Thursday, December 11, 2014

ತುಳುವರ ಬಿಸಲೆಯಲ್ಲಿ ಘಮಘಮಿಸುವ ಬಸಳೆ!



ತುಳುವರ ಬಿಸಲೆಯಲ್ಲಿ ಘಮಘಮಿಸುವ ಬಸಳೆ!









http://seeandsay.in/kannada/view.php?menu=113&id=85


ತುಳುನಾಡ ಮಣ್ಣಲ್ಲಿ ಹುಟ್ಟಿ ಪ್ರಪಂಚದ ಯಾವ ಮೂಲೆಯಲ್ಲಿ ನೆಲೆಸಿದರೂ ಬಿಸಲೆಯಲ್ಲಿ (ಮಣ್ಣಿನ ಪಾತ್ರೆಯಲ್ಲಿ) ಮಾಡಿದ ಬಸಳೆ ಪಲ್ಯದ ಆ ಸ್ವಾದ ಮರೆಯುವುದುಂಟೆ? ಹಸಿದ ಹೊಟ್ಟೆಗೆ ಬಿಸಿ ಕುಚುಲಕ್ಕಿ ಅನ್ನದ ಮೇಲೆ ಬಿಸಿ ಬಿಸಿ ಬಸಳೆ ಪಲ್ಯ ಹಾಕುವಾಗ ಮೂಗಿನ ಹೊಳ್ಳೆಗಳು ಬಿಡಿ ನಾಲಗೆಯಲ್ಲಿ ಚಿರ್ ಅಂತ ನೀರು ಚಿಮ್ಮಿ, ಜೀರ್ಣ ಕ್ರಿಯೆಗೆ ಬೇಕಾಗುವ ಎಲ್ಲಾ ರಸಗಳ ಗ್ರಂಥಿಗಳೊಟ್ಟಿಗೆ ನವರಸಗಳ ಗ್ರಂಥಿಗಳೂ ತೆರೆದು ಬಿಡುತ್ತವೆ. ಹಾಗಾಗಿಯೇ ಬಸಳೆ ಪಲ್ಯದೂಟ ಎಲ್ಲರಿಗೂ ರುಚಿಸುತ್ತದೆ.

