿದ್ದು, ಕುಟುಂಬ ಎಂಬ ಮನೆತನದ ಹುಟ್ಟು ಎಲ್ಲವೂ ಈ ನಾಗನಿಂದ ಎಂಬುದು ಖಂಡಿತಾ ಸತ್ಯ. ಅಂತಹ ನಾಗಾರಾಧನೆ ನಮ್ಮ ಕೊಂಕಣ ತೀರ ಹಾಗೂ ತುಳುನಾಡಿನ ಕೂಡು ಕುಟುಂಬ ಒಟ್ಟು ಮಾಡುವ ಒಂದು ಅಪೂರ್ವ ದಿನವೂ ಹೌದು.

ಏನೂ ಇರಲಿ ಎಲ್ಲಾ ನಾಗಗಳನ್ನೂ ನಿರಾಶ್ರಿತ ನಾಗಗಳ ಅಧಿಪತಿಯೆನಿಸಿರುವ ನಾಗೇಶ ಶ್ರೀಸುಬ್ರಹ್ಮಣ್ಯನನ್ನು ಧ್ಯಾನಿಸುತ್ತಾ ಶ್ರಾವಣ ಶುಕ್ಲ ಪಂಚಮಿಯಂದು ನಾಗಪಂಚಮಿಯ ಶುಭಸಂದೇಶಗಳನ್ನು ನಿಮಗೆಲ್ಲಾ ಹಂಚುತ್ತಿದ್ದೇನೆ, ಎಲ್ಲರಿಗೂ ಒಳಿತಾಗಲಿ, ಶುಭವಾಗಲಿ :

ಶ್ರೀನಿವಾಸ್ ಪ್ರಭು
(ಸ್ಪೂರ್ತಿ, ಬಂಟಕಲ್ಲು)
ಶಾರ್ಜಾ, ಯು.ಎ.ಇ.
00971 567767435

Monday, July 28, 2014

ನಾನೋ ಕತೆ.


ನಾನೋ ಕತೆ 



ಐದು ದಿನದ ಈದ್ ರಜೆ ಇದೆ. ಈ ರಜೆಯಲ್ಲಿ ಬಹು ದಿನಗಳಿಂದ ಕಾಡುತ್ತಿದ್ದ ಸಸಲ್ ಪೋಲಿಪ್ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಮಿತ್ರರಾರಿಗೂ ಗೊತ್ತಾಗಬಾರದು. ಗೊತ್ತಾದರೆ ಅವರ ರಜಾ ಮಜಾ ಹಾಳಾಗುತ್ತದೆ ಎಂದು ನಿರ್ಧರಿಸಿ, ಅಜಮಾನ್ ನಲ್ಲಿರುವ ನಮ್ಮ ಊರಿನ ತುಂಬೆ ಮೊಯಿದ್ದೀನ್ ರವರ ಜಿ.ಯಂ.ಸಿ. ಆಸ್ಪತ್ರೆಗೆ ಹೋಗಿದ್ದೆ. ಪೂರ್ವ ನಿರ್ಧಾರ ಹಾಗೂ ನಿಗದಿಯಾದಂತೆ ಬೆಳಿಗ್ಗೆ ಹತ್ತು ಘಂಟೆಗೆ ಸರ್ಜರಿ ಮುಗಿದು ವಾರ್ಡಿಗೆ ಹಾಕಿದ್ದರು. ಮೂಗಿನಿಂದ ಇನ್ನೂ ರಕ್ತ ಸೋರುತ್ತಿದೆ, ತಲೆ ಎತ್ತಲು ಆಗುವುದಿಲ್ಲ, ನನ್ನವರಾರಾದರೂ ಸಹಾಯಕ್ಕೆ ಇರುತ್ತಿದ್ದರೆ ಒಳ್ಳೆಯದಿತ್ತು ಎಂಬ ಭಾವನೆ ಬರುತ್ತಿತ್ತು. ಕ್ಷಣ ಮಾತ್ರದಲ್ಲಿ, ಛೆ ನನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬರ ರಜೆ ಹಾಳುಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆಯೂ ಏಳುತ್ತಿತ್ತು.

ಎಲ್ಲಾ ಪೇಶಂಟ್ ಗಳ ಹತ್ತಿರ ಜನವೋ ಜನ. ನನ್ನ ಹತ್ತಿರ ಒಂದು ನೋಣವೂ ಇರಲಿಲ್ಲ. ಏನು ನಿಮ್ಮವರಾರೂ ಇಲ್ಲಿ ಇಲ್ಲವಾ? ಅಂತ ದಾದಿ ಕೇಳಿದಾಗ ನನ್ನ ಫೋನ್ ರಿಂಗಣಿಸಿತು. ನನಗೆ ಸದ್ಯ ಮಾತನಾಡಲು ಆಗದೇ ಇದ್ದುದರಿಂದ ದಾದಿ ಫೋನ್ ಎತ್ತಿ, ಅವರಿಗೆ ಸರ್ಜರಿ ಆಗಿದೆ, ಜಿ.ಯಂ.ಸಿ. ಆಸ್ಪತ್ರೆಯಲ್ಲಿ ಬೆಡ್ ರೆಸ್ಟ್ನಲ್ಲಿದ್ದಾರೆ ಎಂದು ಹೇಳಿ ಫೋನ್ ಸ್ವಿಚ್ ಹಾಫ್ ಮಾಡಿ ಇಟ್ಟರು.

