Friday, March 7, 2014

ಹಲಸು






ಹಲಸು

ನಮ್ಮ ತುಳು ನಾಡಿನ ಗುತ್ತಿನ ಮನೆಗಳ ಹೆಬ್ಬಾಗಿಲು ಹಲಸಿನ ಮರದಿಂದ ತಯಾರಿಸಿ ಬಳಸಿದ್ದನ್ನು ನಾವು ನೋಡಿದ್ದೇವೆ.
ತುಳು ನಾಡಿನಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಬಾಗಿಲಿಗೆ ಪ್ರಾಶಸ್ತ್ಯವಾದ ಕಟ್ಟಿಗೆ ಹಲಸು. ಕಾರಣ ಇದರ ಬಾಳಿಕೆ ಹಾಗೂ ಚೌಕಟ್ಟಿನಲ್ಲಿ ಕುಸುರಿ ಕೆಲಸ ಮಾಡಲು ಹಲಸಿನ ಕಟ್ಟಿಗೆ ಚೆನ್ನಾಗಿ ಒಗ್ಗಿ ಬಡಗಿಗೆ ಸಹಕರಿಸುತ್ತದೆ. ಹೆಚ್ಚಾಗಿ ಹಿಂದೆ ಎಲ್ಲಾ ವರ್ಗದ ಜನರೂ ಇದನ್ನೇ ಬಳಸುತ್ತಿದ್ದರು.

ನಮ್ಮ ಹಿಂದಿನ ತಲೆ ಮಾರಿನವರ ಹೊಟ್ಟೆಯ ಹಸಿವನ್ನು ನೀಗಿಸಿ ಬದುಕು ಕೊಟ್ಟದ್ದೂ ಹಲಸಿನ ಮರಗಳೆ. ಕೆಲವು ವರ್ಷಗಳ ಹಿಂದೆ, ಆಗಿನ್ನೂ ನಾನು ಚಿಕ್ಕವ, ನಮ್ಮ ಕುಟುಂಬಕ್ಕೆ ಹೊತ್ತಿನ ತುತ್ತಿಗೂ ತತ್ವಾರ, ತೀರ ಬಡತನ. ಬದುಕಿಗೆ ಆಧಾರ ಮನೆ ಎದುರಿದ್ದ ಹಲಸಿನ ಮರ. ಏಪ್ರಿಲ್-ಜುಲೈ ಕಾಲಕ್ಕೆ ವಿಪರೀತ ಫಲ, ಮಾಗಿದ ಹಣ್ಣು/ಕಾಯಿ ತಿಂದು ನಮ್ಮ ಜೀವನ! ಹಲಸಿನ ಪಲ್ಯ, ಹಲಸಿನ ಕಡುಬು, ಪಾಯಸ, ಹೀಗೆ ದಿನಕ್ಕೊಂದು ಬಗೆ. ಮತ್ತೆ ಬಲಿತ ಹಲಸಿನ ಸೊಳೆ ಗಳನ್ನು ಉಪ್ಪುನೀರಿನಲ್ಲಿ ಹಾಕಿ ಮಳೆಗಾಲದಲ್ಲಿ ಉಪಯೋಗ ಹೀಗೆ ಸಾಗಿತ್ತು ನಮ್ಮ ಮರೆಯಲಾರದ ಹಳ್ಳಿ ಜೀವನ.

ಮಳೆಗಾಲದಲ್ಲಿ ಹಲಸಿನ ಬೀಜಗಳನ್ನು ಬೇಯಿಸಿ, ಸುಟ್ಟು ಚಹ ಸೇವನೆ ಕಾಲಕ್ಕೆ ಉಪಯೋಗಿಸುತ್ತಿದ್ದೆವು.ಬೆಳಗ್ಗಿನ ಉಪಹಾರವೂ ಇದೆ. ಒಟ್ಟಿನಲ್ಲಿ ಸಂಕಷ್ಟದಲ್ಲಿದ್ದ ನಮ್ಮ ಕುಟುಂಬದ ಐದಾರು ಜನರನ್ನು ಸಾಕಿ ಸಲಹಿದ್ದು ಹಲಸಿನ ಮರವೆ.