ಬಸಳೆ ತುಳುನಾಡಿಗೆ ಬಂದದ್ದು ರಾಜಾಪುರ ಸಾರಸ್ವಾತರಿಂದ. ಪ್ರಪಂಚದಾದ್ಯಂತ ಬಸಳೆ ಜಾತಿಯ ಸೊಪ್ಪು ತರಕಾರಿ ಕಂಡು ಬಂದರೂ ಉದ್ದ ಬಳ್ಳಿ ಬಿಡುವ ಬಸಳೆ ಅದು ಕೇವಲ ಪರಶುರಾಮ ಸೃಷ್ಟಿಯ ಸಾರಸ್ವತರ ಸೊತ್ತು ಎಂಬುದನ್ನು ಪ್ರತೀ ರಾಜಾಪುರ ಸಾರಸ್ವತರ ಮನೆ ಹಿತ್ತಲಲಿ ಇರುವ ಬಸಳೆ ಚಪ್ಪರ (ದೊಂಪ) ದಿಂದ ಊಹಿಸಿಕೊಳ್ಳಬಹುದು. ಪರಶುರಾಮ ಕೊಂಕಣದ ಸೃಷ್ಟಿ ಮಾಡಿ ತನ್ನ ಅನುಯಾಯಿಗಳಿಗೆ, ಗಿಡ್ಡದಾಗಿ ಬೆಳೆಯುವ ಬಸಳೆಯನ್ನು ತನ್ನ ತಪೋ ಶಕ್ತಿಯಿಂದ ಉದ್ದ ಬಳ್ಳಿಯಾಗಿ ಹಬ್ಬುವ ಬಸಳೆಯನ್ನಾಗಿ ಪರಿವರ್ತಿಸಿಕೋಟ್ಟು, ತನ್ನ ಸೃಷ್ಟಿಯ ಜಮೀನಿನಲ್ಲಿ ಎಲ್ಲಿ ಬೇಕಾದರಲ್ಲಿ ಬೆಳೆಸಿ ಜೀವನ ನಿರ್ವಹಿಸಿ ಎಂಬುದಾಗಿ ವರ ಕೊಟ್ಟ ಎಂಬುದಾಗಿ ಸಾರಸ್ವತರ ಕೆಲವು ಹಿರಿಯರ ಅಂಬೋಣ. ಪೋರ್ಚುಗೀಸರ ಮತಾಂತರಕ್ಕೆ ಹೆದರಿ ಕೆಲವು ಸಾರಸ್ವತರು ಉಡುಪಿ, ಕಾರ್ಕಳ, ಮಂಗಳೂರು, ಸುಳ್ಯ, ಪುತ್ತೂರು ಕಡೆ ವಲಸೆ ಹೋಗುವಾಗ ತಮ್ಮೊಟ್ಟಿಗೆ ಈ ಬಸಳೆ ಬಳ್ಳಿಗಳನ್ನು ಒಯ್ದು ತಾವು ನೆಲೆ ನಿಂತಲ್ಲೆಲ್ಲಾ ಬಸಳೆ ನೆಟ್ಟು ಬೆಳೆಸಿ ಇಂದಿಗೂ ಉಳಿಸಿದ್ದು ನಮ್ಮೆಲ್ಲರಿಗೂ ತಿಳಿದ ವಿಷಯವೆ. ಬಸಳೆ ಬೆಳೆಸಿ ಅದನ್ನು ಮಾರಿ, ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಡಾಕ್ಟರ್, ನರ್ಸಿಂಗ್, ಇಂಜಿನೀಯರಿಂಗ್ ಕಲಿಸಿದ ಕೀರ್ತಿ ಕೆಲವು ಸಾರಸ್ವತರ ಹಿರಿಯಮ್ಮರುಗಳಿಗೆ ಸಲ್ಲುತ್ತದೆ. ಆತ್ರಾಡಿ, ಹಿರಿಯಡ್ಕ, ಪರ್ಕಳ, ಪಟ್ಲ ಹಾಗೂ ಇನ್ನೂ ಹಲವಾರು ಕಡೆಗಳಲ್ಲಿ ಬಸಳೆ ಬೆಳೆದೇ ಜನ ತಮ್ಮ ಕಾಲಮೇಲೆ ನಿಂತು ಇತರರಿಗೂ ಮಾದರಿಯಾಗಿದ್ದಾರೆ. ತಮ್ಮಲ್ಲಿರುವ ವಡವೆಗಳ ಹಿಂದೆಯೂ ಈ ಬಸಳೆಯ ಅನುಗ್ರಹವೇ ಕಾರಣ ಅಂತಾರೆ ಕೆಲವು ಅಜ್ಜಮ್ಮಗಳು!

ಬಸಳೆ ಒಂದು ಲಾಭದಾಯಕ ಹಾಗೂ ಆರೋಗ್ಯಕ್ಕೆ ಹಿತಕರವಾದ ಸೊಪ್ಪು ತರಕಾರಿ. ಹಳ್ಳಿಗಳಲ್ಲಿ ಇದು ಸಾಮಾನ್ಯವಾಗಿ ಸಿಕ್ಕರೂ ಪೇಟೆಗಳಲ್ಲಿ ವಿರಳ. ಹಾಗಾಗಿ ಪೇಟೆಗಳಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. ಬಸಳೆಯ ಸೇವನೆಯಿಂದ ನಮ್ಮ ದೇಹದ ಜೀರ್ಣ ಕ್ರಿಯೆ ಸುಗಮಗೊಂಡು ದೇಹವನ್ನೂ ಸದೃಡಗೊಳಿಸುತ್ತದೆ. ಬಸಳೆಯನ್ನು ಉಪ ಅಥವಾ ಮಿಶ್ರ ಬೆಳೆಯಾಗಿಯೂ ಮಾಡಬಹುದು. ಸ್ಥಳೀಯ ಮಾರುಕಟ್ಟೆಗಳಲ್ಲಿ ನಾಲ್ಕು ಕುಡಿಗಳ ಬಸಳೆಯ ಕಟ್ಟೊಂದಕ್ಕೆ ಸುಮಾರು ಇಪ್ಪತ್ತು ರೂಪಾಯಿಗಳಿಂದ ಇಪ್ಪತ್ತೈದು ರೂಪಾಯಿ ಬೆಲೆ ಇರುತ್ತದೆ.

