Wednesday, December 26, 2012

ಚೆಂಗುಲಾಬಿ












ಬಾ ಗೆಳತಿ ನನ್ನೊಡತಿ
ಸುಕುಮಾರಿ ಓ ಗರತಿ
ನೀನೆನ್ನ ಹೃದಯವ
ಸೇರು ಬಾ.

ಪ್ರೀತಿಯ ನೀ ಜಯಿಸಿ
ಪ್ರೇಮದ ತೊಟ್ಟಿಲಲಿ
ಹಾಡಿ - ಪಾಡಿ ನೀ
ತೂಗು ಬಾ.

ಕೆಂದುಟಿಯ ನಗೆ ಬೀರಿ
ತೆಳ್ಳನೆಯ ನಡಿಗೆಯಲಿ
ಮೆಲ್ಲನೆ ಬಳಕುತ
ನಡೆದು ಬಾ.

ಸೂರ್ಯಾಸ್ತ ಸಮಯದಿ
ಸಾಗರದ ತೀರದಿ
ತಂಗಾಳಿಯಂತೆ ನೀ
ಸೋಂಕು ಬಾ.

ಚೆಲುವೆ ಚೆಲುವಿನ ರಾಣಿ
ಒಲವನ್ನು ನೀ ಬಯಸಿ
ಬೆಳದಿಂಗಳಂತೆ ನೀ
ಹರಿದು ಬಾ.

ಹಸುರಾದ ತೋಟದಿ
ಮುಳ್ಳಿನ ಗಿಡದಲ್ಲಿ
ಗುಲಾಬಿಯಂತೆ ನೀ
ಹುಟ್ಟಿ ಬಾ.

ದುಂಬಿಯು ನಾನಾಗಿ
ತೋಟಕ್ಕೆ ಬಂದಾಗ
ಮಧುವನು ನೀ
ಉಣಿಸು ಬಾ.

ಸ್ಪೂರ್ತಿ
ಬಂಟಕಲ್ಲು
1-1-1984

(ಪ್ರಥಮ ವರ್ಷದ ಕಾಲೇಜು ಜೀವನದಲ್ಲಿ ಬರೆದ ಕವನ. ಕಾ.ವಾ. ಆಚಾರ್ಯರ ಪ್ರೋತ್ಸಾಹ ಕೂಸು. ಇದುಕೂಡ 1985-86 ನೇ ಸಾಲಿನಲ್ಲಿ, ಯಂ.ಎನ್.ಜೈ ಪ್ರಕಾಶ್ ಸ್ಮಾರಕ ಪುರಸ್ಕಾರಕ್ಕೆ ಆಯ್ಕೆಯಾದ ಕವನಗಳಲ್ಲಿ ಒಂದು. )


 

No comments:

Post a Comment