Sunday, July 5, 2020

ಮುಗ್ದ ಬಾಲಕನ ಭಕ್ತಿಗೊಲಿದ ಇನ್ನಂಜೆಯ ಉಂಡಾರು ಶ್ರೀ ವಿಷ್ಣುಮೂರ್ತಿ.



ಉಂಡರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಮುಗ್ದ ಬಾಲಕನ ಭಕ್ತಿಗೊಲಿದ ಇನ್ನಂಜೆಯ ಉಂಡಾರು ಶ್ರೀ ವಿಷ್ಣುಮೂರ್ತಿ.

ಇದು ಇನ್ನಂಜೆ ಗ್ರಾಮದ 700 ವರ್ಷಗಳ ಇತಿಹಾಸವಿರುವ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೂಲ ಕತೆ. ಏಳುನೂರು ವರ್ಷಗಳ ಹಿಂದೆ ಇಲ್ಲಿ ಒಂದು ಪವಾಡ ನಡೆದಿತ್ತು. ಅಂದು ಆಷಾಢ ಅಮಾವಾಸ್ಯೆ, ದೇವಸ್ಥಾನದ ಅರ್ಚಕರು ಕೆಲಸ ನಿಮಿತ್ತ ದೂರದ ಊರಿಗೆ ಹೋಗಿರುತ್ತಾರೆ, ಮಧ್ಯಾನ್ನವಾದರೂ ಹಿಂತಿರುಗಿ ಬಂದಿರುವುದಿಲ್ಲ. ನಿತ್ಯ ಪೂಜೆಯ ಅರ್ಚಕರ ಮನೆಯವರು ದೇವರ ಪೂಜೆ ಆಗದೆ ಊಟ ಮಾಡುವಂತಿರಲಿಲ್ಲ. ಅವರ ಮಗ ಬಾಲ ವಟುವಿಗೆ (ಮಾಣಿ) ತುಂಬಾ ಹಸಿವಾಗ ತೊಡಗಿ ದೇವರ ಪೂಜೆ ತಾನು ಮಾಡಿ ಬರುವೆ ಎಂದು ತಾಯಿಯ ಬಳಿ ಹೇಳುತ್ತಾನೆ. ಆಗ ತಾಯಿ ಹೇಳುತ್ತಾಳೆ; ಪೂಜೆ ಅಷ್ಟು ಸುಲಭವಿಲ್ಲ, ನೈವೇದ್ಯ ಮಾಡಿ ದೇವರಿಗೆ ಉಣಿಸಬೇಕು ಅದೆಲ್ಲ ನಿನ್ನಿಂದ ಆಗದು. ಸ್ವಲ್ಪ ತಡೆದು ಕೋ ಇನ್ನೇನು ನಿನ್ನ ಅಪ್ಪ ಬಂದು ಪೂಜೆ ಮುಗಿಸುವರು ಎಂದು ಸಮಾಧಾನ ಪಡಿಸುತ್ತಾಳೆ.ಅದರೆ ವಟು ಮಾತ್ರ ಸ್ನಾನಾದಿ ನಿಯಮಗಳನೆಲ್ಲ ಮಾಡಿಕೊಂಡು ಪೂಜೆಗೆ ತೆರಳಿ,  ನೈವೇದ್ಯ ತಯಾರು ಮಾಡಿ, ದಿನಾ ತಂದೆ ಮಾಡುತ್ತಿರುವಂತೆ ದೇವರ ವಿಗ್ರಹಕ್ಕೆ ಅರ್ಘ್ಯಪಾದ್ಯ ಆಚಮನ ಪರಿಕರಗಳಿಂದ ಅಭಿಷೇಕಮಾಡಿ, ಶುದ್ದ ವಸ್ತ್ರ ಉಡಿಸಿ, ಹೂವಿನ ಅಲಂಕಾರಮಾಡಿ, ದೇವರ ಎದುರು ನೈವೇದ್ಯ ಇಟ್ಟು ದೇವರಲ್ಲಿ ಉಣಲು ನಿವೇದನೆ ಮಾಡುತ್ತಾನೆ. ವಾಡಿಕೆಯಂತೆ ತುಳುವಿನಲ್ಲಿ "ಉಣ್ಲೆ ದೇವರೆ" (ಊಟ ಮಾಡಿ ದೇವರೇ) ಎನ್ನುತ್ತಾನೆ.