ಬಸಳೆ ಬಳ್ಳಿಯಂತೆ ಹಬ್ಬಿ ಬೆಳೆಯುವ ಸೊಪ್ಪು ತರಕಾರಿಯಾಗಿದ್ದು, ಇದರ ಎಲೆ, ಬಳ್ಳಿ ಎಲ್ಲವನ್ನು ಪದಾರ್ಥ ಮಾಡಲು ಬಳಸುತ್ತಾರೆ. ಬಸಳೆಯಲ್ಲಿ ವಿವಿಧ ರೀತಿಯ ಪೌಷ್ಟಿಕಾಂಶಗಳನ್ನು ಹೇರಳವಾಗಿ ಹೊಂದಿದೆ. ಬಸಳೆಯಲ್ಲಿ ರೇಡಿಯೇಶನ್ ತಡೆಯುವ ಗುಣವಿದ್ದು ನ್ಯೂಕ್ಲಿಯರ್ ಪ್ಲಾಂಟ್ ಇರುವಲ್ಲಿ ಹೇರಳವಾಗಿ ಬಸಳೆ ಬೆಳೆದರೆ ರೇಡಿಯೇಶನ್ ನಿಂದ ಪಾರಾಗಬಹುದು ಎಂಬ ಸಲಹೆ ಕೂಡ ಹಿಂದೊಮ್ಮೆ ನಿಯತಕಾಲಿಕಗಳಲ್ಲಿ ಪ್ರಕತವಾಗಿದ್ದುದು ಇಲ್ಲಿ ಸ್ಮರಿಸಬಹುದು.

ಬಸಳೆಧಿಯಲ್ಲಿ ಹೇರಳವಾಗಿ ಔಷಧಿಧೀಯ ಗುಣವಿದೆ. ಬಸಳೆಯ ಸೇವನೆ ಯಿಂದ ರೋಗ ನಿರೋಧಕ ಗುಣ ವೃದ್ಧಿಸುತ್ತದೆ. ಇದರ ದಂಟನ್ನು ಜಗಿಯುವುದರಿಂದ ಬಾಯಿ ಹುಣ್ಣು, ಮಲಬದ್ಧತೆ ಕಡಿಮೆ ಯಾಗುವುದು. ಬಸಳೆಯ ಎಲೆಗಳಿಂದ ದೇಹಕ್ಕೆ ಅಗತ್ಯವಾದ ಪತ್ರಹರಿತ್ತು ಅಂಶ ಲಭಿಸುವುದು. ಅಲ್ಸರ್ ನಂತಹ ಕರುಳು ವ್ಯಾಧಿ ಬಸಳೆ ಸೇವನೆ ದೂರ ಇಡುತ್ತದೆ.

ಬಸಳೆ ಬಳಸಿ ಬಹು ವಿಧದ ಅಡುಗೆಗಳನ್ನು ತಯಾರಿಸುತ್ತಾರೆ. ಪಚ್ಚೆ ಹೆಸರು, ಹಲಸಿನ ಬೀಜ, ಹುರುಳಿ, ಅಲಸಂಡೆ ಕಾಳು, ತೊಗರಿ ಬೇಳೆ ಇತ್ಯಾದಿಗಳನ್ನು ಬಳಸಿ ಸಾಂಬಾರು ಹಾಗೂ ಬೇರೆ ಬೇರೆ ಪದಾರ್ಥಗಳನ್ನು ಸಿದ್ದಪಡಿಸಲಾಗುತ್ತದೆ. ಹಸಿ ಪಪ್ಪಾಯಿ, ಎಳೆ ಬಾಳೆ ದಿಂಡು ಹಾಕಿ ಗಸಿ ಮಾಡಿದರೆ ಅದರ ರುಚಿ ತಿಂದವರಿಗೆ ಗೊತ್ತು.

