Friday, September 27, 2013

ಸಂಬಂಧಗಳು - ಲಘು ಬರಹ.


ಸಂಬಂಧಗಳು – ಲಘು ಬರಹ

 
ಊರು ಬಿಟ್ಟು ಸುಮಾರು ಹದಿನೈದು ವರ್ಷಗಳ ನಂತರ ಒಮ್ಮೆ ಊರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಮನಸ್ಸಾಯಿತು. ಅಂದು ಸೋಮವಾರ. ಸೋಮವಾರ ಊರಿನ ಹೆಚ್ಚಿನ ಜನರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವುದು ರೂಢಿ. ನಾನೂ ಸಂಸಾರ ಸಮೇತನಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಊರು ಬಿಟ್ಟು ಸುಮಾರು ವರ್ಷಗಳಾಗಿದ್ದರಿಂದ, ಊರಿನ ಹೆಚ್ಚಿನ ಮಿತ್ರರು, ಪರಿಚಯಸ್ಥರು, ಹಿತೈಷಿಗಳು ದೇವಸ್ಥಾನದಲ್ಲಿ ಸಿಗಬಹುದು, ಸಿಕ್ಕರೆ ಬಾಯಿ ತುಂಬಾ ಮಾತನಾಡಿ ಖುಷಿ ಪಡಬೇಕು ಎಂಬ ಆಸೆಯನ್ನು ಹೊತ್ತಿದ್ದೆ.

ಉಡುಪಿಯಿಂದ ಸುಮಾರು ಹದಿನಾಲ್ಕು ಹದಿನೈದು ಕಿಲೋಮೀಟರು ದೂರದಲ್ಲಿದೆ ನನ್ನ ಹುಟ್ಟೂರು. ಉಡುಪಿ, ಉದ್ಯಾವರ, ಕಟಪಾಡಿ, ಸುಭಾಸ್ ನಗರ, ಶಂಕರಪುರ ರಸ್ತೆ ಯಲ್ಲಿ ಚಲಿಸಿದರೆ ಮುಂದೆ ಸಿಗುವುದು ಬಂಟಕಲ್ಲು. ಇಲ್ಲಿಂದ ನನ್ನೂರ ಹೇರೂರು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು ಒಂದು ಕಿಲೋಮೀಟರು ದೂರ. ಇದನ್ನು ಸುಮಾರು ಅರ್ಥ ತಾಸಿನಲ್ಲಿ ಕ್ರಮಿಸಿ ದೇವಸ್ಥಾನದ ಬಳಿ ಗಾಡಿ ನಿಲ್ಲಿಸಿ ಒಮ್ಮೆ ಸುತ್ತಲೂ ನೋಡಿದೆ. ಎಲ್ಲಾ ಬದಲಾವಣೆ. ಸುತ್ತ ಮುತ್ತ ದೊಡ್ಡ ದೊಡ್ಡ ಮನೆಗಳು ಎದ್ದು ನಿಂತಿವೆ. ಮಂಗಗಳೇ ಇಲ್ಲದ ಈ ಪರಿಸರದಲ್ಲಿ ಈಗ ಮಂಗಗಳು ತುಂಬಿ ಹೋಗಿವೆ. ದೇವಸ್ಥಾನದಲ್ಲಿ ಹೊಸ ಚಂದ್ರಶಾಲೆಯ ನಿರ್ಮಾಣವಾಗಿದೆ.ದೇವಸ್ಥಾನದ ಹಿಂದೆ ಅರ್ಚಕರಿಗೊಂದು ಮನೆಯ ನಿರ್ಮಾಣವೂ ಆಗಿದೆ. ಈ ಎಲ್ಲಾ ಅಭಿವೃದ್ಧಿ ಕಂಡು ಮನಸ್ಸಿಗೆ ತೃಪ್ತಿಯಾಯಿತು.