ಒಂದು ಮಂಪರು ನಿದ್ದೆ. ಕಣ್ಣು ಬಿಟ್ಟಾಗ ಬೆಡ್ಡಿನ ಸುತ್ತ ಜನ. ಕನಸು ಇರಬಹುದೆಂದುಕೊಂಡು ಮತ್ತೆ ಕಣ್ಣು ಮುಚ್ಚಿ ಮಂಪರಿಗೆ ಜಾರಿದೆ. ಡಾಕ್ಟ್ರು ನಿದ್ದೆಯ ಮಾತ್ರೆ ಕೊಟ್ಟಿರಬೇಕು. ಕಣ್ಣು ತೆರೆಯಲು ಆಗುತ್ತಿಲ್ಲ. ಆದರೂ ಗುಸು ಗುಸು ಮಾತು ಕಿವಿಗೆ ಕೇಳುತ್ತಿದೆ. ‘’ಒಂದು ಮಾತು ನಮ್ಮಲ್ಲಿ ಹೇಳಬಾರದಿತ್ತಾ?’’ ನಾವು ಯಾರಾದರೂ ಇಲ್ಲಿ ಇರುತ್ತಿದ್ದೆವಲ್ಲ. ಅದಕ್ಕೆ ಕೋರಸ್ ಬೇರೆ ಕೇಳಿದಂತಾಗುತ್ತಿತ್ತು.

ಸುಮಾರು ಸಮಯದ ನಂತರ ಸರಿಯಾಗಿ ನಿದ್ದೆ ಬಿಟ್ಟು ನೋಡುತ್ತೇನೆ, ಮಿತ್ರರ ದಂಡು ಇನ್ನೇನು ನನ್ನಲ್ಲಿ ಯುದ್ದ ಹೂಡಲು ಅಧಿಕೃತವಾಗಿ ನನ್ನೆದುರು ನಿಂತಂತಿದೆ. ಆದರೆ ಇವರ ಕೈಯಲ್ಲಿದ್ದ ಅಸ್ತ್ರಗಳೇ ಬೇರೆ. ಕೆಲವರ ಕೈಯಲ್ಲಿ ಹಾಲು, ಇನ್ನು ಕೆಲವರ ಕೈಯಲ್ಲಿ ಹಣ್ಣು! ಕೆಲವರು ಸುದ್ದಿ ಕೇಳಿ ಬಂದವರು, ಇನ್ನು ಕೆಲವರು ಸುದ್ಧಿ ಹರಡಿಸಿ ಬಂದವರು, ಮತ್ತೆ ಕೆಲವರು ಸುದ್ದಿ ತಿಳಿದು ಹೋಗದೇ ಇದ್ದರೆ ಯಾರಾದರೂ ಏನಂದಾರು? ಅಂತ ಬಂದವರು. ಇವರನ್ನೆಲ್ಲಾ ನೋಡಿ ನನ್ನ ಕಣ್ಣು ಮಂಜಾಯಿತು, ಹೇಳದೆ ಕೇಳದೆ ನನಗರಿವಿಲ್ಲದಂತೆ ಸಂತೋಷದ ಕಣ್ಣಿರಿನ ಹನಿಗಳು ಹರಿಯತೊಡಗಿದವು. ಹೃದಯ ಹಗುರವಾಯಿತು ನನಗೂ ಕೇಳುವವರು ಇದ್ದಾರೆ ಎಂಬ ಅರಿವಿನ ಹಣತೆಯ ದೀಪ ನನ್ನ ಸ್ಮೃತಿಪಟಲದಲಿ ಬೆಳಗಿತು. ಇದೇ ಅಲ್ಲವೇ ಮಾನವೀಯತೆ ಮತ್ತು ಧರ್ಮದ ವ್ಯಾಖ್ಯೆ.

ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು.

Saturday, July 26, 2014

ಶ್ರಾವಣ




ಶ್ರಾವಣ ಮಾಸ.

ಮಾಸ ಅಂದರೆ ತಿಂಗಳು ಎಂದರ್ಥ. ಮುಖ್ಯವಾಗಿ ನಮ್ಮ ದೇಶದಲ್ಲಿ ಎರಡು ರೀತಿಯ ತಿಂಗಳುಗಳನ್ನು ಲೆಕ್ಕ ಹಾಕುತ್ತಾರೆ. ಚಂದ್ರಮಾನ ಹಾಗೂ ಸೌರಮಾನ. ಈ ಎರಡು ರೀತಿಯ ತಿಂಗಳುಗಳು ಕ್ರಮವಾಗಿ;