ಬಸಳೆ ಬೆಳೆ ಒಂದು ಲಾಭದಾಯಕ ಉಪ ಕೃಷಿ. ಇದನ್ನು ಬೆಳೆಯಲು ಎಕರೆ ಗಟ್ಟಲೆ ಜಾಗದ ಅವಶ್ಯವಿಲ್ಲ. ಮನೆ ಅಂಗಳ, ಗದ್ದೆ, ತೋಟ ಹಿತ್ತಿಲು ಹೀಗೆ ಎಲ್ಲಿ ಬೇಕಾದರಲ್ಲಿ ಬಸಳೆ ಬೆಳೆಯಬಹುದು. ಪಾತ್ರೆ, ಬಟ್ಟೆ ತೊಳೆದ ನೀರು, ಬಚ್ಚಲಿನ ನೀರು ಹೋಗುವಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಬಿಸಿಲು ಬೀಳುವ ಜಾಗದ ಆಯ್ಕೆ ಮುಖ್ಯ. ನೆರಳಿನಲ್ಲಿ ನೆಟ್ಟರೆ ಹುಲುಸಾಗಿ ಬೆಳೆಯುವುದಿಲ್ಲ. ಬಸಳೆ ಕೃಷಿ ಮನೆ ಮಂದಿಯೇ ತಮ್ಮ ಬಿಡುವಿನ ವೇಳೆಯಲ್ಲಿ ಮಾಡಬಹುದಾದ ಕೃಷಿ.

ಹಿಂಗಾರು ಮಳೆ ಬಸಳೆ ನಾಟಿಗೆ ಸೂಕ್ತ ಸಮಯ. ಬಸಳೆಯನ್ನು ಬಳ್ಳಿ ನೆಡುವ ಮೂಲಕವೇ ಬೆಳೆಸಲಾಗುತ್ತದೆ ಆದ್ದರಿಂದ ನಾಟಿಗೆ ಒಳ್ಳಯ ಹಳೆಯ ಬಸಳೆ ಬಳ್ಳಿಗಳನ್ನು ಆಯ್ಕೆ ಮಾಡಬೇಕು. ಮರಳು ಮಿಶ್ರಿತ ಕೆಂಪು ಮಣ್ಣು, ಕಪ್ಪು ಅಥವ ಗೊಡ್ಡು ಮಣ್ಣಿನಲ್ಲಿ ಬಸಳೆ ಚೆನ್ನಾಗಿ ಬೆಳೆಯುತ್ತದೆ. ಬಸಳೆ ಕೃಷಿಗೆ ನೆಲವನ್ನು ಅಗೆದು ಉದ್ದನೆಯ ಗುಂಡಿಯನ್ನು ಮಾಡಿದರೆ ಉತ್ತಮ. ಯಾಕೆಂದರೆ ಅದರ ಬುಡದಲ್ಲಿ ನೀರು ನಿಂತು ಇಂಗುವುಂತಿರಬೇಕು. ಎರಡರಿಂದ ಮೂರು ಅಡಿ ಅಗಲ, ಒಂದರಿಂದ ಒಂದೂವರೆ ಅಡಿ ಆಳ ಹಾಗೂ ಐದು-ಆರು ಅಡಿ ಉದ್ದದ ಗುಂಡಿ ತಯಾರಿಸಿ, ಅದರಲ್ಲಿ ಸ್ವಲ್ಪಹುಡಿ ಗೊಬ್ಬರ, ಹಾಗೂ ಇದ್ದರೆ ಸುಡುಮಣ್ಣು ಹಾಕಿ ಸುಮಾರು ಒಂದುವರೆ ಅಡಿಯಿಂದ ಎರಡು ಅಡಿ ಅಂತರದಲ್ಲಿ ಗೂಟ ಹಾಕಿ ಬಳ್ಳಿಯನ್ನು ನಡಬೇಕು. ಒಂದೆರಡು ವಾರಗಳ ಅನಂತರ ನಾಲ್ಕರಿಂದ ಐದು ಅಡಿ ಎತ್ತರದ ಚಪ್ಪರ ನಿರ್ಮಿಸಿದರೆ ಬಳ್ಳಿ ಹಬ್ಬಲು ಸಹಕಾರಿಯಾಗುವುದು. ಚಪ್ಪರ ಹಾಕುವಾಗ ಎದುರುಗಡೆ ತಗ್ಗಾಗಿ ಹಿಂದುಗಡೆ ಎತ್ತರವಾಗಿದ್ದರೆ ಬಳ್ಳಿ ಮೇಲೇರಲು ಸಹಕಾರಿಯಾಗುತ್ತದೆ.