 ಸುಮಾರು ವರ್ಷಗಳ ನಂತರ ಊರಿನತ್ತ ಹೋಗುತ್ತಿದ್ದುದರಿಂದ, ಮನದೊಳಗೆ ಎನೋ ಉಲ್ಲಾಸ, ಉತ್ಸಾಹ ತುಂಬಿತ್ತು. ದೇವಸ್ಥಾನದಲ್ಲಿ ಯಾರು ಸಿಗಬಹುದು? ಮೇಲ್ಮನೆಯ ಕಾಮತರೇ? ಸೀನ ದೇವಾದಡಿಗರೇ? ರಾಘವ ಆಚಾರ್ಯರೇ? ಅಥವಾ ದೇವದಾಸರೇ?. ಬಂಟಕಲ್ಲಿನ ರಮೇಶ ಆಚಾರ್ಯರು ಬೆಂಗಳೂರಿಗೆ ಹೋಗಿ ಹಲವಾರು ವರ್ಷಗಳಾಗಿವೆ. ಒಂದುವೇಳೆ ಅವರು ಊರಿಗೆ ಬಂದಿದ್ದರೆ ಅವರೂ ಸಿಗಬಹುದಲ್ಲವೇ?. ಶಾಂತಕ್ಕ, ಕಮಲಕ್ಕ, ಕೂಸಕ್ಕ ಗುಲಾಬಿಯವರೂ ಬಂದಿರಬಹುದೇ?. ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ, ಆಗಿನ್ನೂ ಚಿಕ್ಕ ಚಿಕ್ಕ ಪುಟಾಣಿಳಾಗಿದ್ದ ಅರುಣ, ದಿನೇಶ, ಉಮೇಶ, ಗಣೇಶ, ಕವಿತಾ, ಸುನೀತಾ, ಉಷ, ದಿವ್ಯಾರವರು ಈಗ ಎಷ್ಟು ದೊಡ್ದವರಾಗಿರಬಹುದು? ಅವರಿಗೆ ನನ್ನ ಪರಿಚಯವಾಗಬಹುದೇ? ನನ್ನ ಹೆಸರು ನೆನಪಿರಬಹುದೇ? ಹೀಗೆ ಹಲವಾರು ಕಾತರದ ಪ್ರಶ್ನೆಗಳನ್ನ ಹೊತ್ತು ದೇವಸ್ಥಾನದೊಳಗೆ  ಬಲ ಕಾಲನಿಟ್ಟು ಒಳಗೆ ಪ್ರವೇಶಿಸಿದೆ.