ಕಷ್ಟಪಟ್ಟು ನಾಲ್ಕು ಕನ್ನಡ ಅಕ್ಷರ ಕಲಿಸಿದ ಊರಿನ ಶಂಕರನಾರಾಯಣ ಮಾಸ್ತರರ ಕೃಪೆಯಿಂದ ಈಗ ನಮ್ಮ ಕುಟುಂಬಕ್ಕೆ ಅಂತಹ ಬಡತನವಿಲ್ಲ, ಆದರೆ ನಾವು ಬದುಕು ಸಾಗಿಸಿದ ಮಾರ್ಗದ ಹಸಿ ಹಸಿ ನೆನಪು ಮರೆಯುವಂತಿಲ್ಲ. ಶಾಲೆಗೆ ಹೋಗುವ ಕಾಲಕ್ಕೆ ಹಲಸಿನ ಹಣ್ಣು ಅಥವಾ ಬೀಜದ ಉಪ್ಪುಕರಿ ತಿಂದ ದಿನಗಳು ಹಲವು. ಮಳೆಗಾಲ ಆರಂಭಕ್ಕೆ ತುಳುನಾಡಿನಲ್ಲಿ ವಿಪರೀತ ಹಸಿವು. ಕೃಷಿ ಕೆಲಸಕ್ಕೆ ಹೋದವರು ಬೆಳಿಗ್ಗೆ ಒಬ್ಬೊಬ್ಬರು ಒಂದೊಂದು ಹಲಸಿನ ಹಣ್ಣು ತಿನ್ನುತ್ತಿದ್ದದ್ದೂ ಉಂಟು. ಈಗ ದುಡ್ಡಿನಾಸೆಗೆ ಹಲಸಿನ ಮರಗಳನ್ನು ಮಾರಿ ಚಿನ್ನದ ಮೊಟ್ಟೆ ಕೊಡುತ್ತಿದ್ದ ಹೆಂಟೆಯನ್ನೇ ಕೊಯ್ದ ನೋಡಿದ ಪರಿಸ್ಥಿತಿ ನಮ್ಮದಾಗಿದೆ. ಅಲ್ಲಿ ಇಲ್ಲಿ ಕೆಲವು ಮರಗಳಿದ್ದರೂ ಶ್ರೀಮಂತಿಗೆಯ ಸುಪ್ಪತ್ತಿನಲ್ಲಿ ಹಾಯಾಗಿರುವ ನಮಗೆ ಹಲಸು ಬರೀ ಹೊಲಸಾಗಿ ಕಾಣುತ್ತದೆ. ಒಂದು ಕಾಲದಲ್ಲಿ ಆಹಾರ ಭದ್ರತೆ ಕೊಟ್ಟಿದ್ದ ದೈವತತ್ತ ಮರಗಳನ್ನು ಕಡಿದು ರಾಕ್ಷಸತನದಿಂದ ಮೆರೆಯುವ ನಮ್ಮ ಪ್ರವೃತ್ತಿಯ ಬಗ್ಗೆ ನಮ್ಮ ಕಿರಿಯರು ಚಿಂತಿಸುವ ಅಗತ್ಯವಿದೆಯಲ್ಲವೇ?

ಹಲಸಿನ ಹಪ್ಪಳ, ಕಡುಬು, ಚಿಪ್ಸ್, ಹಲ್ವಾ, ಪಲ್ಯ, ಮುಳಿಕ ಪಕೋಡ ಹೀಗೆ ಬಳಕೆ ಬಹುವಿಧ. ಎಳೆಕಾಯಿಯ ಸಾಂಬಾರು, ಕಡ್ಲೆ ಹಾಕಿದ ಸುಕ್ಕ ಪಲ್ಯ, ಉಪ್ಪಿನ ಕಾಯಿ, ಮಳೆಗಾಲದಲ್ಲಿ ಉಪ್ಪಿನಲ್ಲಿಹಾಕಿಟ್ಟ ಹಲಸಿನ ಸೊಳೆಯ ಪಲ್ಯ, ಬೀಜ ಬೇಯಿಸಿ ಒಣಗಿಸಿಟ್ಟು ಮಳೆಗಾಲದಲ್ಲಿ ಉಪಯೋಗಿಸುವ ಪರಿಪಾಟ ಹೀಗೆ ಪ್ರತಿ ಮನೆಯೂ ನೂರಾರು ವಿಧದಲ್ಲಿ ಇದನ್ನು ಬಳಸುವ ರೀತಿ ನೋಡಿದರೆ ಸಂಶೋದನಾ ಆಧ್ಯಯನಕ್ಕೆ ಯೋಗ್ಯ ವಸ್ತು ಎಂದನ್ನಿಸುವುದಿಲ್ಲವೇ?

