Tuesday, December 24, 2013

ಅಡಿಕೆ ಕೃಷಿಕರ ಬವಣೆ




ಅಡಿಕೆ ಬೆಳೆ ನಿಷೇಧ; ಬಹುರಾಷ್ಟ್ರೀಯ ಕಂಪೆನಿಗಳ ಲಾಬಿ ?

ಅಡಿಕೆಯಲ್ಲಿ ಹಾನಿಕಾರಕ ಅಂಶವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಆರೋಗ್ಯ ಇಲಾಖೆ ಪ್ರಮಾಣಪತ್ರ ಸಲ್ಲಿಸಿದೆ ಎಂಬ ಸುದ್ದಿ ನಮಗೆಲ್ಲರಿಗೂ ತಿಳಿದ ವಿಷಯ. ನಮ್ಮ ಪೂರ್ವಜರಿಂದ ಹಿಡಿದು ಇಂದಿನವರೆಗೂ ಅಡಿಕೆಯನ್ನು ಮಲೆನಾಡು ಹಾಗೂ ಕರಾವಳಿ ಕರ್ನಾಟಕದಲ್ಲಿ ಬೆಳೆದು ಅದರಿಂದಲೇ ಜೀವನ ನಿರ್ವಹಿಸುತ್ತಿರುವ ಅನೇಕ ಕುಟುಂಬಗಳಿವೆ. ಉಟದ ನಂತರ ನಿಯಮಿತವಾಗಿ ಎಲೆಯಡಿಕೆ ಜಗಿಯುವ ಪದ್ಧತಿ ನಮ್ಮಲ್ಲಿ ಬೇರೂರಿದೆ. ಜೀರ್ಣ ಪ್ರಕ್ರಿಯೆಗೆ ಇದು ಸಹಾಯಕಾರಿ ಎಂಬ ನಂಬಿಕೆ ನಮ್ಮಲ್ಲಿದೆ. ಅಡಿಕೆ ಎಲ್ಲಾ ಧರ್ಮಗಳಲ್ಲಿಯೂ ಪವಿತ್ರ ಎಂದು ತಿಳಿಯಲಾಗಿದೆ. ಆದರೆ ಇಂದು ನಮ್ಮ ಸರಕಾರ ಯಾರದ್ದೋ ಒತ್ತಡಕ್ಕೆ ಮಣಿದು ಆರೋಗ್ಯ ಇಲಾಖೆಯ ಮೂಲಕ ಕೋರ್ಟಿಗೆ ಅಡಿಕೆ ಹಾನಿಕಾರಕ ಎಂಬ ಪ್ರಮಾಣ ಪತ್ರ ಕೊಟ್ಟಿದ್ದು ಒಂದು ವಿಪರ್ಯಾಸವೆ ಸರಿ.

ಬಹುರಾಷ್ಟ್ರೀಯ ಕಂಪೆನಿಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಅಡಿಕೆ ಬೆಳೆ ನಿಷೇಧಿಸಲು ಮುಂದಾಗಿದೆ. ಹಿಂದೊಮ್ಮೆ ಮೈಸೂರಿನ ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಅಡಿಕೆಯಲ್ಲಿ ವಿಷಕಾರಕ ಅಂಶವಿಲ್ಲ ಎಂದು ಹೇಳಿದೆ. ಆದರೂ, ಸರ್ಕಾರ ಅಡಿಕೆ ಮೇಲೆ ಕೆಂಗಣ್ಣು ಬೀರುತ್ತಿದೆ. ತಂಬಾಕಿನಲ್ಲಿ ವಿಷಕಾರಕ ಅಂಶವಿದೆ. ಆದರೆ, ಅದನ್ನೇಕೆ ನಿಷೇಧಿಸುತ್ತಿಲ್ಲ ಎಂಬ ಸುದ್ದಿ ದಿನ ಪತ್ರಿಕೆಯ ಮೂಲಕ ಸರಕಾರವನ್ನು ಎಚ್ಚರಿಸಿದ್ದರೂ ಸರಕಾರ ಮಾತ್ರ ಸುಮ್ಮನೆ ಇರುವುದನ್ನು ನೋಡಿದರೆ ಸರ್ಕಾರದ ರೈತ ವಿರೋಧಿ ಧೋರಣೆಯ ಬಗ್ಗೆ ಅನುಮಾನವೇ ಇಲ್ಲ.