ದೇವಸ್ಥಾನದೊಳಗೆ ಊಹಿಸಿದಷ್ಟು ಜನರಿರಲಿಲ್ಲ. ಗಂಡಸರು, ಹೆಂಗಸರು, ಪ್ರಾಯದವರು, ಹುಡುಗಿಯರು, ಮಕ್ಕಳು ಒಂದಷ್ಟು ಜನ ತಮ್ಮಷ್ಟಕ್ಕೆ ತಾವೇ ದೇವರಿಗೆ ಪ್ರದಕ್ಷಿಣೆ ಬಂದು ತೀರ್ಥ ಪ್ರಸಾಧ ಪಡೆಯುತ್ತಿದ್ದರು. ನಾವೂ ಆಟಿ ತಿಂಗಳಲ್ಲಿ ಬರುವ ಆಟಿ ಕಳಂಜನಂತೆ ದೇವರ ಗುಡಿಗೆ ಪ್ರದಕ್ಷಿಣೆ ಬರಲು ಮುಂದೆ ಸಾಗಿದೆವು. ಮಹಾಲಿಂಗೇಶ್ವರ ದೇವಸ್ಥಾನ ಅಂದರೆ ಅಲ್ಲಿ ಪೂರ್ಣ ಪ್ರದಕ್ಷಣೆ ಬರುವುದಿಲ್ಲ. ಹಾಗಾಗಿ ಪ್ರದಕ್ಷಿಣೆ ಬರುವವರೆಲ್ಲಾ ಎದುರು ಬದುರು ಸಿಗುವುದು ಸಾಮಾನ್ಯ. ಒಂದು ಲೆಕ್ಕದಲ್ಲಿ ನಮ್ಮೊಟ್ಟಿಗೆ ಯಾರು ಯಾರು ಪ್ರದಕ್ಷಿಣೆ ಬರುತ್ತಿದ್ದಾರೆ ಅಂತ ಸುಲಭವಾಗಿ ತಿಳಿಯುತ್ತದೆ. ನಮ್ಮ ಎದುರಿನಲ್ಲಿ ಸುಮಾರು ಏಳೆಂಟು ಹದಿಹರೆಯದ ಹುಡುಗಿಯರ ದಂಡು, ಅದರ ಹಿಂದೆ ನಾವು, ನಮ್ಮ ಹಿಂದೆ ಇನ್ನೂ ಹತ್ತಾರು ಮಂದಿ. ಹೀಗೆ ಸಾಗಿತ್ತು ನಮ್ಮ ಪ್ರದಕ್ಷಿಣಾ ಸರದಿ. ಇದ್ದಕ್ಕಿದ್ದಂತೆ ನನಗೆ ಎದುರಿನಲ್ಲಿದ್ದ ಈ ಹೆಣ್ಣು ಮಕ್ಕಳತ್ತ ಗಮನ ಹರಿಯಿತು.ಯಾರಿರಬಹುದಿವರು? ನಮ್ಮೂರಿನವರೇ ಅಥವಾ ಹೊರಗಿನವರೇ? ಎಂಬ ಕಾತರ ಒಂದೆಡೆಯಾದರೆ, ನನಗೆ ಯಾರದ್ದೇ ಪರಿಚಯವಾಗುವುದಿಲ್ಲವಲ್ಲ? ಎಂಬ ತಳಮಳ ಇನ್ನೊಂದೆಡೆ. ಮತ್ತೆ ಸರಿಯಾಗಿ ದಿಟ್ಟಿಸಿ ನೋಡಿದೆ. ಟ್ಯೂಬ್ ಲೈಟ್ ಪುಕ್ ಪುಕ್ ಅನ್ನುವಂತೆ ಒಂದಿಬ್ಬರನ್ನು ಎಲ್ಲಿಯೋ ನೋಡಿದಹಾಗೆ, ಮರೆಯಾದ ನೆನಪುಗಳು  ಕಣ್ಣು ಮಯ ಮಯ ಅನ್ನುವಂತೆ, ಮೆದುಳಿನ ಸರ್ಕ್ಯುಟ್ನಲ್ಲಿ ಇನ್ನೂ ಸರಿಯಾಗಿ ಹರಿದು ಜ್ಞಾಪನ ವಲಯಕ್ಕೆ ಸರಿಯಾದ ಸಂದೇಶ ಯಾಕೋ ಕೊಡುತ್ತಿರಲಿಲ್ಲ. ಹಾಗಾಗಿ ಅವರು ಯಾರೆಂದು ಸರಿಯಾಗಿ ಗೊತ್ತಾಗಲೇ ಇಲ್ಲ. ಪ್ರದಕ್ಷಣೆ ಹೀಗೆ ಮುಂದುವರಿಯಲು, ಈ ಲಲನಾ ಮಣಿಗಳ ತಂಡ ಮತ್ತೆ ಮತ್ತೆ ನನ್ನನ್ನು ತಿರುಗಿ ತಿರುಗಿ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ಎರಡನೆಯ ಸುತ್ತಿನಲ್ಲಿ ನಸು ನಗೆ ಬೀರಲಾರಂಭಿಸಿದರು. ನನಗೆ ಅರಿವಿಲ್ಲದಂತೆ ನನ್ನ ತುಟಿಯಿಂದಲೂ ಮುಲಾಜಿಲ್ಲದೆ ಪುಕ್ಕಟೆಯಾಗಿ ಒಂದು ಬೆದರು ನಗೆ ಹೊರ ಹೊಮ್ಮಿತು. ಈ ಹೊರ ಹೊಮ್ಮಿದ ಹುಲು-ನಗೆ ನನ್ನ ಧರ್ಮ ಪತ್ನಿಯ ಮೂಗಿನ ನೇರ ಅರ್ಜುನನ ಶಬ್ಧವೇದಿ ಬಿಲ್ಲಿನಿಂದ ಹೊರಟ ಬಾಣದಂತೆ ಕಣ್ಣು ಕುಕ್ಕಿಸಿ ಹಾದು ಹೋದಂತಾಯಿತು. ಪಾಪ ಅವಳ ಗಂಟಲು ಒಣಗಿರಬೇಕು ಒಂದೆರಡು ಒಣ ಕೆಮ್ಮು ಹೊರಬಂತು. ಈ ಕೆಮ್ಮಿನ ಶಬ್ದ ನನಗೆ ಮಾತ್ರ ಹನ್ನೆರಡು ಓಲ್ಟಿನ ಕರೆಂಟು ಇನ್ನೂರ ಇಪ್ಪತ್ತು ಓಲ್ಟಿನ ಟ್ರಾನ್ಸ್ ಫಾರ್ಮರ್ ಮೊಲಕ ಹಾದು ಎರಡು ಸಾವಿರ ಡೆಸಿಬಲ್ ಶಬ್ಧದ ಧ್ವನಿಯಾಗಿ ಮಾರ್ಪಟ್ಟು ನನ್ನ ಕಿವಿ ತಮಟೆಗೆ ಭಾರಿಸಿದಂತಾಯಿತು!