ಅದರೆ ನೈವೇದ್ಯ ಹಾಗೆ ಇರುತ್ತದೆ. ನನ್ನ ಅಪ್ಪ ಹೇಗೆ ಉಣಿಸುತ್ತಿದ್ದಾರೋ ನನಗೆ ಗೊತ್ತಿಲ್ಲ , (ಅಪಯೇರ್ ಎಂಚ ಉಣ್ಪಾವೇರ್ ಪಂಡ್ದ್ ಎಂಕ್ ಗೊತ್ತುಜ್ಜಿ " ಬೇಗ ಉಣ್ಲೆ") ಎಂದು ಪರಿಪರಿಯಾಗಿ ನಿವೇದಿಸಿದರೂ ನೈವೇದ್ಯ ಹಾಗೆ ಇರುತ್ತದೆ. ಮಾಣಿಗೆ ದುಃಖ ಬರುತ್ತದೆ. ಕೊನೆಗೆ ಯೋಚಿಸಿ, ದೇವರಿಗೆ ಪಲ್ಯ ಇಲ್ಲದೆ ಊಟ ಸೇರುತ್ತಿಲ್ಲ ಕಾಣುತ್ತೆ ಎಂದು ಮನೆಗೆ ತೆರಳಿ ತನ್ನ ತಾಯಿಗೆ ತಿಳಿಯದಂತೆ ಮನೆಯಲ್ಲಿ ತಯಾರಿಸಿಟ್ಟ ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ ಚಟ್ನಿ (ಕುಕ್ಕುದ ಚಟ್ನಿ) - ವ್ರತ ಊಟದಲ್ಲಿ ಹುಣಸೆ ಹುಳಿಯ ಬದಲಿಗೆ ಉಪಯೋಗಿಸುವ ಹುಳಿ, ತಂದಿಟ್ಟು ಮತ್ತೆ ದೇವರೇ ಉಣ್ಲೇ (ಊಟ ಮಾಡಿ) ಎಂದು ನಿವೇದಿಸುತ್ತಾ ನಿವೇದಿಸುತ್ತಾ ಅಲ್ಲೇ ನಿದ್ರೆಗೆ ಜಾರುತ್ತಾನೆ. ಎಚ್ಚರವಾಗುವಾಗ ನ್ಯೆವೇದ್ಯ ಕುಕ್ಕುದ ಚಟ್ನಿ ಎಲ್ಲವೂ ಖಾಲಿಯಾಗಿರುತ್ತದೆ. ಮಾಣಿಗೆ ಖುಷಿಯಾಗಿ "ದೇವೆರ್ ಉಂಡೆರ್ (ದೇವರು ಊಟ ಮಾಡಿದರು) ಅಮ್ಮಾ ನನಗೆ ಊಟ ಬಡಿಸು " ಎಂದು ಓಡೋಡಿ ಬಂದು ತಾಯಿಯ ಬಳಿ ಹೇಳುತ್ತಾನೆ. ಆದರೆ ತಾಯಿ ನಂಬುವುದಿಲ್ಲ.
ಅಗಷ್ಟೆ ಮನೆಗೆ ಹಿಂತಿರುಗಿ ಬಂದ ತಂದೆಗೂ ವಿಷಯ ತಿಳಿಯುತ್ತದೆ. ಮಗ ಸುಳ್ಳು ಹೇಳುತ್ತಿದ್ದಾನೆ ಎಂದು ತಂದೆಗೆ ಮಗನ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತದೆ; " ಏಯ್ ದೇವರು ಎಂದಾದರೂ ನೈವೇದ್ಯ ಉಣ್ಣುತ್ತಾರೆಯೇ? ಹಸಿವು ಹಸಿವು ಅಂತ ಹೇಳಿ ನೀನೇ ತಿಂದು , ದೇವಾಲಯವನ್ನು ಅಪವಿತ್ರ ಮಾಡಿದ್ದಲ್ಲದೆ ಸುಳ್ಳು ಬೇರೆ ಹೇಳುತ್ತೀಯಾ?" ಎಂದು ಬೆತ್ತ ಹಿಡಿದು ಗದರಿಸುವಾಗ, ದೇವರ ಅಶರೀರವಾಣಿ ಕೇಳಿತಂತೆ " ಮಗುವಿಗೆ ಹೊಡೆಯಬೇಡ ; ಅವನ ಮುಗ್ಧ ಭಕ್ತಿಗೆ ಮೆಚ್ಚಿ ನಾನು ಉಣದೆ ಇರಲು ಸಾಧ್ಯವಾಗಲಿಲ್ಲ ,ನಾನು ಎಲ್ಲವನ್ನೂ ಉಂಡೆ". ಹೀಗೆ ಬಾಲವಟುವಿನ ಮುಗ್ದ ಭಕ್ತಿಗೆ ಮೆಚ್ಚಿ ಉಂಡ ದೇವರ ಊರಿಗೆ ವಿಶೇಷಣ ಸೇರಿ " ಉಂಡಾರು" ಎಂಬ ಹೆಸರು ಬಂದಿದೆ.
ಶ್ರೀನಿವಾಸ್ ಪ್ರಭು.
(ಸ್ಪೂರ್ತಿ) ಬಂಟಕಲ್ಲು
ಉಡುಪಿ.
8762924232