ಬಳ್ಳಿ ಚೆನ್ನಾಗಿ ಚಿಗುರಲಾರಂಭಿಸಿದಾಗ ಬೂದಿ, ಹಟ್ಟಿಗೊಬ್ಬರ, ಸುಡುಮಣ್ಣು ನೀಡಬೇಕು.ಸೆಗಣಿ ನೀರು ಇನ್ನೂ ಉತ್ತಮ. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ನೀರು ಸುರಿಯಬೇಕು. ಮುಂಜಾನೆ ಗಿಡದ ಮೇಲೆ ನೀರು ಚಿಮುಕಿಸಿ ಇಬ್ಬನಿ ಬಿದ್ದಿರುವುದನ್ನು ತೆಗೆಯುವುದರಿಂದ ಬಸಳೆ ರೋಗ ಮುಕ್ತ, ಸ್ವತ್ಛವಾಗಿರುತ್ತವೆ ಹಾಗೂ ಲವಲವಿಕೆಯಿಂದ ಬೆಳೆಯುತ್ತದೆ.

ಬಸಳೆ ನಾಟಿ ಮಾಡಿ ಸುಮಾರು 5 ರಿಂದ 6 ವಾರಗಳಲ್ಲಿ ಕಟಾವಿಗೆ ಬರುತ್ತದೆ. ಚಪ್ಪರದ ಮೇಲೇರುವ ಎಳತಾಗಿರುವ ಬಳ್ಳಿ ನೋಡಿ ಒಂದು ಬಿಟ್ಟು ಒಂದು ಬಳ್ಳಿಯ ರೆಂಬೆ ಕಟಾವು ಮಾಡಿ ಬಿಟ್ಟ ಬಳ್ಳಿ ಮುಂದಿನ ಸಲ ಕಟಾವು ಮಾಡುವುದು ಪದ್ಧತಿ. ಬೆಳೆದ ಬಳ್ಳಿಗಳಿಗಿಂತ ಎಳೆ ಬಳ್ಳಿ ಪಲ್ಯಕ್ಕೆ ರುಚಿ. ಕಟಾವು ಪ್ರಾರಂಭವಾದ ಮೇಲೆ ನಿರಂತರ 10 ರಿಂದ 15 ದಿನಗಳಿಗೊಮ್ಮೆ ಮಾಡಬಹುದು. ಬಿಸಿಲಿನಲ್ಲಿ ಕಟಾವು ಮಾಡಬಾರದು.

ಬಸಳೆಯನ್ನು ನಾವು ನೆಟ್ಟು ಸಾಕಿದರೆ ಅದು ನಮ್ಮನ್ನು ಸಾಕುತ್ತದೆ. ಎಲ್ಲರ ಮನೆಯ ಹಿತ್ತಲಲೊಂದು ಬಸಳೆ ಚಪ್ಪರವಿರಲಿ. ಅದು ಪರಶುರಾಮ ಸೃಷ್ಟಿಯ ಬಳ್ಳಿ ತರಕಾರಿ ಎಂಬ ಹೆಗ್ಗಳಿಕೆ ಪಡೆದು ಇದು ನಮ್ಮದೇ ತರಕಾರಿ ಎಂಬ ಪೇಟೆಂಟ್ ಪಡೆಯಲಿ ಎಂಬ ಸಂದೇಶದೊಂದಿಗೆ.


ಶ್ರೀನಿವಾಸ್ ಪ್ರಭು

ಸ್ಪೂರ್ತಿ ಬಂಟಕಲ್

No comments:

Post a Comment