ಮೂರನೇಯ ಸುತ್ತಿನಲ್ಲಿ ಈ ಹೆಂಗಳೆಯರ ಗುಸು-ಗುಸು ಜೋರಾಯಿತು. ನಾನು ಇವರು ಎದುರು ಬದಾಗಲೆಲ್ಲಾ ಕಣ್ಣು ಮುಚ್ಚಿ ಮನಸ್ಸಿನಲ್ಲಿಯೇ ಶಿವ ಪಂಚಾಕ್ಷರಿಯ ಜಪ ಮಾಡುತ್ತಿದ್ದೆ. ನಾವು ಐದು ಸುತ್ತು ಬರುವವರೆಗೂ ಎದುರು ಸಿಕ್ಕಾಗಲೆಲ್ಲಾ ಇವರು ನನ್ನ ನೋಡಿ ನಗುತ್ತಲೇ ಇದ್ದರು! ಪ್ರದಕ್ಷಿಣೆ ಪೂರ್ಣಗೊಳಿಸಿ, ದೇವರ ಎದುರು ನಿಂತು ಶಿವ ಶಿವಾ ಕಾಪಾಡಪ್ಪಾ ಅಂತ ಕಣ್ಣು ಮುಚ್ಚಿ ಒಂದು ಕ್ಷಣ ಮೌನ ಪ್ರಾರ್ಥನೆ ಸಲ್ಲಿಸಿದೆ. ಭಟ್ರ ಮುಖವನ್ನೂ ನೋಡದೆ ತೀರ್ಥ ಪ್ರಸಾದ ತೆಗೆದುಕೊಂಡು, ಬಂದ ವಿಘ್ನಗಳನ್ನು ದೂರ ಮಾಡಲು ಗಣನಾಯಕನಿಗೆ ಹೇಳಪ್ಪಾ ಶಿವ ಶಿವಾ ಅಂತ ಕಿಸೆಗೆ ಕೈ ಹಾಗಿ ಸಿಕ್ಕಿದ್ದಷ್ಟು ನಗದು ನಾಣ್ಯಗಳನ್ನು ಆ ಪರ ಶಿವನ ಹುಂಡಿಗೆ ಹಾಕಿ ಕಣ್ಣು ಬಿಟ್ಟು ಪತ್ನಿಯ ಮುಖವನ್ನೊಮ್ಮೆ ನೋಡಿದೆ. ಹರ ಹರಾ.. ಮುಖ ಕೆಂಪೇರಿತ್ತು. ಮನೆಗೆ ಬನ್ನಿ ಕಲಿಸುತ್ತೇನೆ ಅಂತ ಅವಳೆರಡು ಕಣ್ಣುಗಳು ಹೇಳುತ್ತಿದ್ದುದು ತಿಳಿಯಲು ನನಗೇನೂ ಸಮಯ ಹಿಡಿಯಲಿಲ್ಲ!