ಇವತ್ತು ನಾನು ನಮ್ಮ ಮಕ್ಕಳಿಗೆ ಬಹು ರಾಷ್ಟ್ರೀಯ ಕಂಪನಿಗಳವರು, ಕೆಡದಂತೆ ರಾಸಾಯನಿಕ ಹಾಗಿ ರಂಗು ರಂಗಿನ ಪೊಟ್ಟಣಗಳಲ್ಲಿ ಮಾರುವ ಕುರುಕಲು ತಿಂಡಿಗಳನ್ನು ಬಹು ಬೆಲೆ ತೆತ್ತು ತಿನ್ನಿಸುತ್ತಿದ್ದೇವೆ. ಇದೇ ಪ್ರತಿಷ್ಟೇಯಾಗಿ ಬಿಟ್ಟಂತಿದೆ. ಇದನ್ನು ತಿಂದು ನಮ್ಮ ಮಕ್ಕಳ ಆರೋಗ್ಯ ಕೆಟ್ಟರೆ ಅದಕ್ಕೆಂದೇ ನಾಯಿ ಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಕ್ಲಿನಿಗ್ ಹಾಗೂ ಆಸ್ಪತ್ರೆಗಳು ನಮ್ಮಲ್ಲಿ ಕಡಿಮೆ ಇಲ್ಲ.

ಇತ್ತೀಚೆಗೆ ಕೆಲವು ಮಹಿಳೆಯರು, ಧರ್ಮಸ್ಥಳದ ಗಾಮಾಭಿವ್ರಿದ್ಧಿ ಸಂಸ್ಥೆಯಿಂದ ತರಬೇತಿ ಪಡೆದು, ಹಳ್ಳಿಗಳಲ್ಲಿ ಸಿಗುವ ಹತ್ತು ಹಲವಾರು ಕಾಡು ಉತ್ಪನ್ನ ಖರೀದಿಸಿ, ವಿವಿಧ ಸಿದ್ಧ ಆಹಾರ ಉತ್ಪನ್ನಗಳನ್ನಾಗಿ ತಯಾರಿಸುವ ತಯಾರಿಕಾ ಘಟಕಗಳು ಹಳ್ಳಿಯ ಮನೆಯಂಗಳಗಳಲ್ಲಿ ಜೀವ ಪಡೆಯುತ್ತಿವೆ. ಹಳ್ಳಿ ಮೂಲೆಗಳಿಂದ ಹಲಸು, ಮಾವು ಮತ್ತೆ ಇತರ ಕಾಡು ಉತ್ಪನ್ನ ಖರೀದಿಸಿ, ಅವುಗಳನ್ನು ಸಂಸ್ಕರಿಸಿ, ಹತ್ತಿರದ ಪೇಟೆ, ಪಟ್ಟಣಗಳಲ್ಲಿ ಮಾರಾಟ ಮಳಿಗೆ ಸ್ಥಾಪಿಸಿ ಮಾರಾಟ ಮಾಡುವ ಈ ಮಹಿಳೆಯರನ್ನು ಮೆಚ್ಚಲೇ ಬೇಕು. ನಿಜವಾಗಿಯೂ ಇಂತಹ ಉತ್ಪನ್ನಗಳಿಗೆ ಪ್ರೋತ್ಶಹಕೊಡುವುದು, ಮತ್ತೆ ಅವುಗಳನ್ನು ಬೆಳೆಸುವುದು ನಮ್ಮಂತಹ ನಾಗರಿಕರ ಕರ್ತವ್ಯವಲ್ಲವೇ?