ಚಂದ್ರಮಾನ - ಸೌರಮಾನ 
  • ಚೈತ್ರ - ಮೇಷ 
  • ವೈಶಾಖ - ವೃಷಭ 
  • ಜೇಷ್ಠ - ಮಿಥುನ 
  • ಆಷಾಢ - ಕರ್ಕಾಟಕ 
  • ಶ್ರಾವಣ - ಸಿಂಹ 
  • ಬಾದ್ರಪದ - ಕನ್ಯಾ 
  • ಅಶ್ವಯುಜ - ತುಲಾ 
  • ಕಾರ್ತೀಕ - ವೃಶ್ಚಿಕ 
  • ಮಾರ್ಗಶಿರ - ಧನು 
  • ಪೌಷ - ಮಕರ 
  • ಮಾಘ - ಕುಂಭ 
  • ಪಾಲ್ಗುನ - ಮಿನ 
ಹೀಗೆ ಯುಗಾದಿಯಿಂದ ಮುಂದೆ ಬರುವ ಐದನೇ ತಿಂಗಳೇ ಶ್ರಾವಣ ಮಾಸ. ಚಂದ್ರಮಾನದಲ್ಲಿ ಮತ್ತೆ ಎರಡು ವಿಭಾಗಗಳಾಗಿವೆ. ಮೊದಲನೆಯದು ಹುಣ್ಣಿಮೆಯಿಂದ ಹುಣ್ಣಿಮೆಯವರೆಗೆ ಹಾಗೂ ಅಮಾವಾಸ್ಯೆಯಿಂದ ಅಮಾವಾಸ್ಯೆಯವರೆಗೆ. ಉತ್ತರ ಭಾರದದಲ್ಲಿ ಕೆಲವರು ಹುಣ್ಣಿಮೆಯಿಂದ ಲೆಕ್ಕಾಚಾರ ಮಾಡುವುದರಿಂದ ದಕ್ಷಿಣ ಭಾರತಕಿಂತ ಹದಿನೈದು ದಿನ ಮೊದಲೇ ಅವರ ಶ್ರಾವಣ ಮಾಸ ಆರಂಭವಾಗುತ್ತದೆ. ಅವರು ಶ್ರಾವಣ ಸೋಮವಾರ ವೃತ ಆಚರಣೆ ಮಾಡಿದರೆ ನಾವು ಶ್ರಾವಣ ಶನಿವಾರ ಆಚರಿಸುತ್ತೇವೆ. ಇನ್ನು ದಕ್ಷಿಣದ ಸೌರ ಪದ್ದತಿಯ ಪ್ರಕಾರ ಸಿಂಹ ಸಕ್ರಮಣದಿಂದ ಸೋಣ ತಿಂಗಳು ಆಚರಿಸುವ ಪದ್ಧತಿ ಇದೆ. ಹೀಗೆ ಉತ್ತರದ ಚಂದ್ರಮಾನದವರಿಗಿಂತ ದಕ್ಷಿಣದ ಚಂದ್ರಮಾನದವರಿಗೆ ಹದಿನೈದು ದಿನ ತಡವಾಗಿ ಶ್ರಾವಣ ತಿಂಗಳು ಬಂದರೆ, ಸೌರಮಾನದವರಿಗೆ ಮತ್ತೆ ಕೆಲವು ದಿನ ಅಂದರೆ ಸಕ್ರಮಣ ಬರುವವರೆಗೆ ಕಾಯಬೇಕು. ಆಂದ್ರ, ಗೋವ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕದ ಕೆಲವು ಭಾಗ ಹಾಗೂ ತಮಿಳುನಾಡುಗಳಲ್ಲಿ ಹೆಚ್ಚಾಗಿ ಅಮಾವಾಸ್ಯೆಯಿಂದ ಅಮಾವಾಸ್ಯೆಯವರೆಗೆ ಚಂದ್ರಮಾನ ತಿಂಗಳುಗಳ ಲೆಕ್ಕಾಚಾರ ಇದ್ದರೆ, ರಾಜಸ್ಥಾನ, ಉತ್ತರ ಪ್ರದೇಶ, ಮದ್ಯಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಬಿಹಾರಗಳಲ್ಲಿ ಚಾಂದ್ರಮಾನದ ಹುಣ್ಣಿಮೆಯಿಂದ ಹುಣ್ಣಿಮೆಯವರೆಗೆ ಲೆಕ್ಕಾಚಾರವಿದೆ. ಕರ್ನಾಟಕದಲ್ಲಿ ಹೆಚ್ಚಾಗಿ ಕರಾವಳಿ ಭಾಗದ ತುಳುವರು ಮತ್ತು ಕೆರಳದ ಕೆಲವು ಪ್ರದೇಶದಲ್ಲಿ ಸೌರಮಾನ ಆಚರಣೆಯಲ್ಲಿ ಇರುವುದರಿಂದ ಇಲ್ಲಿ ಸಂಕ್ರಮಣಕ್ಕೆ ಹೆಚ್ಚಿನ ಮಹತ್ವ ಇದೆ.

.

ಶ್ರೀನಿವಾಸ್ ಪ್ರಭು

ಸ್ಪೂರ್ತಿ, ಬಂಟಕಲ್ಲು