ತಿರ್ಥ ಪ್ರಸಧದ ನಂತರ ದೇವಸ್ಥಾನದ ಎದುರಿನ ಪೌಳಿಯಲ್ಲಿ ಸ್ವಲ್ಪ ಹೊತ್ತು ಕುಳಿತೆವು. ನನ್ನ ಹೃದಯ ಆ ಪರ ಶಿವ ಢಮರು ಬಾರಿಸಿ ಶಿವ ತಾಂಡವ ನೃತ್ಯ ಮಾಡುವಂತೆ ಕಂಪಿಸುತ್ತಿತ್ತು. ಆಗ ಆ ಗುಂಪಿನಿಂದ ಒಬ್ಬಳು ಎದ್ದು ಬಂದು, ನೀವು ಶ್ರೀನಿವಾಸ ಅಣ್ಣ ಅಲ್ವಾ? ಅಂತ ಕೇಳಿಯೇ ಬಿಟ್ಟಳು. ಇದ ಕೇಳಿ ನನ್ನ ಹೃದಯದಲ್ಲಿ ಶಿವನ ಢಮರು ಬಡಿತ ಸ್ವಲ್ಪ ಮಟ್ಟಿಗೆ ನಿಂತಂತಾಯಿತು. ಬದುಕಿಸಿದೆಯ ಶಿವ ಅಂತ ನಿಟ್ಟುಸಿರೊಂದು  ನನಗೆ ಅರಿವಿಲ್ಲದಂತೆ ಬಸ್ಸಿನ ಬ್ರೇಕ್ ಸಿಲಿಂಡರಿನಿಂದ ವಾಲ್ವ್ ಮೂಲಕ ರಿಲೀಸ್ ಆದ ಗಾಳಿಯಂತೆ ಟುಸ್ ಸ್ ಸ್ ... ಅಂತ ಹೊರ ಬಂತು. ಹೌದು ನೀವು ಯಾರು? ಎಂದು ಮರು ಪ್ರಶ್ನೆ ಹಾಕಿದೆ. ನನ್ನ ಗುರ್ತ ಆಗಲಿಲ್ಲವಾ? ಗೆಸ್ ಮಾಡಿ ನೋಡುವಾ ಅಂತ ಮರು ಸವಾಲು ಹಾಕಿ, ಇವರೋಟ್ಟಿಗಿದ್ದವರೆಲ್ಲರೂ ಬಂದು  ಕೋರಸ್ ಹಾಡಿದ್ರು. ನಾನೇನೂ ಕಮ್ಮಿಯಾ? ಕವಿತಾ, ಸುನೀತ, ಕಾವ್ಯ, ಆಶಾ, ಉಷಾ ಎಲ್ಲರ ಗುರ್ತ ನನಗಿದೆ. ನೀವು ನನಗೆ ಮಂಗ ಮಾಡುವುದು ಬೇಡ ಅವರ ಅಪ್ಪಂದಿರ ನೆನಪೂ ಇದೆ ಕಾಮತರು, ಸೀನಣ್ಣ, ರಾಘಣ್ಣ, ಗೋಪಾಲಣ್ಣ, ರಮೇಶಣ್ಣ ..... ಅನ್ನುವಷ್ಟರಲ್ಲಿ... ಭಲೇ ನೀವೇ! ನಿಮಗಿನ್ನೂ ಮರೆತಿಲ್ವಾ? ನಾನೇ ಕಾಮತರ  ಮಗಳು ಎಂದು ಹುಬ್ಬೇರಿಸಿದಳು ಕಾವ್ಯ. ಹೌದು ಸುಮಾರು ಹದಿನೈದು ವರ್ಷಗಳ ಹಿಂದೆ, ನಾನು ನನ್ನ ಆಟೋದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಪುಟ್ಟ ತುಂಟಿಯರೇ ಈ ಹುಡುಗಿಯರು. ಬನ್ನಿಯೇ ನಮ್ಮ ಮನೆಗೆ ಹೋಗೋಣ. ಅಪ್ಪ ಅಮ್ಮ ನಿಮ್ಮ ಬಗ್ಗೆ ಯಾವಾಗಲೂ ಮಾತನಾಡ್ತಾ ಇರ್ತಾರೆ ಅಂತ ಒಬ್ಬಳು ಹೇಳಿದರೆ ದುಬೈನಿಂದ ಬರುವಾಗ ನಮಗೆ ಏನು ತಂದಿದ್ದೀರಿ ಅಂತ ಇನ್ನೊಬ್ಬಳು. ಹೀಗೆ ನಡೆದಿತ್ತು ಮಾತುಕತೆ.......

ಸಂಬಂಧಗಳು ಅಂದರೆ ಹೀಗೆ ಅಲ್ಲವೇ?

 

 

1 comment:

  1. ಅರೆರೆ ಅದೆಷ್ಟು ಬೇಗ ಬೆಳೆದು ಬಿಡುತ್ತಾರೆ ಅಲ್ಲವೇ ಈ ಹೆಣ್ಣು ಮಕ್ಕಳು? ಹೋಗಲಿ ದೇವಸ್ಥಾನಕ್ಕೆ ಹೋಗಿದ್ದೂ ಸಾರ್ಥಕವಾಯಿತು. ನೆನಪುಗಳನ್ನು ಕೆದಕುವ ಬರಹ.

    ReplyDelete