ಅಡಿಕೆ ಬೆಳೆ ನಿಷೇಧ ಮಲೆನಾಡಿನ ಹಾಗೂ ಕರಾವಳಿ ಕರ್ನಾಟಕದ ರೈತರ ಭೂಮಿ ಕಬಳಿಕೆಯ ಹುನ್ನಾರವೇ? ಎಂಬ ಸಂಶಯ ಬಾರದೇ ಇರುವುದಿಲ್ಲ. ಈಗಾಗಲೇ ಬಹು ರಾಷ್ಟ್ರೀಯ ಕಂಪನಿಗಳಿಗೆ ಲಕ್ಷಾಂತರ ಎಕರೆ ಭೂಮಿ ಒದಗಿಸಲು ಸರಕಾರ ಮುಂದಾಗಿದೆ. ಇದಕ್ಕಾಗಿ ಅಲ್ಲಲ್ಲಿ ಕೃಷಿ ಭೂಮಿ ರೈತರಿಂದ ಕಸಿಯಲಾಗುತ್ತಿದೆ. ಒಂದು ಕಡೆ ಕೃಷಿ ನಾಶ, ಮತ್ತೊಂದು ಕಡೆ ರೈತರ ಭೂಮಿ ವಶ ಇದರಿಂದ ರೈತ ಇಂದು ಕಂಗಾಲಾಗಿ ಸೊರಗಿ ಹೋಗುವಂತಾಗಿದೆ. ನೆಮ್ಮದಿಯ ಜೀವನ ರೈತನ ಬಾಳಿಗಿಲ್ಲ. ದಿನ ಬೆಳಗಾದರೆ ಒಂದಲ್ಲಾ ಒಂದು ಕಹಿ ಸುದ್ದಿಯಿಂದಲೇ ದಿನದ ಆರಂಭವಾಗುತ್ತದೆ. ನಾವು ರೈತರನ್ನು ನೆಮ್ಮದಿಯಿಂದ ಬದುಕಲು ಬಿಡುವುದು ಯಾವಾಗ?

ರೈತರನ್ನುದಿನಾ ಜೀವಂತ ಸುಡುವ ಈ ವಿಧೇಯಕಗಳಿಗೆ ಧಿಕ್ಕಾರವಿರಲಿ. ಭತ್ತ ಬೆಳೆದರೆ ಕಟಾವು ಮಾಡುವ ಹೊತ್ತಿಗೆ ಬೆಲೆ ನಿಗದಿ ಮಾಡಿ ಭತ್ತ ಕೊಳ್ಳುವ ಕೇಂದ್ರಮುಚ್ಚುವುದು, ಕಬ್ಬು ಬೆಳೆದರೆ ಕಾರ್ಖಾನೆ ಮಾಲಿಕರ ದರ್ಪದಿಂದ ನಿಗದಿತ ಬೆಲೆ ದಕ್ಕದೆ ಇರುವುದು, ಅಡಿಕೆ ಅದು ಯಾವಾಗಲೂ ಮಣ್ಣಿನ ಕುದಡಿಕೆಯೇ ಸರಿ ಯಾಕೆಂದರೆ ಯಾವಾಗ ಏನಾಗುತ್ತದೆ ಎಂದು ಹೇಳಲು ಬರುವುದಿಲ್ಲ.

ಉದ್ಪಾದನೆ ಎನ್ನುವ ಮೂಲ ಅರ್ಥವನ್ನೇ ತಿಳಿಯದ ಮೂರ್ಖರು ನಮ್ಮನ್ನು ಆಳುತ್ತಿರುವರಲ್ಲವೇ? ಮುಂದೆ ತರಕಾರಿ ಮತ್ತು ಧಾನ್ಯ ಬೆಳೆದವರನ್ನು ಜೈಲಿಗೆ ತಳ್ಳುವ ವಿಧೇಯಕ ಬಂದರೂ ನಾವು ಆಶ್ಚರ್ಯ ಪಡಬೇಕಿಲ್ಲ. ಅಡಿಕೆಯನ್ನೇ ನಂಬಿದ ರೈತರ ಬುಡಕ್ಕೆ ಕೊಳ್ಳಿ ಇಡುವವರು ಏನನ್ನೂ ಮಾಡಲು ಹಿಂಜರಿಯರು. ನಿರಂತರವಾಗಿ ಶೋಷಣೆಗೆ ಒಳಗಾಗುವ ಈ ರೈತರ ಬವಣೆಯನ್ನು ಕೇಳುವವರು ಯಾರು?

No comments:

Post a Comment