“ಹಸಿದು ಹಲಸು, ಉಂಡು ಮಾವು’’ ಎಂಬ ಗಾದೆಯೊಂದಿದೆ. ಇದರ ಅರ್ಥ ಬಡವರಿಗೆ ಹಸಿವಾದಾಗ ಹಲಸು ಹಸಿವನ್ನು ನೀಗಿಸುತ್ತದೆ, ಶ್ರೀಮಂತ ಹೊಟ್ಟೆ ಬಿರಿದು ತಿಂದಾಗ ಮಾವು ಅದನ್ನು ಜೀರ್ಣಿಸುತ್ತದೆ ಎಂಬುದಾಗಿದೆ. ಈ ನುಡಿಗಟ್ಟು ತಲೆ ತಲೆಯಾಂತರದಿಂದ ಹರಿದು ಬಂದ ದಾರಿಯಲ್ಲಿ ಸಾಗುತ್ತಾ ಇಷ್ಟು ಕಾಲ ಕಳೆದಿದ್ದೇವೆ ನಾವು. ಈಗ ನಮಗೆ ಉದ್ಯೋಗದ ಹಸಿವು ಜೋರಾಗಿದೆ. ಅದಕ್ಕಾಗಿ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದೇವೆ. ಹಲಸು ನಮ್ಮ ಗ್ರಾಮೀಣ ಬದುಕಿಗೆ ಭರವಸೆಯ ವೃಕ್ಷವಷ್ಟೇ ಅಲ್ಲ ಅದು ಇಡೀ ನಮ್ಮ ದೇಶದ ಹಸಿವನ್ನೂ ನೀಗಿಸುವ ಶಕ್ತಿ ಹೊಂದಿದೆ. ಇದು ಬಹುವಾರ್ಷಿಕ ಬೆಳೆಯಾದ್ದರಿಂದ ಹಾಗೂ ಖರ್ಚಿಲ್ಲದೆ ಬೆಳೆಸಬಹುದ್ದಾದ್ದರಿಂದ, ನಮ್ಮ ನೆಲದ ಮರವನ್ನು ಬೆಳೆಸಿ ಗೆಲ್ಲುವಲ್ಲಿ ನಮ್ಮ ಆಹಾರ ಪರಂಪರೆಯ ನಿಜವಾದ ಗೆಲುವಿದೆ. ಹಾಗಾಗಿ ಇವತ್ತು ಎಲ್ಲರೂ ಒಂದು ಹಲಸಿನ ಮರ ತಮ್ಮ ಜಮೀನಿನಲ್ಲಿ ಬೆಳೆಸಿ ಪೋಷಿಸುವ ಪ್ರಯತ್ನ ಮಾಡಬೇಕಾಗಿದೆ. ಹಕ್ಕಿ ಪಕ್ಕಿಗಳಿಗೂ ಒಂದಿಷ್ಟು ಆಹಾರ ಸಿಕ್ಕಂತಾಗುತ್ತದೆ. ನಮ್ಮ ನೆಲೆ ಜಲ ಕಾಡು ಅದರೊಟ್ಟಿಗೆ ಆಹಾರ ಭದ್ರತೆಯ ಭದ್ರತೆ ನಮ್ಮಿಂದಲೇ ಆಗಬೇಕಿದೆ.

ಶ್ರೀನಿವಾಸ್ ಪ್ರಭು 
ಸ್ಪೂರ್ತಿ ಬಂಟಕಲ್ಲು 

1 comment:

  1. ಹಲಸಿನ ವಿರಾಟ್ ರೂಪ ಪರಿಚಯಿಸುವ ಲೇಖನ. ನನಗೆ ಒಣಗಿಸಿ ಸುಟ್ಟ ಹಲಸಿನ ಬೀಜಗಳನ್ನು ತರಕಾರಿ ಗುಳಿಲ್ಲಿ ನೋ ಸಾಂಬಾರನಲ್ಲಿ ಕಾಣಲು ಇಷ್ಟ.

    ReplyDelete